ನವದೆಹಲಿ: ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಅಂಗೀಕಾರ ಪಡೆಯಲು ಈ ತಿಂಗಳ ಅಂತ್ಯದಲ್ಲಿ ಸಂಸತ್‌ನ ಮೂರು ದಿನಗಳ ವಿಶೇಷ ಅಧಿವೇಶನ ಕರೆಯುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಈ ಸಂಬಂಧ ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಕ್ಷಗಳನ್ನು ಸಂಪರ್ಕಿಸಿ ಕೇಂದ್ರ ಸರ್ಕಾರ ಅಭಿಪ್ರಾಯ ಪಡೆದಿದೆ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್ 21ರಂದು ಮುಕ್ತಾಯಗೊಂಡಿರುವ ಮುಂಗಾರು ಅಧಿವೇಶನವನ್ನು ಸರ್ಕಾರವು ಇನ್ನೂ ಅಧಿಕೃತವಾಗಿ ಸಮಾಪನೆಗೊಳಿಸಿಲ್ಲ.
ಸೆಪ್ಟೆಂಬರ್ ಅಂತ್ಯದಲ್ಲಿ ಅಧಿವೇಶನ ನಡೆಯಬಹುದು ಎಂದು ಎನ್‌ಡಿಎಯ ಪ್ರಮುಖ ಮಿತ್ರಪಕ್ಷವೊಂದರ ಹಿರಿಯ ನಾಯಕರೊಬ್ಬರು ತಿಳಿಸಿದರು. 'ವಿಶೇಷ ಅಧಿವೇಶನದ ಕುರಿತು ನಾವು ಬಿಜೆಪಿ ನಾಯಕತ್ವದೊಂದಿಗೆ ಚರ್ಚಿಸಿದ್ದೇವೆ. ಅಧಿವೇಶನವು ಸೆಪ್ಟೆಂಬರ್ 24ರಿಂದ 26ರವರೆಗೆ ನಡೆಯಲಿದೆ ಎಂದು ನಮಗೆ ತಿಳಿಸಲಾಗಿದೆ' ಎಂದು ಆ ನಾಯಕರು ಹೇಳಿದರು. ವಿಶೇಷ ಅಧಿವೇಶನದ ಸಾಧ್ಯತೆಯ ಬಗ್ಗೆ ತಮಗೆ ಮಾಹಿತಿ ನೀಡಲಾಗಿದೆ ಎಂದು ಎನ್‌ಡಿಎಯ ಮತ್ತೊಂದು ಪ್ರಮುಖ ಮಿತ್ರಪಕ್ಷವೂ ತಿಳಿಸಿದೆ.
ಆದಾಗ್ಯೂ, ಸಂಸತ್ತಿನ ಅಧಿಕಾರಿಗಳು ಈ ವಿಷಯದ ಬಗ್ಗೆ ಮೌನ ವಹಿಸಿದ್ದಾರೆ. 'ಸಿದ್ಧತೆಗಳನ್ನು ನಡೆಸುವ ಕುರಿತು ತಮಗೆ ಯಾವುದೇ ಸೂಚನೆಗಳು ಬಂದಿಲ್ಲ' ಎಂದು ಅವರು ತಿಳಿಸಿದರು.
ಅಧಿವೇಶನ ಸಂಬಂಧ ಕಾಂಗ್ರೆಸ್ ಪಕ್ಷದ ನಾಯಕರ ಜತೆಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ, ಇದನ್ನು ಕಾಂಗ್ರೆಸ್ ನಿರಾಕರಿಸಿದೆ. 'ಕಾಂಗ್ರೆಸ್ ಜತೆಗೆ ರಿಜಿಜು ಚರ್ಚೆ ನಡೆಸಿಲ್ಲ. ಈ ವಿಷಯದಲ್ಲಿ ಪಕ್ಷದ ನಿಲುವಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ' ಎಂದು ಕಾಂಗ್ರೆಸ್ ನಾಯಕರೊಬ್ಬರು ಸ್ಪಷ್ಟಪಡಿಸಿದರು.

