ಭೂಪಾಲ್: 'ಮಧ್ಯಪ್ರದೇಶದ ಬಾಲಾಘಾಟ್ನಲ್ಲಿ ಬುಡಕಟ್ಟು ಸಮುದಾಯದ 30ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದರಿಂದ, ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ. ಆದ್ದರಿಂದ, ಈ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ' ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಭಾನುವಾರ ವಿಡಂಬನಾತ್ಮಕ ರಾಜೀನಾಮೆ ಪತ್ರವನ್ನು 'ಎಕ್ಸ್'ನಲ್ಲಿ ಹಂಚಿಕೊಂಡಿದ್ದಾರೆ.
ರಾಜ್ಯಪಾಲ ಮಂಗುಭಾಯಿ ಪಟೇಲ್ ಅವರಿಗೆ ಸಂಬೋಧಿಸಿ ಪತ್ರ ಬರೆದಿರುವ ದೀಪ್ಕೆ, 'ಸೂಕ್ತ ಸಮಯದಲ್ಲಿ ಆ ಮಕ್ಕಳಿಗೆ ವೈದ್ಯಕೀಯ ನೆರವು ನೀಡಲಿಲ್ಲ. ನಾನು ಹೀಗೆ ಮಾಡಿದ್ದರೆ, ಹಲವರ ಜೀವ ಉಳಿಯುತ್ತಿತ್ತು. ಜವಾಬ್ದಾರಿಯಿಂದ ನಾನು ನುಣುಚಿಕೊಳ್ಳಲಾರೆ' ಎಂದು ಬರೆದಿದ್ದಾರೆ. 'ಇದು ವಿಡಂಬನಾತ್ಮಕವಾದುದು' ಎಂದು ಪತ್ರದ ಕೊನೆಯಲ್ಲಿ ಬರೆಯಲಾಗಿದೆ.
'ಬಾಲಾಘಾಟ್ನ ಬುಡಕಟ್ಟು ಜನರು ಮಾತ್ರವಲ್ಲ ಇಡೀ ರಾಜ್ಯದ ಬುಡಕಟ್ಟು ಜನರಿಗೆ ಸ್ಪಂದಿಸುವಲ್ಲಿ ನಾನು ಸೋತಿದ್ದೇನೆ. ಅಷ್ಟು ಮಕ್ಕಳು ಮೃತಪಟ್ಟ ಮೇಲೆಯೂ ಅಧಿಕಾರದಲ್ಲಿ ಮುಂದುವರಿಯಲು ನನಗೆ ನೈತಿಕ ಹಕ್ಕು ಇಲ್ಲ. ಮಧ್ಯಪ್ರದೇಶದ ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅಲಿಯಾಸ್ ವಿಶ್ವಗುರು ಅವರಿಗೂ ನನ್ನ ಧನ್ಯವಾದಗಳು' ಎಂದು ಪತ್ರದಲ್ಲಿ ದೀಪ್ಕೆ ಹೇಳಿದ್ದಾರೆ.
'ಮೃತ ಮಕ್ಕಳ ಕುಟುಂಬಕ್ಕೆ ₹2 ಲಕ್ಷ ಪರಿಹಾರ ಘೋಷಿಸಿದೆವು. ಬುಡಕಟ್ಟು ಜನರ ಪ್ರತಿಭಟನೆ ಬಳಿಕ ಪರಿಹಾರವನ್ನು ₹4 ಲಕ್ಷಕ್ಕೆ ಏರಿಸಿದೆವು. ಈ ಬಳಿಕ, ಅಹಿತಕರ ಪ್ರಶ್ನೆಯೊಂದು ಉದ್ಭವಿಸಿತು. ಸಚಿವರು, ಶಾಸಕರ ಮಕ್ಕಳು ಮೃತಪಟ್ಟಿದ್ದರೆ ಆಗ ₹4 ಲಕ್ಷ ಪರಿಹಾರ ನೀಡಿದ್ದರೆ ಒಪ್ಪಿಕೊಳ್ಳಬಹುದಿತ್ತೇ? ಬುಡಕಟ್ಟು ಮಕ್ಕಳ ಜೀವಕ್ಕೆ ನಾವು ನೀಡುವ ಬೆಲೆ ಸಣ್ಣದು ಎಂದು ಇದು ತೋರಿಸಿತು' ಎಂದಿದ್ದಾರೆ.
ಮಕ್ಕಳ ಸಾವು: ದಡಾರಾ, ಮಲೇರಿಯಾ, ಅತಿಸಾರ ಮತ್ತು ಚರ್ಮ ಸಂಬಂಧಿ ಸೋಂಕುಗಳಿಗೆ ಬಾಲಾಘಾಟ್ ಜಿಲ್ಲೆಯಲ್ಲಿ ಕಳೆದ ಎರಡೂವರೆ ತಿಂಗಳಲ್ಲಿ ಬುಡಕಟ್ಟು ಸಮುದಾಯದ 27ಕ್ಕೂ ಅಧಿಕ ಮಕ್ಕಳು ಮೃತಪಟ್ಟಿದ್ದಾರೆ.

