HEALTH TIPS

ಪ್ರಶ್ನಿಸುವ ವಿದ್ಯಾರ್ಥಿಗಳನ್ನು ಶಿಕ್ಷಿಸುವುದು ಅಸಾಂವಿಧಾನಿಕ: ನ್ಯಾ. ಉಜ್ಜಲ್‌

ನವದೆಹಲಿ (PTI): 'ವಿದ್ಯಾರ್ಥಿಗಳು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದಾಗ ಅಥವಾ ಪ್ರಶ್ನೆಗಳನ್ನು ಕೇಳಿದಾಗ, ಅವರಿಗೆ ದಂಡನಾತ್ಮಕ ಕ್ರಮದ ಬೆದರಿಕೆ ಹಾಕಬಾರದು' ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಉಜ್ಜಲ್‌ ಭುಯಾನ್‌ ಭಾನುವಾರ ಹೇಳಿದರು. 


'ಪ್ರಶ್ನಿಸಿದವರನ್ನು ಶಿಕ್ಷೆಗೆ ಒಳಪಡಿಸುವ ಧೋರಣೆಯು ಸಂವಿಧಾನಬಾಹಿರ ಮತ್ತು ಅಧಿಕಾರದ ದುರುಪಯೋಗ ಆಗುತ್ತದೆ' ಎಂದು ಅವರು ತಿಳಿಸಿದರು.

ದೆಹಲಿಯ ನ್ಯಾಷನಲ್‌ ಲಾ ಯೂನಿವರ್ಸಿಟಿಯಲ್ಲಿ ಭಾನುವಾರ ನಡೆದ 13ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

'ವಿಶ್ವವಿದ್ಯಾಲಯವು ಸ್ಥಾಪಿತ ನಿಲುವುಗಳನ್ನು ಪರಿಶೀಲಿಸುವ ಮತ್ತು ಪ್ರಶ್ನಿಸುವ ತಾಣವಾಗಿರಬೇಕು' ಎಂದ ಅವರು, ಭಿನ್ನಾಭಿಪ್ರಾಯಗಳನ್ನು ದ್ವೇಷಪೂರಿತವಾಗಿ ಕಾಣಬಾರದು ಎಂದು ಕಿವಿಮಾತು ಹೇಳಿದರು.

ಪ್ರಶ್ನಿಸಲು ಹಿಂಜರಿಯಬಾರದು

'ವಿಶ್ವವಿದ್ಯಾಲಯಗಳು ಮುಕ್ತವಾಗಿ ಯೋಚಿಸುವ ಅಭ್ಯಾಸ ಆರಂಭವಾಗುವ ಸ್ಥಳಗಳಾಗಿರಬೇಕು. ಅಲ್ಲಿ ಕಠಿಣ ಪ್ರಶ್ನೆಗಳನ್ನು ಕೇಳಲು ವಿದ್ಯಾರ್ಥಿಗಳು ಹಿಂಜರಿಯಬಾರದು. ಪ್ರಶ್ನಿಸುವ ಹಕ್ಕು ಎಂದರೆ ಅಧಿಕಾರವನ್ನು ಧಿಕ್ಕರಿಸುವುದು ಎಂದಲ್ಲ' ಎಂದು ಅವರು ಒತ್ತಿ ಹೇಳಿದರು.

'ಸ್ವಾತಂತ್ರ್ಯ, ವೈವಿಧ್ಯವನ್ನು ಗೌರವಿಸುವ ಪ್ರಜಾಪ್ರಭುತ್ವ ಸಮಾಜವನ್ನು ನಾವು ಬಯಸುವುದಾದರೆ, ಅಂತಹ ಸಂಸ್ಕೃತಿಯು ವಿಶ್ವವಿದ್ಯಾಲಯಗಳಿಂದಲೇ ಆರಂಭವಾಗಬೇಕು' ಎಂದು ಅವರು ಪ್ರತಿಪಾದಿಸಿದರು.

'ಮುಕ್ತ ಸಮಾಜದಲ್ಲಿ ಭಿನ್ನ ಅಭಿಪ್ರಾಯಗಳು ಮತ್ತು ನಂಬಿಕೆಗಳು ಸಹಜ. ಭಿನ್ನಮತಕ್ಕೆ ಅವಕಾಶ ಇದ್ದಾಗ ಮಾತ್ರ ಸಾರ್ವಜನಿಕ ಜೀವನದಲ್ಲಿ ಭಾಗವಹಿಸುವಿಕೆಯು ಅರ್ಥಪೂರ್ಣವಾಗಿರುತ್ತದೆ' ಎಂದು ಭುಯಾನ್‌ ಅಭಿಪ್ರಾಯಪಟ್ಟರು.

ಅಸಹಿಷ್ಣು ಮನಃಸ್ಥಿತಿಗೆ ಸ್ಥಾನವಿಲ್ಲ

'ಸಹಿಷ್ಣುತೆಯು ಸಾಂವಿಧಾನಿಕ ಮೌಲ್ಯವಾಗಿದೆ' ಎಂದ ಅವರು, 'ಬುದ್ಧ ಮತ್ತು ಗಾಂಧಿಯ ನಾಡಾದ ಭಾರತದಲ್ಲಿ ಅಸಹಿಷ್ಣು ಮನಃಸ್ಥಿತಿಗೆ ಯಾವುದೇ ಸ್ಥಾನವಿಲ್ಲ' ಎಂದರು.

'ಮಾತನಾಡುವ, ಆಲೋಚಿಸುವ ಮತ್ತು ಭಿನ್ನವಾಗಿ ನಂಬುವ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದ್ದು, ಅದಕ್ಕೆ ರಕ್ಷಣೆಯನ್ನೂ ಒದಗಿಸಿದೆ. ಭಿನ್ನಾಭಿಪ್ರಾಯವನ್ನು ಹತ್ತಿಕ್ಕಬೇಕು ಎಂಬ ಅಸಹಿಷ್ಣು ಮನಃಸ್ಥಿತಿಯು ಸಂವಿಧಾನದ ಚೌಕಟ್ಟನ್ನು ದುರ್ಬಲಗೊಳಿಸಲು ಪ್ರಾರಂಭಿಸುತ್ತದೆ' ಎಂದು ಅವರು ಬೇಸರ ವ್ಯಕ್ತಪಡಿಸಿದರು.

'ಭಿನ್ನಾಭಿಪ್ರಾಯದ ಜತೆಗೆ ಬದುಕುವುದು ಸಾಮಾಜಿಕ ಸದ್ಗುಣವಷ್ಟೇ ಅಲ್ಲ, ಅದು ಉದಾರವಾದಿ ಸಾಂವಿಧಾನಿಕ ಪ್ರಜಾಪ್ರಭುತ್ವದ ಮೂಲಭೂತ ಸಾರವೂ ಆಗಿದೆ' ಎಂದು ಅವರು ಪ್ರತಿಪಾದಿಸಿದರು.

'ನ್ಯಾಯತಜ್ಞರೂ ನ್ಯಾಯಮೂರ್ತಿಗಳಾಗಲಿ'

ನವದೆಹಲಿ (ಪಿಟಿಐ): ನ್ಯಾಯತಜ್ಞರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನೇಮಿಸುವ ಅವಕಾಶವಿದ್ದರೂ ಇಲ್ಲಿಯವರೆಗೂ ಅದು ಸಾಧ್ಯವಾಗಿಲ್ಲ ನ್ಯಾಯಮೂರ್ತಿ ಉಜ್ಜಲ್‌ ಭುಯಾನ್‌ ಹೇಳಿದರು.

ಇಂತಹ ನೇಮಕಾತಿಯಿಂದ ಸುಪ್ರೀಂ ಕೋರ್ಟ್‌ನಲ್ಲಿ ವೈವಿಧ್ಯ ಬರುವುದರ ಜತೆಗೆ ನ್ಯಾಯ ಪ್ರಕ್ರಿಯೆಯಲ್ಲಿ ತಜ್ಞರು ಕೊಡುಗೆ ನೀಡಲು ಅವಕಾಶ ಕಲ್ಪಿಸುತ್ತದೆ ಎಂದು ಅವರು ಪ್ರತಿಪಾದಿಸಿದರು. ಸಂವಿಧಾನದ ವಿಧಿ 124(3)(ಸಿ) ಅಡಿಯಲ್ಲಿ ಇಂತಹ ನೇಮಕಾತಿಗೆ ಅವಕಾಶವಿದ್ದರೂ 76 ವರ್ಷಗಳಲ್ಲಿ ಇದು ಸಾಧ್ಯವಾಗಿಲ್ಲ.

ಇಲ್ಲಿಯವರೆಗೂ ಸುಪ್ರೀಂ ಕೋರ್ಟ್‌ಗೆ ಹೈಕೋರ್ಟ್‌ ನ್ಯಾಯಮೂರ್ತಿಗಳು ಅಥವಾ ಹಿರಿಯ ವಕೀಲರನ್ನು ಹೊರತುಪಡಿಸಿ ಬೇರೆಯವರು ನೇಮಕವಾಗಿಲ್ಲ ಎಂಬುದು ವಿಷಾದನೀಯ ಎಂದರು. ಈ ನಿಬಂಧನೆಯನ್ನು ಕೇಂದ್ರ ಸರ್ಕಾರ ಮತ್ತು ಕೊಲಿಜಿಯಂ ಗಂಭೀರವಾಗಿ ಪರಿಶೀಲಿಸಿಲ್ಲ ಎಂದ ಅವರು ಈಗಾಗಲೇ ಅಮೆರಿಕ ಬ್ರಿಟನ್‌ ಕೆನಡ ಕೆನ್ಯಾ ಸೇರಿದಂತೆ ಹಲವು ದೇಶಗಳಲ್ಲಿ ಖ್ಯಾತ ನ್ಯಾಯ ತಜ್ಞರನ್ನು ಸಾಂವಿಧಾನಿಕ ನ್ಯಾಯಾಲಯಗಳ ನ್ಯಾಯಮೂರ್ತಿಗಳಾಗಿ ನೇಮಿಸಲಾಗುತ್ತಿದೆ ಎಂದು ಉಲ್ಲೇಖಿಸಿದರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries