ಲಕ್ನೋ: ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಕಾನ್ಪುರ ನಗರದಲ್ಲಿ ಹದಗೆಡುತ್ತಿರುವ ರಸ್ತೆಗಳ ಪರಿಸ್ಥಿತಿಯ ವಿರುದ್ಧ ಸಾಂಕೇತಿಕ ಪ್ರತಿಭಟನೆ ದಾಖಲಿಸಲು ಸಮಾಜವಾದಿ ಪಕ್ಷದ ಶಾಸಕ ಹಸನ್ ರೂಮಿ ಅವರು ಕಾನ್ಪುರದ ಜಜ್ಮಾವು ಪ್ರದೇಶದಲ್ಲಿ ರಸ್ತೆಯಲ್ಲಿ ಉಂಟಾದ 18 ಅಡಿ ಆಳದ ಹೊಂಡಕ್ಕೆ ಇಳಿದಿರುವ ಘಟನೆ ಗುರುವಾರ ನಡೆದಿದೆ.
ಮಂಗಳವಾರ ಮತ್ತು ಬುಧವಾರ ನಿರಂತರವಾಗಿ ಸುರಿದ ಮಳೆಯಿಂದಾಗಿ 5 ಮೀಟರ್ ಅಗಲವಿರುವ ವಿಐಪಿ ರಸ್ತೆಯ ಭಾಗವೊಂದು ಕುಸಿದು ಬಿದ್ದು, ಸರಿಸುಮಾರು 18 ಅಡಿ ಆಳದ ಬೃಹತ್ ಹೊಂಡ ನಿರ್ಮಾಣವಾಗಿದೆ.
ರಸ್ತೆಯ ಮೇಲಿನ ಮಳೆ ನೀರು ನೇರವಾಗಿ ಬೃಹತ್ ಹೊಂಡಕ್ಕೆ ಧುಮ್ಮಿಕ್ಕುತ್ತಿರುವ ವಿಡಿಯೊ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರಿಂದಾಗಿ, ರಸ್ತೆಯ ಮಧ‍್ಯೆಯೇ ಬಹುತೇಕ ಜಲಪಾತವೊಂದು ನಿರ್ಮಾಣವಾಗಿದೆ.
ನಗರದ ರಸ್ತೆಗಳ ಪರಿಸ್ಥಿತಿ ಹದಗೆಡುತ್ತಿರುವ ಸುದ್ದಿಯನ್ನು ತಿಳಿದ ಕ್ಯಾಂಟ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ಹಸನ್ ರೂಮಿ ಗುರುವಾರ ಮಧ್ಯಾಹ್ನ ಸ್ಥಳಕ್ಕೆ ಧಾವಿಸಿ ಏಣಿಯ ನೆರವಿನಿಂದ ಹೊಂಡಕ್ಕೆ ಇಳಿದಿದ್ದಾರೆ.
18 ಅಡಿ ಆಳದ ಹೊಂಡದಲ್ಲಿ ಕುಳಿತುಕೊಂಡು ಹಸನ್ ರೂಮಿ ಪ್ರತಿಭಟಿಸುತ್ತಿರುವ ವಿಡಿಯೊ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಅವರ ಸುತ್ತ ಸಮಾಜವಾದಿ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ನೆರೆದಿರುವುದೂ ಈ ವಿಡಿಯೊ ದೃಶ‍್ಯಾವಳಿಯಲ್ಲಿ ಸೆರೆಯಾಗಿದೆ.
ಮಳೆ ಸುರಿಯುತ್ತಿದ್ದರೂ, ಸುಮಾರು 5 ಗಂಟೆಗಳ ಕಾಲ ಕಂದಕದಲ್ಲಿ ಪ್ರತಿಭಟಿಸುವುದನ್ನು ಹಸನ್ ರೂಮಿ ಮುಂದುವರಿಸಿದರು ಎಂದು ವರದಿಯಾಗಿದೆ. ನಗರದ ರಸ್ತೆಗಳ ಕಳಪೆ ಪರಿಸ್ಥಿತಿಯ ಕುರಿತು ಮಹಾನಗರ ಪಾಲಿಕೆಯ ಅಧಿಕಾರಿಗಳು ವಿವರಣೆ ನೀಡಬೇಕು ಎಂದೂ ಅವರು ಆಗ್ರಹಿಸಿದರು ಎನ್ನಲಾಗಿದೆ.
"ಇದು ಗಂಭೀರ ನಿರ್ಲಕ್ಷ್ಯವಾಗಿದೆ. ರಸ್ತೆ ನಿರ್ಮಾಣ ಮತ್ತು ನಿರ್ವಹಣೆಯ ಹೊಣೆ ಹೊತ್ತಿರುವ ಇಲಾಖೆಗಳು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ" ಎಂದು ಅವರು ಆರೋಪಿಸಿದರು ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಒಂದು ವೇಳೆ ನಿರ್ಲಕ್ಷ್ಯವೆಸಗಿರುವುದು ಕಂಡು ಬಂದರೆ, ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದೂ ಅವರು ಆಗ್ರಹಿಸಿದರು.

