ನವದೆಹಲಿ: ಮಹಾರಾಷ್ಟ್ರದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ 2.06 ಕೋಟಿಗೂ ಅಧಿಕ ಮತದಾರರನ್ನು ಕರಡು ಪಟ್ಟಿಯಿಂದ ಹೊರಗಿಟ್ಟಿದ್ದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ಮತ್ತು ಚುನಾವಣಾ ಆಯೋಗದ (ಇಸಿಐ) ವಿರುದ್ಧ ಮಂಗಳವಾರ ಹರಿಹಾಯ್ದಿದ್ದಾರೆ.
ಯಾವುದೇ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಖಚಿತಪಡಿಸುವುದೇ ಗುರಿಯಾಗಿರುವುದರಿಂದ, ಅದನ್ನು ಸಾಧಿಸುವವರೆಗೂ ಬಿಜೆಪಿ ಮತ್ತು ವೋಟ್ ಚೋರಿ ಆಯೋಗ ತಮ್ಮ ತಂತ್ರಗಳನ್ನು ಬದಲಿಸುತ್ತಲೇ ಇರುತ್ತವೆ' ಎಂದು ಅವರು ತಮ್ಮ 'ಎಕ್ಸ್' ಖಾತೆಯಲ್ಲಿ ಬರೆದಿದ್ದಾರೆ.
'ಸರ್ಕಾರ ರಚನೆ ಆಗಿರುವುದೇ ಮತ ಕಳವಿನ ಆಧಾರದಲ್ಲಿ. ಅವರಿಗೆ ಜನರು ಮುಖ್ಯವಲ್ಲ. ಜನರ ಕೂಗನ್ನು ಕೇಳುವುದಿಲ್ಲ ಅಥವಾ ಜನರ ಆದೇಶಕ್ಕೆ ತಲೆಬಾಗುವುದಿಲ್ಲ. ಭಾರತದ ಪ್ರಜಾಪ್ರಭುತ್ವವನ್ನು ವಿನಾಶ ಮಾಡುತ್ತಾರೆ' ಎಂದು ದೂರಿದ್ದಾರೆ.
ಕೇಂದ್ರ, ಯುಪಿ ಸರ್ಕಾರದ ವಿರುದ್ಧ ವಾಗ್ದಾಳಿ
ನವದೆಹಲಿ: ದೆಹಲಿಯಿಂದ ನೊಯಿಡಾಕ್ಕೆ ಹೋಗುತ್ತಿದ್ದ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಪ್ರಕರಣಕ್ಕೆ ಸಂಬಂಧಿಸಿ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
'ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಳ್ವಿಕೆಯಲ್ಲಿ ಪೊಲೀಸರಿಗೆ ಯಾವುದೇ ಹೊಣೆಗಾರಿಕೆ ನಿಗದಿ ಮಾಡುವ ಸಾಧ್ಯತೆ ಇಲ್ಲದಿರುವುದರಿಂದ, ಈ ಪ್ರಕರಣವನ್ನೂ ಮುಚ್ಚಿಹಾಕಲಾಗುತ್ತದೆ. ದೆಹಲಿ ಮತ್ತು ರಾಜಧಾನಿ ವ್ಯಾಪ್ತಿಯ ಪ್ರದೇಶವು ಮಹಿಳೆಯರಿಗೆ ಅಸುರಕ್ಷಿತವಾಗಿ ಮಾರ್ಪಟ್ಟಿದೆ' ಎಂದು ಅವರು ಆರೋಪಿಸಿದ್ದಾರೆ.
'ನಿರ್ಭಯ ಪ್ರಕರಣದ ಬಳಿಕವೂ, ಇಂತಹ ಬಸ್‌ಗಳನ್ನು ತಪಾಸಣೆ ಮಾಡುವ ಮತ್ತು ನಿಗಾ ವಹಿಸುವ ನಿಯಮವು ಏಕೆ ಅನುಷ್ಠಾನಕ್ಕೆ ಬರುತ್ತಿಲ್ಲ. ಇದು ಸರ್ಕಾರಗಳ ವೈಫಲ್ಯ. ಸಮಸ್ಯೆಯನ್ನು ಪರಿಹರಿಸುವ ಮುನ್ನ ಇನ್ನೂ ಎಷ್ಟು ಮಹಿಳೆಯರು ಇಂಥ ಕೃತ್ಯಗಳನ್ನು ಸಹಿಸಿಕೊಳ್ಳಬೇಕು' ಎಂದು ಅವರು 'ಎಕ್ಸ್'ನಲ್ಲಿ ಪ್ರಶ್ನಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷಚುನಾವಣಾ ಆಯೋಗವು ನ್ಯಾಯಸಮ್ಮತ ಚುನಾವಣೆಯ ರಕ್ಷಕನಾಗುವ ಬದಲು ಬಿಜೆಪಿಯ ಖುರ್ಚಿ ಉಳಿಸುವ ಆಯೋಗದಂತೆ ಕೆಲಸ ಮಾಡುತ್ತಿದೆ. ಪ್ರಜಾಪ್ರಭುತ್ವವನ್ನು ಬರಿದಾಗಿಸುವ ಬಿಜೆಪಿಯ ಹುನ್ನಾರವೂ ಬಯಲಾಗಿದೆ.

