ಅಹಮದಾಬಾದ್: ಗುಜರಾತ್ ನ ಸ್ಥಳೀಯ ಸುದ್ದಿ ವಾಹಿನಿ 'ಪ್ರದೇಶ್ 24 ಗುಜರಾತಿ'ಯ ನ್ಯೂಸ್ ರೂಂನಲ್ಲಿ ವಿಶ್ವ ಹಿಂದೂ ಪರಿಷತ್ (ಗಿಊP) ನಾಯಕ ಜ್ವಾಲಿತ್ ಮೆಹ್ತಾ, ನಿರೂಪಕಿಯರಿಗೆ ತ್ರಿಶೂಲಗಳನ್ನು ವಿತರಿಸಿರುವ ಘಟನೆ ನಡೆದಿದೆ. ಬಳಿಕ ನಿರೂಪಕಿಯರು ತ್ರಿಶೂಲ ಹಿಡಿದು ಕುತ್ತಿಗೆ ಸೀಳುವ ರೀತಿಯ ಸನ್ನೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಾಹಿನಿಯ ಸಾಮಾಜಿಕ ಜಾಲತಾಣ ಖಾತೆಯಲ್ಲೇ ಹಂಚಿಕೊಳ್ಳಲಾಗಿರುವ 53 ಸೆಕೆಂಡ್ ಗಳ ವೀಡಿಯೋದಲ್ಲಿ, ಜ್ವಾಲಿತ್ ಮೆಹ್ತಾ ನ್ಯೂಸ್ ರೂಂಗೆ ಭೇಟಿ ನೀಡಿ ಟಿವಿ ನಿರೂಪಕಿಯರಿಗೆ ತ್ರಿಶೂಲಗಳನ್ನು ನೀಡುತ್ತಿರುವುದು ಕಂಡುಬಂದಿದೆ. ಬಳಿಕ ನಿರೂಪಕಿಯರು ತ್ರಿಶೂಲ ಹಿಡಿದು ಕುತ್ತಿಗೆ ಸೀಳುವಂತಹ ಸನ್ನೆ ಮಾಡಿದ್ದಾರೆ. ವೈರಲ್ ಆಗಿರುವ ವೀಡಿಯೋದಲ್ಲಿ ಧಾರ್ಮಿಕ ಹಿನ್ನೆಲೆ ಸಂಗೀತವೂ ಇದೆ. ಈ ಕಾರ್ಯಕ್ರಮವು VHPಯ 'ತ್ರಿಶೂಲ ದೀಕ್ಷೆ' ಯೋಜನೆಯ ಭಾಗವಾಗಿತ್ತು ಎಂದು ವರದಿಯಾಗಿದೆ.
ಸುದ್ದಿ ವಾಹಿನಿಯೇ ಧಾರ್ಮಿಕ ಹಿನ್ನೆಲೆ ಸಂಗೀತದೊಂದಿಗೆ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿದ್ದು, ಮಾಧ್ಯಮ ಸಂಸ್ಥೆಗಳು ತಟಸ್ಥವಾಗಿ ಮತ್ತು ಪಕ್ಷಪಾತವಿಲ್ಲದೆ ಕಾರ್ಯನಿರ್ವಹಿಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ವೀಡಿಯೋ ಕುರಿತು ಟೀಕೆ ವ್ಯಕ್ತವಾದ ಬೆನ್ನಲ್ಲೇ ವಾಹಿನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಹಾಗೂ ಪ್ರಧಾನ ಸಂಪಾದಕ ರಾಹುಲ್ ಸಿಂಗ್ ಅವರು ತ್ರಿಶೂಲ ವಿತರಣೆಯನ್ನು ಸಮರ್ಥಿಸಿಕೊಂಡಿದ್ದಾರೆ.
'ಸೈಬರ್ ದಾಳಿಗೊಳಗಾದ ಮಹಿಳಾ ಪತ್ರಕರ್ತೆಯೊಬ್ಬರೊಂದಿಗೆ ಒಗ್ಗಟ್ಟು ಪ್ರದರ್ಶಿಸುವ ಸಾಂಕೇತಿಕ ಕ್ರಮ'ವಾಗಿ ತ್ರಿಶೂಲ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ನಿರೂಪಕಿಯರಲ್ಲಿ ಒಬ್ಬರನ್ನು 20 ವರ್ಷದ ಪಿಯಾ ಗಢ್ವಿ ಎಂದು ತಮ್ಮ ಪೋಸ್ಟ್ ನಲ್ಲಿ ಅವರು ಉಲ್ಲೇಖಿಸಿದ್ದಾರೆ. ಸ್ವಯಂಘೋಷಿತ ದೇವಮಾನವ ಹಾಗೂ ಅಪರಾಧಿ ಎಂದು ಸಾಬೀತಾಗಿರುವ 'ಸಂತ ರಾಂಪಾಲ್ ಜಿ ಮಹಾರಾಜ್' ಎಂದೇ ಕುಖ್ಯಾತ ರಾಂಪಾಲ್ ಸಿಂಗ್ ಜಾಟಿನ್ ಕುರಿತು ವರದಿ ಮಾಡಿದ ಬಳಿಕ ಪಿಯಾ ಗಢ್ವಿ ಅವರು ಸೈಬರ್ ಬೆದರಿಕೆ ಮತ್ತು ಕಿರುಕುಳಕ್ಕೆ ಒಳಗಾಗಿದ್ದರು ಎಂದು ರಾಹುಲ್ ಸಿಂಗ್ ಆರೋಪಿಸಿದ್ದಾರೆ.
'ರಾಂಪಾಲ್ ಕುರಿತು ವರದಿ ಮಾಡಿದ ಬಳಿಕ ಪಿಯಾ ಗಢ್ವಿ ಅವರು ಸಂಘಟಿತ ಸೈಬರ್ ಕಿರುಕುಳ ಅಭಿಯಾನಕ್ಕೆ ಗುರಿಯಾಗಿದ್ದರು. ಅವರಿಗೆ ಸಾವಿರಾರು ನಿಂದನೀಯ ಕರೆಗಳು ಬಂದಿದ್ದವು. ಕಿರುಕುಳ ನೀಡಿದವರಲ್ಲಿ ಒಬ್ಬರು AI ಮೂಲಕ ಸೃಷ್ಟಿಸಿದ ಅವರ ಬೆತ್ತಲೆ ಚಿತ್ರಗಳನ್ನು ಸೃಷ್ಟಿಸಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು' ಎಂದು ರಾಹುಲ್ ಸಿಂಗ್ ಅವರ ಪೋಸ್ಟ್ ನಲ್ಲಿ ತಿಳಿಸಲಾಗಿದೆ.
'ಗುಜರಾತ್ ನಲ್ಲಿ ಮಹಿಳೆಯ ಘನತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಗುಜರಾತಿ ಮಹಿಳೆಯರಿಗೆ ತಮ್ಮ ಪರವಾಗಿ ಹೇಗೆ ನಿಲ್ಲಬೇಕೆಂದು ತಿಳಿದಿದೆ. ಬೆದರಿಕೆ, ಸೈಬರ್ ನಿಂದನೆ ಮತ್ತು ಆತಂಕ ಹುಟ್ಟಿಸುವ ಕ್ರಮಗಳ ವಿರುದ್ಧ ನಮ್ಮ ನ್ಯೂಸ್ ರೂಂ ಅವರೊಂದಿಗೆ ನಿಲ್ಲುವುದನ್ನು ಮುಂದುವರಿಸುತ್ತದೆ' ಎಂದು ಅವರು ಹೇಳಿದ್ದಾರೆ.
ಪತ್ರಕರ್ತ ಮುಹಮ್ಮದ್ ಝುಬೈರ್ ಅವರು ಈ ವೀಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿನ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 'ಪ್ರದೇಶ್ 24 ಗುಜರಾತಿ' ವಾಹಿನಿಯು VHP ನಾಯಕ ಜ್ವಾಲಿತ್ ಮೆಹ್ತಾ ನನ್ನು ನ್ಯೂಸ್ ರೂಂ ಗೆ ಆಹ್ವಾನಿಸಿತ್ತು. ಅಲ್ಲಿ ಆತನು ನಿರೂಪಕಿಯರಿಗೆ ತ್ರಿಶೂಲ ನೀಡುತ್ತಿರುವುದು ಮತ್ತು ಬಳಿಕ ನಿರೂಪಕಿಯರು ತ್ರಿಶೂಲ ಹಿಡಿದು ಕುತ್ತಿಗೆ ಸೀಳುವಂತಹ ಸನ್ನೆ ಮಾಡುತ್ತಿರುವುದು ಕಂಡುಬರುತ್ತದೆʼ ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಈ ಪೋಸ್ಟ್ ಗೆ ಹಲವಾರು ಪ್ರತಿಕ್ರಿಯೆಗಳು ಬಂದಿದೆ. ಮೈಕೆಲ್ ಜೆರೋಮ್ ಕೂಲಾ ಅವರು, ಕೆಲವು ಮಾಧ್ಯಮ ಸಂಸ್ಥೆಗಳು ನಿರ್ದಿಷ್ಟ ವ್ಯಕ್ತಿಗಳು ಅಥವಾ ಗುಂಪುಗಳ ಒಡೆತನದಲ್ಲಿದ್ದಾಗ ಇಂತಹ ಬೆಳವಣಿಗೆಗಳು ನಡೆಯುತ್ತವೆ ಎಂದು ಟೀಕಿಸಿದ್ದಾರೆ. 'ಸುದ್ದಿ ವಾಹಿನಿ'ಗಳಲ್ಲಿ ಇಂತಹ ಕಾರ್ಯಕ್ರಮಗಳ ಹಿಂದಿರುವವರು ಆತ್ಮಾವಲೋಕನ ಮಾಡಿಕೊಂಡು ಸುದ್ದಿಯ ನಿಜವಾದ ವ್ಯಾಖ್ಯಾನವೇನೆಂದು ಅರಿಯಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರೋಶಿನಿ ಸೇನ್ ಅವರು, 'ಹಿಂದುತ್ವದ ಏಕತೆಯು ಭಾರತೀಯ ಮುಸ್ಲಿಮರ ಮೇಲಿನ ದ್ವೇಷದ ಮೇಲೆ ಆಧಾರಿತವಾಗಿದೆ' ಎಂದು ಟೀಕಿಸಿದ್ದಾರೆ.
ರೆಹ್ಮಾನ್ ಬೆಂಗಳೂರು ಅವರು 'ಪ್ರದೇಶ್ 24 ಗುಜರಾತಿ' ಟಿವಿ ನೋಂದಾಯಿತವಾಗಿದೆಯೇ ಮತ್ತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ (MIB) ಪರವಾನಗಿ ಪಡೆದಿದೆಯೇ ಎಂಬುದನ್ನು ಪರಿಶೀಲಿಸುವಂತೆ MIB ಹಾಗೂ ಗುಜರಾತ್ ಮಾಹಿತಿ ಇಲಾಖೆಯನ್ನು ಒತ್ತಾಯಿಸಿದ್ದಾರೆ.

