ನವದೆಹಲಿ: ತೃಣಮೂಲ ಕಾಂಗ್ರೆಸ್ ಪಕ್ಷದ ಹೆಸರು ಮತ್ತು ಚಿಹ್ನೆ ತಡೆಹಿಡಿದಿರುವ ಚುನಾವಣಾ ಆಯೋಗದ ನಡೆ ಪ್ರಶ್ನಿಸಿ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಪಕ್ಷದ ಗುರುತನ್ನು ಕಳೆದುಕೊಂಡಿದ್ದು, ತಾಯಿ, ಮಗುವನ್ನು ಕಳೆದುಕೊಂಡಂತೆ ಎಂದಿರುವ ಅವರು, ಈ ಬೆಳವಣಿಗೆಯು ದೇಶದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ 'ಕರಾಳ ದಿನ'ವಾಗಿದೆ ಎಂದು ಟೀಕಿಸಿದ್ದಾರೆ.
'ಮಗುವನ್ನು ಕಳೆದುಕೊಂಡ ನೋವು ತಾಯಿಗೆ ಮಾತ್ರ ಅರ್ಥವಾಗುತ್ತದೆ. ತಾಯಿಯನ್ನು ಕಳೆದುಕೊಂಡ ನೋವು, ಮಗುವಿಗೆ ಮಾತ್ರ ಅರ್ಥವಾಗುತ್ತದೆ. ಹೋರಾಟದ ಮೂಲಕ ಪಕ್ಷ ಕಟ್ಟಿದವರಿಗೆ ಮಾತ್ರ ಅದರ ನೋವು ಗೊತ್ತಾಗುತ್ತದೆ' ಎಂದಿದ್ದಾರೆ.
ಈ ನಡುವೆ, ಅಕ್ಟೋಬರ್ 6ರಂದು ನಡೆಯಲಿರುವ ನಂದಿಗ್ರಾಮ ಮತ್ತು ರೆಜಿನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಮಮತಾ ಬಣಕ್ಕೆ 'ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್' ಎಂಬ ಪಕ್ಷದ ಹೆಸರು ಮತ್ತು 'ಫುಟ್ಬಾಲ್ ಆಟಗಾರ' ಚಿಹ್ನೆಯನ್ನು ಚುನಾವಣಾ ಆಯೋಗ ನೀಡಿದೆ.
ಚುನಾವಣಾ ಆಯೋಗದ ಈ ಮಧ್ಯಂತರ ವ್ಯವಸ್ಥೆಯನ್ನು ಎಂದಿಗೂ ಸ್ವೀಕರಿಸುವುದಿಲ್ಲ. ಪಕ್ಷದ ಮೂಲ ಗುರುತನ್ನು ಮರಳಿ ಪಡೆಯಲು, ರಾಜಕೀಯ, ಪ್ರಜಾಸತ್ತಾತ್ಮಕ ಮತ್ತು ಕಾನೂನಾತ್ಮಕವಾಗಿ ಕೊನೆಯವರೆಗೂ ಹೋರಾಡುವುದಾಗಿ ಹೇಳಿದ್ದಾರೆ.
ಚುನಾವಣಾ ಆಯೋಗದ ಈ ನಿರ್ಧಾರದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಎಎಪಿ ವರಿಷ್ಠ ಅರವಿಂದ ಕೇಜ್ರಿವಾಲ್ ತಮ್ಮ ಜೊತೆ ಚರ್ಚಿಸಿದ್ದಾರೆ ಎಂದೂ ಹೇಳಿದ್ದಾರೆ.
ಪಕ್ಷ ಮತ್ತು ಚಿಹ್ನೆ ಕುರಿತ ವಿವಾದದ ಬಗ್ಗೆ ಅಂತಿಮ ತೀರ್ಮಾನ ಆಗುವವರೆಗೆ 'ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್'(ಎಐಟಸಿ) ಪಕ್ಷದ ಹೆಸರು ಮತ್ತು ಚಿಹ್ನೆ ಬಳಸದಂತೆ ಉಭಯ ಪಕ್ಷಗಳಿಗೂ ಆಯೋಗ ತಡೆ ವಿಧಿಸಿದೆ. ಅದರ ಬೆನ್ನಲ್ಲೇ, ಮಧ್ಯಂತರ ಆದೇಶದಲ್ಲಿ ಎರಡೂ ಬಣಗಳಿಗೂ ಪ್ರತ್ಯೇಕ ಪಕ್ಷದ ಹೆಸರು ಮತ್ತು ಚಿಹ್ನೆ ನೀಡಿದೆ.

