HEALTH TIPS

ಸೀಟ್ ಬೆಲ್ಟ್ ಗಳ ಕುರಿತು ಕಾನೂನು ಪಾಲನೆಯಾಗುವಂತೆ ನೋಡಿಕೊಳ್ಳುವುದು ಜಾರಿ ಸಂಸ್ಥೆಗಳ ಕರ್ತವ್ಯ: ಸುಪ್ರೀಂ ಕೋರ್ಟ್‌

ನವದೆಹಲಿ:  ವಾಹನವು ಚಲನೆಯಲ್ಲಿರುವಾಗ ಸೀಟ್ ಬೆಲ್ಟ್ ಧರಿಸುವುದನ್ನು ಕಡ್ಡಾಯಗೊಳಿಸಿರುವ ಸಾಕಷ್ಟು ಕಾನೂನುಗಳಿವೆ ಮತ್ತು ಅವುಗಳ ಪಾಲನೆಯನ್ನು ಖಚಿತಪಡಿಸುವುದು ಕಾನೂನು ಜಾರಿ ಸಂಸ್ಥೆಗಳ ಕರ್ತವ್ಯವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಬುಧವಾರ ಹೇಳಿದೆ.


ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯಮಾಲ್ಯ ಬಾಗ್ಚಿ ಮತ್ತು ವಿ.ಮೋಹನಾ ಅವರ ಪೀಠವು ವಾಹನಗಳಲ್ಲಿ ಸೀಟ್ ಬೆಲ್ಟ್ ಧರಿಸುವುದನ್ನು ಕಡ್ಡಾಯಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.

ಸೀಟ್ ಬೆಲ್ಟ್ ಕಡ್ಡಾಯ ಕಾನೂನನ್ನು ಸರಿಯಾಗಿ ಪಾಲಿಸಿದರೆ ರಸ್ತೆ ಅಪಘಾತಗಳಿಂದ ಸಂಭವಿಸುವ ಬಹುಪಾಲು ಸಾವುಗಳು ಮತ್ತು ಗಾಯಗಳನ್ನು ಪರಿಣಾಮಕಾರಿಯಾಗಿ ತಡೆಯಬಹುದು ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.

ಕಾನೂನುಗಳು ಅಸ್ತಿತ್ವದಲ್ಲಿದ್ದರೂ ಸಹ ಫ್ಯಾನ್ಸಿ ಸೀಟ್ ಕವರ್ ಗಳು ಅಥವಾ ಇತರ ಮಾರ್ಪಾಡುಗಳಿಂದಾಗಿ ಅನೇಕ ವಾಹನಗಳಲ್ಲಿ ಸೀಟ್ ಬೆಲ್ಟ್ ಗಳು ಬಳಕೆಗೆ ಬಾರದ ಸ್ಥಿತಿಯಲ್ಲಿವೆ ಎಂದು ಅವರು ಪ್ರತಿಪಾದಿಸಿದರು.

'ಸೀಟ್ ಬೆಲ್ಟ್ ಗಳ ವಿಚಾರದಲ್ಲಿ ಕಾನೂನು ಅತ್ಯಂತ ಸ್ಪಷ್ಟವಾಗಿದೆ. ಇಲ್ಲಿಯ ಮೂಲಪ್ರಶ್ನೆಯು ಕಾನೂನಿನ ಅನುಷ್ಠಾನದ ಕುರಿತಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕ ಮತ್ತು ಪ್ರತಿಯೊಬ್ಬ ಚಾಲಕನು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ನಾವು ಹೇಗೆ ಖಚಿತಪಡಿಸಿಕೊಳ್ಳಲು ಸಾಧ್ಯ? ಅದು ಕಾನೂನು ಜಾರಿ ಸಂಸ್ಥೆಗಳ ಕೆಲಸ'ಎಂದು ನ್ಯಾಯಾಲಯವು ಹೇಳಿತು.

ಕೇಂದ್ರೀಯ ಮೋಟರ್ ವಾಹನ ನಿಯಮಗಳು,1989ರ ನಿಯಮ 138(3)ನ್ನು ಉಲ್ಲೇಖಸಿದ ಪೀಠವು, ಅದು ಚಾಲಕ, ಮುಂಭಾಗದ ಆಸನದಲ್ಲಿರುವವರು ಮತ್ತು ಹಿಂಬದಿಯ ಆಸನಗಳಲ್ಲಿ ಕುಳಿತುಕೊಳ್ಳುವವರು ವಾಹನ ಚಲನೆಯಲ್ಲಿದ್ದಾಗ ಸೀಟ್ ಬೆಲ್ಟ್ ಧರಿಸುವುದನ್ನು ಕಡ್ಡಾಯವಾಗಿಸಿದೆ ಎಂದು ಹೇಳಿತು.

ಜನರ ನಿರ್ಲಕ್ಷ್ಯ ಮತ್ತು ದುರ್ಬಲ ಅನುಷ್ಠಾನ ದೇಶಾದ್ಯಂತ ರಸ್ತೆ ಅಪಘಾತಗಳಲ್ಲಿ ಗಂಭೀರ ಗಾಯಗಳು ಮತ್ತು ಸಾವುಗಳಿಗೆ ಕಾರಣವಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ವಾಹನವು ಚಲನೆಯಲ್ಲಿದ್ದಾಗ ಸೀಟ್ ಬೆಲ್ಟ್ ಗಳನ್ನು ಧರಿಸುವುದು ಸೇರಿದಂತೆ ರಸ್ತೆ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಕಾನೂನುಗಳಿವೆ ಎಂದು ಬೆಟ್ಟು ಮಾಡಿದ ಪೀಠವು,ಈ ಕುರಿತು ತನ್ನ ಸಲಹೆಗಳನ್ನು ಸಕ್ಷಮ ಪ್ರಾಧಿಕಾರಕ್ಕೆ ಕಳುಹಿಸುವಂತೆ ಅರ್ಜಿದಾರರಿಗೆ ಸೂಚಿಸಿತು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries