ನವದೆಹಲಿ: ಮಧ್ಯಪ್ರದೇಶದಲ್ಲಿ ಎರಡು ದಶಕಗಳ ಹಿಂದೆ ಸುಮಾರು 1.8 ಕೆ.ಜಿ.ಚರಸ್ ಹೊಂದಿದ್ದ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಇಬ್ಬರು ವ್ಯಕ್ತಿಗಳನ್ನು ಸರ್ವೋಚ್ಚ ನ್ಯಾಯಾಲಯವು ಖುಲಾಸೆಗೊಳಿಸಿದೆ. ವಶಪಡಿಸಿಕೊಂಡ ವಸ್ತುವನ್ನು ಗುರುತಿಸಲು ಅದನ್ನು ಸುಡುವುದರಿಂದ ಅದು ಮಾದಕ ದ್ರವ್ಯವೆಂದು ವೈಜ್ಞಾನಿಕವಾಗಿ ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಹೇಳಿದೆ.
ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ಮನಮೋಹನ್ ಅವರ ಪೀಠವು ಅಬ್ದುಲ್ ರಾಜಿಕ್ ಮತ್ತು ಗೋವಿಂದ್ ಅವರ ದೋಷನಿರ್ಣಯವನ್ನು ರದ್ದುಗೊಳಿಸಿತು. ಈ ಇಬ್ಬರನ್ನು ನವೆಂಬರ್ 29,2004 ರಂದು ಜಬಲ್ಪುರ್ದಲ್ಲಿ ಮಾದಕ ದ್ರವ್ಯವಿತ್ತೆನ್ನಲಾದ ಎರಡು ಚೀಲಗಳೊಂದಿಗೆ ಬಂಧಿಸಲಾಗಿತ್ತು.
2006ರಲ್ಲಿ ವಿಚಾರಣಾ ನ್ಯಾಯಾಲಯವು ರಾಜಿಕ್ಗೆ 10 ವರ್ಷಗಳ ಮತ್ತು ಗೋವಿಂದ್ಗೆ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. 2010 ರಲ್ಲಿ ಮಧ್ಯಪ್ರದೇಶ ಉಚ್ಚನ್ಯಾಯಾಲಯವು ಈ ತೀರ್ಪನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ವಸ್ತುವಿನ ಒಂದು ಭಾಗವನ್ನು ಸುಡುವುದರ ಮೂಲಕ ಚರಸ್ ಎಂದು ಗುರುತಿಸಲಾಗಿದೆ ಎಂಬ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದ ಅಧಿಕಾರಿಯ ವಾದವನ್ನು ಪೀಠವು ತಳ್ಳಿಹಾಕಿತು.
ವಸ್ತುವನ್ನು ಸುಡುವುದರಿಂದ ಮಾತ್ರ ಅದರ ಸ್ವರೂಪ ಅಥವಾ ಮಾದಕ ದ್ರವ್ಯವೆಂದು ನಿರ್ಧರಿಸಲು ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂದು ಹೇಳಿದ ಪೀಠವು,ವಿಶ್ವಾಸಾರ್ಹ ವೈಜ್ಞಾನಿಕ ಪುರಾವೆಗಳಿಲ್ಲದೆ ಕೇವಲ ಅಧಿಕಾರಿಯ ಹೇಳಿಕೆಯು ವಶಪಡಿಸಿಕೊಂಡ ವಸ್ತುವು ಚರಸ್ ಎಂದು ಸಾಬೀತುಪಡಿಸುವುದಿಲ್ಲ ಎಂದು ಎತ್ತಿ ಹಿಡಿಯಿತು.
ಇದರೊಂದಿಗೆ, ಪ್ರಾಸಿಕ್ಯೂಷನ್ ಪ್ರಕರಣವನ್ನು ದುರ್ಬಲಗೊಳಿಸಿದ ಹಲವು ಪ್ರಕ್ರಿಯಾತ್ಮಕ ಲೋಪಗಳನ್ನು ಬೆಟ್ಟು ಮಾಡಿದ ನ್ಯಾ.ಮೆಹ್ತಾ,ದಾಖಲಿತ 1.8 ಕೆ.ಜಿ.ತೂಕದಲ್ಲಿ ಪ್ಯಾಕೇಜಿಂಗ್ ಸೇರಿದೆಯೇ ಅಥವಾ ಇಲ್ಲವೇ ಎಂಬ ಸ್ಪಷ್ಟತೆ ಇರಲಿಲ್ಲ. ಸ್ಯಾಂಪಲ್ ಪ್ಯಾಕೆಟ್ಗಳ ಮೇಲೆ ಅಧಿಕಾರಿಯ, ಸಾಕ್ಷಿಗಳ ಮತ್ತು ಆರೋಪಿಗಳ ಸಹಿಗಳು ಇರಲಿಲ್ಲ ಮತ್ತು ಯಾವುದೇ ಗುರುತುಗಳೂ ಇರಲಿಲ್ಲ ಎಂದು ಹೇಳಿದರು.
ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ವರದಿಯಲ್ಲಿ ಆರೋಪಿಗಳ ಸಹಿ ಅಥವಾ ಹೆಬ್ಬೆಟ್ಟಿನ ಗುರುತಿನ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಮುಖ್ಯವಾಗಿ ಡಿಸೆಂಬರ್ 1ರಿಂದ ಡಿಸೆಂಬರ್ 6,2004ರ ನಡುವಿನ ಐದು ದಿನಗಳ ಅವಧಿಯಲ್ಲಿ ಸ್ಯಾಂಪಲ್ಗಳು ಎಲ್ಲಿದ್ದವು ಎನ್ನುವುದನ್ನು ವಿವರಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲಗೊಂಡಿದೆ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು,ಸ್ಯಾಂಪಲ್ಗಳನ್ನು ಮ್ಯಾಜಿಸ್ಟ್ರೇಟ್ ಉಪಸ್ಥಿತಿಯಲ್ಲಿ ಪಡೆದುಕೊಳ್ಳುವುದನ್ನು ಅಗತ್ಯವಾಗಿಸಿರುವ ಎನ್ಡಿಪಿಎಸ್ ಕಾಯಿದೆಯ ಕಲಂ 52-ಎ ಅನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವುದನ್ನು ಗಮನಕ್ಕೆ ತೆಗೆದುಕೊಂಡಿತು.
ಈ ಲೋಪಗಳು ಪ್ರಾಸಿಕ್ಯೂಷನ್ ಪ್ರಕರಣವನ್ನು ದುರ್ಬಲಗೊಳಿಸಿವೆ ಮತ್ತು ಎಫ್ಎಸ್ಎಲ್ ವರದಿಯನ್ನು ನೆಚ್ಚಿಕೊಳ್ಳದಂತೆ ಮಾಡಿವೆ. ಚರಸ್ ಎಂದು ಸಾಬೀತುಪಡಿಸಲು ಯಾವುದೇ ಮಾನ್ಯ ಪುರಾವೆಗಳಿಲ್ಲ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು, ಮೇಲ್ಮನವಿದಾರರಿಗೆ ಸಂಶಯದ ಲಾಭವನ್ನು ನೀಡಿ ಅವರನ್ನು ಖುಲಾಸೆಗೊಳಿಸಿತು.

