ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಪ್ರವಾಹ ಸೃಷ್ಟಿಸಿರುವ ಭೀಕರತೆಗೆ 1200ಕ್ಕೂ ಹೆಚ್ಚು ಮಂದಿ ಸಾವೀಗೀಡಾಗಿದ್ದಾರೆ. ಸುಮಾರು 4 ಸಾವಿರಕ್ಕೂ ಅಧಿಕ ಜನ ನಾಪತ್ತೆಯಾಗಿದ್ದಾರೆ. ಈ ಬೃಹತ್ ಅಂಕಿ-ಅಂಶಗಳು ದುರಂತದ ತೀವ್ರತೆಯನ್ನು ಕೇವಲ ಸಂಖ್ಯೆಗಳಲ್ಲಿ ಹೇಳುತ್ತವೆಯಾದರೂ, ಪ್ರವಾಹದಲ್ಲಿ ಸಿಲುಕಿದ ಪುಟ್ಟ ಮಕ್ಕಳ ಶಾಲಾ ಬ್ಯಾಗ್ ಮತ್ತು ಪುಸ್ತಕಗಳು ಈ ದುರಂತದ ಭೀಕರತೆಯನ್ನು ಜಗತ್ತಿಗೆ ಸಾರಿ ಹೇಳುತ್ತಿವೆ.
ಪ್ರವಾಹದ ರಭಸಕ್ಕೆ ಕೊಚ್ಚಿಬಂದ ಮಣ್ಣಿನಿಂದ ಕೂಡಿದ ಶಾಲಾ ಬ್ಯಾಗ್ ಮತ್ತು ಪುಸ್ತಕಗಳು ಅಲ್ಲಲ್ಲಿ ಕಾಣಸಿಗುತ್ತಿವೆ. ಕಲ್ಲು-ಬಂಡೆ ಹಾಗೂ ಕೆಸರು ಮಿಶ್ರಿತ ನೀರು ಹರಿದುಬಂದ ರಭಸಕ್ಕೆ ಹೆದರಿ ಪ್ರಾಣ ಉಳಿಸಿಕೊಳ್ಳಲು ಮಕ್ಕಳು ಓಡುವಾಗ ಈ ಬ್ಯಾಗ್‌ಗಳು ಬಿದ್ದುಹೋಗಿವೆ.
ಆ ಪುಸ್ತಕಗಳ ಮೇಲೆ 'ರೋಶನ್ ಮಿಜಾವ್, 7ನೇ ತರಗತಿ, ರೋಲ್ ನಂಬರ್ 31, ಶ್ರೀ ಬಾಗೇಶ್ವರಿ ಪ್ರೌಢಶಾಲೆ' ಎಂದು ಬರೆಯಲಾಗಿದೆ. ತರಗತಿಯಲ್ಲಿ ಶಿಕ್ಷಕರು ಪಾಠ ಮುಗಿಸಿದ ಪುಟವನ್ನು ಗುರುತಿಸಲು ಪುಸ್ತಕದ ಪುಟಗಳ ನಡುವೆ ಇಟ್ಟಿದ್ದ ಪ್ಲಾಸ್ಟಿಕ್ ಸ್ಕೇಲ್, ಬ್ಯಾಗ್‌ನಲ್ಲಿ ಎರಡು ಪೆನ್‌ಗಳು ಹಾಗೂ ಮಧ್ಯಾಹ್ನದ ಉಪಹಾರದ ಡಬ್ಬಿ ಹಾಗೆಯೇ ಇವೆ.
ಆ ಬಾಲಕ ಪ್ರಾಣಾಪಾಯದಿಂದ ಪಾರಾಗಿ ಸುರಕ್ಷಿತವಾಗಿದ್ದಾನೋ ಅಥವಾ ಪ್ರವಾಹಕ್ಕೆ ಬಲಿಯಾಗಿ ಕೇವಲ ಒಂದು 'ಸಂಖ್ಯೆ'ಯಾಗಿದ್ದಾನೋ ಎಂಬುವುದು ಇನ್ನೂ ತಿಳಿದುಬಂದಿಲ್ಲ. ಆದರೆ, ನೇಪಾಳದ ಇತರೆ ಜನರಂತೆ ಆ ಮಗು ಕೂಡ ಈ ದುರಂತದ ಭೀಕರತೆಯನ್ನು ಎದುರಿಸಿದೆ ಎಂಬುದು ಮಾತ್ರ ಕಟು ಸತ್ಯ.
ಹೆಚ್ಚುತ್ತಿರುವ ಸಾವಿನ ಸಂಖ್ಯೆ:
ದೇಶದ 'ರಾಷ್ಟ್ರೀಯ ವಿಕೋಪ ತಡೆ ಮತ್ತು ನಿರ್ವಹಣಾ ಪ್ರಾಧಿಕಾರ' (ಎನ್‌ಡಿಆರ್‌ಆರ್‌ಎಂಎ) ನೀಡಿರುವ ಮಾಹಿತಿಯಂತೆ, ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 1300ರ ಸಮೀಪದಲ್ಲಿದೆ. ಅತ್ಯಂತ ಹೆಚ್ಚು ಅಂದರೆ ಚಿತ್ವಾನ್ ಜಿಲ್ಲೆಯಲ್ಲಿ 355 , ನವಲ್‌ಪರಾಸಿ ಪೂರ್ವದಲ್ಲಿ 218, ನವಲ್‌ಪರಾಸಿ ಪಶ್ಚಿಮದಲ್ಲಿ 208, ನುವಾಕೋಟ್‌ನಲ್ಲಿ 177 ಮತ್ತು ರಸುವಾದಲ್ಲಿ 127 ಶವಗಳು ಪತ್ತೆಯಾಗಿವೆ. ಇವುಗಳಲ್ಲಿ ಕೇವಲ 95 ಮೃತದೇಹಗಳನ್ನು ಮಾತ್ರ ಗುರುತಿಸಲು ಸಾಧ್ಯವಾಗಿದೆ.
ಮುಂದುವರಿದ ರಕ್ಷಣಾಕಾರ್ಯಾಚರಣೆ: ಈವರೆಗೆ 11 ಸಾವಿರಕ್ಕೂ (11,993) ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಗಾಯಗೊಂಡಿರುವ 5 ಸಾವಿರಕ್ಕೂ (5135) ಹೆಚ್ಚು ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಪತ್ತೆಯಾದ ವಿದೇಶಿ ಪ್ರಜೆಗಳು ಮತ್ತು ಕಾರ್ಮಿಕರು:
ನಾಪತ್ತೆಯಾಗಿರುವ 4216 ಜನರಲ್ಲಿ, ವಿವಿಧ ಜಲವಿದ್ಯುತ್ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದ 900 ಕಾರ್ಮಿಕರು ಹಾಗೂ 583 ವಿದೇಶಿ ಪ್ರವಾಸಿಗರು ಮತ್ತು 164 ಸ್ಥಳೀಯರು ಸೇರಿದ್ದಾರೆ.
ಸಂಪರ್ಕ ಕಡಿತ: ದೇಶದ ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಗೋಪುರಗಳು ಸಂಪೂರ್ಣ ಧ್ವಂಸಗೊಂಡಿದ್ದು, ಸಂಪರ್ಕ ಸಾಧಿಸುವುದು ಸವಾಲಾಗಿದೆ.
ಅಂತರರಾಷ್ಟ್ರೀಯ ನೆರವು:
ಸಂಕಷ್ಟದಲ್ಲಿರುವ ನೇಪಾಳಕ್ಕೆ ಭಾರತವು ಪರಿಹಾರ ಸಾಮಗ್ರಿ, ಪರಿಣಿತ ಸಿಬ್ಬಂದಿ ಹಾಗೂ ತುರ್ತು ಸಲಕರಣೆಗಳನ್ನು ಕಳುಹಿಸಿಕೊಟ್ಟಿದೆ. ಅಮೆರಿಕ ಕೂಡ ಪ್ರಕೃತಿ ವಿಕೋಪ ನಿರ್ವಹಣಾ ಸಾಮಗ್ರಿಗಳನ್ನು ರವಾನಿಸಿದೆ.
ಹವಾಮಾನ ಬದಲಾವಣೆಯೇ ಕಾರಣ:
ಈ ದುರಂತಕ್ಕೆ ಹವಾಮಾನ ಬದಲಾವಣೆಯೇ ಮುಖ್ಯ ಕಾರಣ ಎಂದಿರುವ ನೇಪಾಳ ಪ್ರಧಾನಿ ಬಾಲೇಂದ್ರ ಶಾ ಹಾಗೂ ವಿದೇಶಾಂಗ ಸಚಿವ ಶಿಶಿರ ಖನಾಲ್, ಜಾಗತಿಕ ಇಂಗಾಲದ ಹೊರಸೂಸುವಿಕೆಯಲ್ಲಿ ನೇಪಾಳದ ಪಾತ್ರ ತೀರ ಕಡಿಮೆ. ಹೀಗಾಗಿ ಪರಿಸರ ನಾಶಕ್ಕೆ ಕಾರಣವಾಗಿರುವ 'ದೊಡ್ಡ ರಾಷ್ಟ್ರಗಳು' ನೇಪಾಳದಂತೆ ಸಂಕಷ್ಟಕ್ಕೊಳಗಾದ ದೇಶಗಳಿಗೆ ಪರಿಹಾರ ನೀಡುವ ಜವಾಬ್ದಾರಿ ಹೊರಬೇಕು ಎಂದು ಆಗ್ರಹಿಸಿದ್ದಾರೆ.

