ಕೋಯಿಕ್ಕೋಡ್: ಚಿನ್ನ ಕಳ್ಳಸಾಗಣೆ ತಡೆಯುವ ನಿಟ್ಟಿನಲ್ಲಿ ಸರ್ಕಾರಗಳು ಕಠಿಣ ಪರಿಶೀಲನಾ ವ್ಯವಸ್ಥೆ ಜಾರಿಗೆ ತಂದಿದ್ದರೂ ಕಳ್ಳಸಾಗಣೆದಾರರು ಮಾತ್ರ ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ.
ಕರಿಪ್ಪುರ ವಿಮಾನ ನಿಲ್ದಾಣದಲ್ಲಿ 8 ತಿಂಗಳ ಮಗುವನ್ನು ಬಳಸಿಕೊಂಡು ಚಿನ್ನ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಗುಮಾನಿ ಮೇಲೆ ಪರಿಶೀಲಿಸಿದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ) ಅಧಿಕಾರಿಗಳು ಒಟ್ಟು ₹1 ಕೋಟಿ ಮೌಲ್ಯದ ಚಿನ್ನವನ್ನು ಜಪ್ತಿ ಮಾಡಿದ್ದಾರೆ.
ಈ ಪೈಕಿ ಸುಮಾರು ₹50 ಲಕ್ಷ ಮೌಲ್ಯದದ ಅರ್ಧ ಕೆ.ಜಿಯಷ್ಟು ಚಿನ್ನವನ್ನು ಮಗುವಿನ ಡೈಪರ್‌ನಲ್ಲಿ ಅಡಗಿಸಿಡಲಾಗಿತ್ತು ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ.
ಯುಎಇಯ ರಾಸ್ ಅಲ್ ಖೈಮಾ ವಿಮಾನ ನಿಲ್ದಾಣದಿಂದ ಮಂಗಳವಾರ ಮಗು ತಂದೆ ಜೊತೆ ಆಗಮಿಸಿತ್ತು. ಈ ಕುಟುಂಬವು ಮಲಪ್ಪುರಂ ಜಿಲ್ಲೆಯ ಪೊನ್ನಾನಿ ಮೂಲದ್ದು ಎಂದು ತಿಳಿದು ಬಂದಿದೆ.
ಚಿನ್ನ ಕಳ್ಖಸಾಗಣೆಯ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಿದ ಡಿಆರ್‌ಐ ಅಧಿಕಾರಿಗಳು, ₹1 ಕೋಟಿ ಮೌಲ್ಯದ ಚಿನ್ನ ವಶಕ್ಕೆ ಪಡೆದಿದ್ದಾರೆ.
ಚಿನ್ನವನ್ನು ಎಲ್ಲಿಂದ ತರಲಾಗಿದೆ. ಇದರ ಹಿಂದಿರುವವರು ಯಾರು? ಎಂಬುದರ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆಯೂ ಮಗುವಿನ ದೇಹದಲ್ಲಿ ಚಿನ್ನವನ್ನು ಅಡಗಿಸಿಟ್ಟು ಕಳ್ಳಸಾಗಣೆ ನಡೆಸಲಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

