ನವದೆಹಲಿ: ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ ಭಾರತದ ಐದು ಹೊಸ ತಾಣಗಳನ್ನು ಸೇರ್ಪಡೆ ಮಾಡಲಾಗಿದೆ.
ಇದರಲ್ಲಿ, ಮಧ್ಯಪ್ರದೇಶದ ಉದಯಗಿರಿ ಗುಹೆಗಳು, ಚಂಬಲ್ ಕಣಿವೆಯ ದೇವಾಲಯಗಳ ಸಮೂಹ, ಬಾಗ್ ಗುಹೆಗಳ ವರ್ಣಚಿತ್ರಗಳು, ಗಿನ್ನೋರ್‌ಗಢ ಕೋಟೆ ಮತ್ತು ಭಾರತ ಹಾಗೂ ದಕ್ಷಿಣ ಆಫ್ರಿಕಾದ ಜಂಟಿ ಪ್ರಸ್ತಾಪಿತ ಸತ್ಯಾಗ್ರಹದ ತಾಣಗಳೂ ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತಂತೆ ಎಕ್ಸ್ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ , ಪಿಐಬಿ ಕಲ್ಚರ್, ಇದು ದೇಶದ ಪರಂಪರೆಯ ಮಟ್ಟಿಗೆ ಹೆಮ್ಮೆಯ ಮೈಲಿಗಲ್ಲು ಎಂದು ಬಣ್ಣಿಸಿದೆ.
'ಹೊಸ ಸೇರ್ಪಡೆ ಸೇರಿಭಾರತದ ಯುನೆಸ್ಕೊ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿ ಈಗ 78 ತಾಣಗಳಿವೆ. ಬಾಗ್ ಗುಹೆಗಳ ವರ್ಣಚಿತ್ರಗಳು, ಚಂಬಲ್ ಕಣಿವೆಯ ದೇವಾಲಯಗಳ ಸಮೂಹ, ಉದಯಗಿರಿ ಗುಹೆಗಳು, ಗಿನ್ನೋರ್‌ಗಢ ಕೋಟೆ ಮತ್ತು ಭಾರತ-ದಕ್ಷಿಣ ಆಫ್ರಿಕಾದ ಜಂಟಿ ಪ್ರಸ್ತಾವವಾದ ಸತ್ಯಾಗ್ರಹದ ತಾಣಗಳು ಇದರಲ್ಲಿವೆ'. ಎಂದು ಅದು ತಿಳಿಸಿದೆ.
ಕ್ರಿ.ಶ. 4ನೇ ಶತಮಾನದ ಅಂತ್ಯ ಮತ್ತು 5ನೇ ಶತಮಾನದ ಆರಂಭದಲ್ಲಿ ಗುಪ್ತರ ಆಳ್ವಿಕೆ ಸಮಯದಲ್ಲಿ ಮಧ್ಯಪ್ರದೇಶದ ಉದಯಗಿರಿ ಬೆಟ್ಟದ ಬಂಡೆಗಳನ್ನು ಕೊರೆದು ನಿರ್ಮಿಸಲಾದ ರಚನೆಗಳು ಇವು ಎಂದು ಯುನೆಸ್ಕೊ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ. ಗುಹೆಗಳು, ಶಿಲ್ಪಕಲಾ ಫಲಕಗಳು, ಶಾಸನಗಳು, ಸಂಚಾರ ಮಾರ್ಗಗಳು ಮತ್ತು ಶಾಸನಗಳು ಸೇರಿದಂತೆ ಹಲವು ಐತಿಹಾಸಿಕ ಕುರುಹುಗಳನ್ನು ಈ ಪ್ರದೇಶ ಒಳಗೊಂಡಿದೆ.
ಇನ್ನು, ಬಾಗ್ ಗುಹೆಗಳನ್ನು ಮಧ್ಯಪ್ರದೇಶದ ಬಾಗ್ನಿ ನದಿಯ ದಡದಲ್ಲಿರುವ ವಿಂಧ್ಯ ಪರ್ವತ ಶ್ರೇಣಿಯ ಬಂಡೆಗಳನ್ನು ಕೊರೆದು ನಿರ್ಮಿಸಲಾಗಿದೆ. ಇದು ಒಂಬತ್ತು ಬೌದ್ಧ ಗುಹೆಗಳ ಸಮೂಹವಾಗಿದೆ.
ಉಳಿದಂತೆ, ಮಧ್ಯ ಭಾರತದ ರಾಜ್ ಗೊಂಡ್ ವಂಶಸ್ಥರ ರಾಜಧಾನಿಯಾಗಿದ್ದ ಗಿನ್ನೋರ್‌ಗಢ ಕೋಟೆ ಹಾಗೂ ಮಧ್ಯಪ್ರದೇಶದ ಪ್ರಸಿದ್ಧ ಚಂಬಲ್ ಕಣಿವೆಯ ದೇವಾಲಯಗಳ ಸಮೂಹ ಸಹ ಈ ಪಟ್ಟಿಯಲ್ಲಿದೆ. ಇದು ಬಟೇಶ್ವರ್, ಪಡಾವಳಿ ಮತ್ತು ಕಕರ್ಮಠ ಎಂಬ ಮೂರು ದೇಗುಲಗಳ ಸಾಲಾಗಿದೆ.
ಯಾವುದೇ ತಾಣ ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳಾಗಿ ಗುರಿತಿಸುವ ಮೊದಲು, ತಾತ್ಕಾಲಿಕ ಪಟ್ಟಿಯಲ್ಲಿ ಗುರುತಿಸಲ್ಪಡುವುದು ಅಗತ್ಯವಾಗಿದೆ.

