ನವದೆಹಲಿ/ಜೈಪುರ (PTI): ಜೈಪುರದ ಎರಡು ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿ ಭಾನುವಾರ ನಿಗದಿಯಾಗಿದ್ದ ನೀಟ್-ಪಿಜಿಗೆ ಅಡ್ಡಿಯಾಗಿದೆ. ಮರುಪರೀಕ್ಷೆಯನ್ನು ಇದೇ 5ರಂದು ನಿಗದಿಪಡಿಸಲಾಗಿದೆ.
'ಜೈಪುರದ ಸೀತಾಪುರದಲ್ಲಿರುವ ಎರಡು ಐಒಎನ್ ಡಿಜಿಟಲ್ ವಲಯ ಕೇಂದ್ರಗಳಲ್ಲಿ ವಿದ್ಯುತ್ ವ್ಯತ್ಯಯದಿಂದಾಗಿ ಪರೀಕ್ಷೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.
ತೊಂದರೆಗೆ ಒಳಗಾದ ಅಭ್ಯರ್ಥಿಗಳು ಮಾತ್ರ ಮರುಪರೀಕ್ಷೆಗೆ ಹಾಜರಾಗಬಹುದು' ಎಂದು ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿ (ಎನ್‌ಬಿಇಎಂಎಸ್) ತಿಳಿಸಿದೆ.
ಮರುಪರೀಕ್ಷೆಯ ಸ್ಥಳ ಮತ್ತು ಪರಿಷ್ಕೃತ ಪ್ರವೇಶ ಪತ್ರಗಳು ಸೇರಿದಂತೆ ಹೆಚ್ಚಿನ ವಿವರಗಳನ್ನು ಪ್ರತ್ಯೇಕವಾಗಿ ತಿಳಿಸ ಲಾಗುವುದು ಎಂದು ಮಂಡಳಿ ತಿಳಿಸಿದೆ.
ಪ್ರತಿಭಟನೆ: ತಾಂತ್ರಿಕ ಅಡಚಣೆಯನ್ನು ಪ್ರಶ್ನಿಸಿ ಹಲವು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.
'ಬೆಳಿಗ್ಗೆ 9ಗಂಟೆಗೆ ಆರಂಭವಾಗಬೇಕಿದ್ದ ಪರೀಕ್ಷೆ ತಡವಾಗಿ ಆರಂಭವಾಯಿತು. ಪರೀಕ್ಷೆಯ ಸಮಯದಲ್ಲಿ ಕೆಲವು ಕಂಪ್ಯೂಟರ್‌ಗಳು ಪದೇ ಪದೇ ಸ್ಥಗಿತಗೊಂಡವು. ಜತೆಗೆ ಅನೇಕ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡವು' ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.
'ಪುನರಾವರ್ತಿತ ತಾಂತ್ರಿಕ ದೋಷ ಗಳ ಕುರಿತು ಕೇಂದ್ರದ ಸಿಬ್ಬಂದಿ ಸ್ಪಷ್ಟ ವಿವರಣೆ ನೀಡಿಲ್ಲ' ಎಂದೂ ದೂರಿದ್ದಾರೆ.
2.65 ಲಕ್ಷ ಅಭ್ಯರ್ಥಿಗಳು: ದೇಶದಾದ್ಯಂತ 339 ನಗರಗಳ 1,111 ಕೇಂದ್ರಗಳಲ್ಲಿ ನೀಟ್-ಪಿಜಿ ನಡೆಸಲಾಗಿದ್ದು, 2,63,535 ಲಕ್ಷ ಅಭ್ಯರ್ಥಿಗಳು ಯಶಸ್ವಿಯಾಗಿ ಪರೀಕ್ಷೆ ಯನ್ನು ಪೂರ್ಣಗೊಳಿಸಿದರು. ಒಟ್ಟಾರೆ2,73,096 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿದ್ದರು. ಈ ಪೈಕಿ 2,65,980 ಅಭ್ಯರ್ಥಿಗಳು ಹಾಜರಾಗಿ ದ್ದರು ಎಂದು ಮಂಡಳಿ ತಿಳಿಸಿದೆ.
ಅಭ್ಯರ್ಥಿಗೆ ಪೊಲೀಸರ ಸಹಾಯ
ಆಲಪ್ಪುಳ (ಕೇರಳಂ) (ಪಿಟಿಐ): ಪ್ರವೇಶಪತ್ರವನ್ನು ಮರೆತು ಬಂದಿದ್ದ ನೀಟ್- ಪಿಜಿ ಅಭ್ಯರ್ಥಿಯೊಬ್ಬರು, ಪೊಲೀಸರ ಸಹಾಯದಿಂದ ಪರೀಕ್ಷೆಯನ್ನು ಬರೆದ ಘಟನೆ ಕೇರಳಂನ ಚೆಂಗನ್ನೂರಿನಲ್ಲಿ ಭಾನುವಾರ ನಡೆದಿದೆ.
'ಬೆಳಿಗ್ಗೆ 9 ಗಂಟೆಗೆ ಪರೀಕ್ಷೆ ನಿಗದಿಯಾಗಿತ್ತು. ಡಾ. ಅನಾಸ್ ಎಂಬವರು ಪ್ರವೇಶಪತ್ರವನ್ನು ಮರೆತು ಬಂದಿರುವುದು ಪರೀಕ್ಷೆಗೆ ಕೆಲ ಕ್ಷಣಗಳು ಇರುವಾಗ ತಿಳಿಯಿತು. ಅವರ ಮನೆ ದೂರವಿದ್ದ ಕಾರಣ ಪರೀಕ್ಷಾ ಕೇಂದ್ರದಲ್ಲಿ ನಿಯೋಜಿಸಲಾಗಿದ್ದ ಪೊಲೀಸರ ಸಹಾಯವನ್ನು ಕೇಳಿದರು' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಭಾನುವಾರವಾದ ಕಾರಣ ಸಮೀಪದ ಝೆರಾಕ್ಸ್ ಅಂಗಡಿಗಳು ಮುಚ್ಚಿದ್ದವು. ಹೀಗಾಗಿ, ಚೆಂಗನ್ನೂರಿನ ಪೊಲೀಸ್ ಠಾಣೆಯಲ್ಲೇ ಪ್ರವೇಶಪತ್ರದ ಪ್ರತಿ ತೆಗೆದುಕೊಂಡ ಪೊಲೀಸರು, ಪರೀಕ್ಷೆ ಆರಂಭಕ್ಕೂ ಮುನ್ನ ಅವರಿಗೆ ತಲುಪಿಸಿದರು' ಎಂದು ಅವರು ತಿಳಿಸಿದ್ದಾರೆ.

