ಲಖನೌ: ಉತ್ತರ ಪ್ರದೇಶದ ಸಹರಾನ್ಪುರ ನಗರದಲ್ಲಿದ್ದ 115 ವರ್ಷ ಹಳೆಯ ಮಸೀದಿಯೊಂದನ್ನು ನ್ಯಾಯಾಲಯದ ಆದೇಶದಂತೆ ಶನಿವಾರ ಧ್ವಂಸಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಕಲೆಕ್ಟರೇಟ್ ಸಂಕೀರ್ಣದೊಳಗಿದ್ದ ಮಸೀದಿಯನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಶನಿವಾರ ಬೆಳಿಗ್ಗೆ ಜಿಲ್ಲಾಡಳಿತ ಧ್ವಂಸಗೊಳಿಸಿದೆ.
ಕಲೆಕ್ಟರೇಟ್ ಸಂಕೀರ್ಣದ ಐದೂ ಗೇಟ್ಗಳನ್ನು ಮುಚ್ಚಲಾಗಿತ್ತು. ಹೊರಗಿನವರ ಪ್ರವೇಶವನ್ನು ನಿಷೇಧಿಸಲಾಗಿತ್ತು. ತೆರವು ಕಾರ್ಯ ನಡೆಯುವಾಗ ಕಲೆಕ್ಟರೇಟ್ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂದು ವರದಿಯಾಗಿದೆ.
ಡಂಪರ್ ಮತ್ತು ಜೆಸಿಬಿ ಯಂತ್ರಗಳು ಶುಕ್ರವಾರ ರಾತ್ರಿಯೇ ಕಲೆಕ್ಟರೇಟ್ ಆವರಣಕ್ಕೆ ಲಗ್ಗೆ ಇಟ್ಟಿದ್ದವು. ಮಸೀದಿಯು ಸರ್ಕಾರಿ ಜಾಗದಲ್ಲಿದ್ದು, ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಸಿಟಿ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯವು ಈಚೆಗೆ ವಜಾಗೊಳಿಸಿತ್ತು.
ಮಾರ್ಚ್ 25ರಂದು ಭಜರಂಗದಳದ ನಾಯಕ ವಿಕಾಸ್ ತ್ಯಾಗಿ ಎಂಬುವವರು ಸಿಟಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ಮಸೀದಿಯು ಸರ್ಕಾರಿ ಜಾಗದಲ್ಲಿ ನಿರ್ಮಿಸಲಾದ ಅಕ್ರಮ ಕಟ್ಟಡ ಎಂದು ಪ್ರತಿಪಾದಿಸಿದ್ದರು.
ಈ ಅರ್ಜಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯವು ಮಸೀದಿಯನ್ನು ಅಕ್ರಮ ಕಟ್ಟಡವೆಂದು ಕರೆದು, ಮಸೀದಿಯ ಉಸ್ತುವಾರಿ ವಹಿಸಿಕೊಂಡವರಿಗೆ ₹6.41 ಕೋಟಿ ದಂಡ ವಿಧಿಸಿತ್ತು.
ಮಸೀದಿ ಆಡಳಿತ ಮಂಡಳಿಯು ಈ ಆದೇಶವನ್ನು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಆದರೆ, ನ್ಯಾಯಾಲಯವು ಸೆ.2ರಂದು ಅರ್ಜಿಯನ್ನು ವಜಾಗೊಳಿಸಿತ್ತು.
ಮಸೀದಿ ಧ್ವಂಸಗೊಳಿಸಿದ ಕ್ರಮವನ್ನು ವಿಪಕ್ಷ ನಾಯಕರು ತೀವ್ರವಾಗಿ ಖಂಡಿಸಿದ್ದು, ಇದು ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಮಸೀದಿಯು 115 ವರ್ಷ ಹಳೆಯದಾಗಿದೆ. ಮಸೀದಿಯ ಮಾಲೀಕತ್ವಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ ನಂತರವೂ ಧ್ವಂಸಗೊಳಿಸಲಾಗಿದೆ. ಇದು ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ಎಂದು ಸಹರಾನ್ಪುರದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಆಕ್ರೋಶ ಹೊರಹಾಕಿದ್ದಾರೆ.
'ನಿಜವಾದ ಸನಾತನಿ ಎಂದಿಗೂ ಇತರ ಧರ್ಮಗಳನ್ನು ಅಪಮಾನಿಸುವುದಿಲ್ಲ' ಎಂದು ಸರ್ಕಾರದ ವಿರುದ್ಧ ಸಮಾಜವಾದಿ ಪಾರ್ಟಿ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ.
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಮಸೀದಿ ಧ್ವಂಸಗೊಳಿಸಿದ್ದನ್ನು ಖಂಡಿಸಿದ್ದು, ದೇಶದಲ್ಲಿ ಮುಸ್ಲಿಮರಿಗೆ ಈಗ ಯಾವುದೇ ಧಾರ್ಮಿಕ ಸ್ವಾತಂತ್ರ್ಯ ಉಳಿದಿಲ್ಲ ಎಂದಿದ್ದಾರೆ.

