ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ 6ನೇ ವಾರ್ಷಿಕ ಆರಾಧನೆಯು ಸೆ. 1ರಂದು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಶ್ರೀಮಠದಲ್ಲಿ ಜರುಗಲಿದೆ.
ಬೆಳಗ್ಗೆ 6.30ರಿಂದ ಮಹಾಪೂಜೆ, ಭಜನೆ, ಧ್ವಜಾರೋಹಣ ಹಾಗೂ ಅಖಿಲ ಭಾರತೀಯ ಕುಟುಂಬ ಪ್ರಬೋಧಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ಟರಿಂದ ಆಶಯ ಭಾಷಣ ನಡೆಯಲಿದೆ.
ಬೆಳಗ್ಗೆ 10ಕ್ಕೆ ಭಕ್ತಿಸಂಗೀತ ಹಾಗೂ ಮಧ್ಯಾಹ್ನ 12 ಗಂಟೆಯಿಂದ ಮಹಾಪೂಜೆ, ವೃಂದಾವನ ಪೂಜೆ ಮತ್ತು ಮಂತ್ರಾಕ್ಷತೆ ನಡೆಯಲಿದೆ. ಮಧ್ಯಾಹ್ನ 2.30ರಿಂದ ನಡೆಯುವ ಆರಾಧನೋತ್ಸವ ಮಹಾಸಭೆಯಲ್ಲಿ ಕರ್ನಾಟಕ ಸರ್ಕಾರದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅಧ್ಯಕ್ಷತೆ ವಹಿಸಲಿದ್ದಾರೆ.
ಕರ್ನಾಟಕ ಸರ್ಕಾರದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶಾಮ್ ಭಟ್ ಐಎಎಸ್ ಗೌರವ ಉಪಸ್ಥಿತರಿರುವರು. ವಯೋಲಿನ್ ವಾದಕ ವಿದ್ವಾನ್ ವಿರಳ ರಾಮಮೂರ್ತಿ ಅವರಿಂದ ಗುರುಸ್ಮರಣೆ ನಡೆಯಲಿದೆ. ಉದ್ಯಮಿ ಸುರೇಶ್ ಕೆ. ನಾಯಕ್ ಪುಣೆ ಅವರಿಗೆ ಶ್ರೀ ಕೇಶವಾನಂದ ಭಾರತೀ ಸ್ಮೃತಿ ಗೌರವ ಪ್ರದಾನ ಮಾಡಲಾಗುವುದು.
ಸಂಜೆ 4.30ರಿಂದ ಸಂಗೀತ ಕಚೇರಿಯಲ್ಲಿ ವಿದ್ವಾನ್ ಡಾ. ಚೇರ್ತಲ ಕೆ.ಎನ್. ರಂಗನಾಥ ಶರ್ಮ ಅವರ ಹಾಡುಗಾರಿಕೆ ನಡೆಯುವುದು. ವಯೋಲಿನ್ ನಲ್ಲಿ ವಿದ್ವಾನ್ ವಿರಳ ರಾಮಮೂರ್ತಿ, ಮೃದಂಗದಲ್ಲಿ ವಿದ್ವಾನ್ ಬಿ. ಶಿವರಾಮನ್ ಹಾಗೂ ಘಟದಲ್ಲಿ ವಿದ್ವಾನ್ ಡಾ. ಸುರೇಶ್ ವೈದ್ಯನಾಥನ್ ಸಾಥ್ ನೀಡಲಿದ್ದಾರೆ.
ರಾತ್ರಿ 7 ಗಂಟೆಯಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ತೆಂಕುತಿಟ್ಟು ಯಕ್ಷಗಾನ ಬಯಲಾಟ 'ಶ್ರೀಕೃಷ್ಣ ಜನ್ಮ ಸುಂದೋಪಸುಂದ' ಪ್ರದರ್ಶನಗೊಳ್ಳಲಿದೆ. ಹನುಮಗಿರಿ ಮೇಳದ ಪ್ರಧಾನ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ ಹಾಗೂ ಪ್ರಸಿದ್ಧ ಕಲಾವಿದರು ಯಕ್ಷಗಾನ ಪ್ರದರ್ಶನ ನೀಡಲಿದ್ದಾರೆ.



