ನವದೆಹಲಿ: ಭಾರತ ವಿವಿಧ ದೇಶಗಳೊಂದಿಗೆ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದಗಳು ಯುವಕರಿಗೆ ಹೊಸ ಉದ್ಯೋಗದ ಅವಕಾಶಗಳನ್ನು ತೆರೆಯುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ವರ್ಚುವಲ್ ಆಗಿ ನಡೆದ 'ಉದ್ಯೋಗ ಮೇಳ' ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಭಾರತದ ಯುವಕರ ಪ್ರತಿಭೆ ಮತ್ತು ಕೌಶಲಗಳು ಇಡೀ ವಿಶ್ವದ ನಂಬಿಕೆಯನ್ನು ಗೆದ್ದಿವೆ.
ವಿಶ್ವವು ಭಾರತದ ನವೋದ್ಯಮಿಗಳು, ಉದ್ಯಮಿಗಳು ಮತ್ತು ಯುವಶಕ್ತಿಯ ಬಗ್ಗೆ ಬಹುದೊಡ್ಡ ನಿರೀಕ್ಷೆಗಳನ್ನು ಇರಿಸಿಕೊಂಡಿದೆ ಎಂದರು.
''ಭಾರತ 40 ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ. ಈ ಮುಕ್ತ ವ್ಯಾಪಾರ ಒಪ್ಪಂದಗಳು ನಮ್ಮ ಯುವಕರಿಗೆ ಹೊಸ ಸಾಧ್ಯತೆಗಳ ಬಾಗಿಲುಗಳನ್ನು ತೆರೆಯುತ್ತಿವೆ. ಇಂತಹ ವ್ಯಾಪಾರ ಒಪ್ಪಂದಗಳು ನಮ್ಮ ಉದ್ಯಮಿಗಳಿಗೆ ಹೊಸ ಪಾಲುದಾರಿಕೆಗಳಿಗೆ, ಹೊಸ ಮಾರುಕಟ್ಟೆಗಳಿಗೆ ದಾರಿ ಮಾಡಿಕೊಡುತ್ತಿವೆ. ಯುವಕರಿಗೆ ವೃತ್ತಿಜೀವನದಲ್ಲಿ ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತಿವೆ'' ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪ್ರಧಾನಿಯವರು ವಿವಿಧ ಸರಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ನೂತನವಾಗಿ ಸೇರ್ಪಡೆಯಾಗಲಿರುವ ಹೊಸದಾಗಿ ಆಯ್ಕೆಯಾದ ಯುವಕರಿಗೆ 51 ಸಾವಿರಕ್ಕೂ ಅಧಿಕ ನೇಮಕಾತಿ ಪತ್ರಗಳನ್ನು ವರ್ಚುವಲ್ ಆಗಿ ವಿತರಿಸಿದರು.
ಇತ್ತೀಚೆಗೆ ಮುಕ್ತಾಯಗೊಂಡ ಬ್ರಿಕ್ಸ್ ಶೃಂಗಸಭೆಯನ್ನು ಉಲ್ಲೇಖಿಸಿದ ಪ್ರಧಾನಿ, ಬ್ರಿಕ್ಸ್ ಸಹಕಾರ ಕೇವಲ ಸರಕಾರಗಳಿಗೆ ಮಾತ್ರ ಸೀಮಿತವಾಗಿರಬಾರದು ಎಂಬುದು ಭಾರತದ ಇಚ್ಛೆ ಎಂದರು.
''ನಮ್ಮ ಉದ್ಯಮಿಗಳು, ನಮ್ಮ ರೈತರು, ನಮ್ಮ ಮಹಿಳೆಯರು, ನಮ್ಮ ಯುವಕರು-ಪ್ರತಿಯೊಬ್ಬರೂ ಈ ಪಾಲುದಾರಿಕೆಯಲ್ಲಿ ಸಕ್ರಿಯ ಭಾಗಿದಾರರಾಗಿರಬೇಕು'' ಎಂದು ಅವರು ಹೇಳಿದರು.
ದೇಶದ ಸ್ಟಾರ್ಟ್‌ಅಪ್ ವ್ಯವಸ್ಥೆಯನ್ನು ಉಲ್ಲೇಖಿಸಿದ ಪ್ರಧಾನಿ, ಭಾರತದ ಯುವಶಕ್ತಿ ಇದರಲ್ಲಿ ಪ್ರತಿಫಲಿಸುತ್ತದೆ ಮತ್ತು ಸ್ಟಾರ್ಟ್‌ಅಪ್ ವ್ಯವಸ್ಥೆಯು ಇನ್ನು ಮುಂದೆ ಕೇವಲ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿರದೆ ಇತರ ನಗರಗಳಿಗೂ ವಿಸ್ತರಿಸಲಿದೆ ಎಂದರು.
2027ರ ವೇಳೆಗೆ ವಿಕಸಿತ ಭಾರತವನ್ನು ನಿರ್ಮಿಸುವ ಅತ್ಯಂತ ಮಹತ್ವದ ಗುರಿಯತ್ತ ದೇಶ ಮುನ್ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

