ನವದೆಹಲಿ: ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಸಾಗಾಟ ಮತ್ತು ಅವರ ಶೋಷಣೆಯ ವಿರುದ್ಧದ ವಿಶೇಷ ಅಖಿಲ ಭಾರತ ಅಭಿಯಾನದ ಸಂದರ್ಭ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) 3,800ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿದೆ ಮತ್ತು 575ಕ್ಕೂ ಅಧಿಕ ಎಫ್‌ಐಆರ್‌ಗಳನ್ನು ದಾಖಲಿಸಲು ಅನುವು ಮಾಡಿ ಕೊಟ್ಟಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ತಿಳಿಸಿದೆ.
ಬಾಲಕಾರ್ಮಿಕ ಪದ್ಧತಿಯಲ್ಲಿ ತೊಡಗಿರುವ ಅಥವಾ ಸಾಗಾಟ ಹಾಗೂ ಶೋಷಣೆಗೆ ಒಳಗಾಗುವ ಸಾಧ್ಯತೆ ಇರುವ ಮಕ್ಕಳನ್ನು ಗುರುತಿಸಿ ರಕ್ಷಿಸಲು ಎನ್‌ಸಿಪಿಸಿಆರ್ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳೊಂದಿಗೆ ಸಮನ್ವಯ ಸಾಧಿಸಿ ಜೂನ್ 12ರಂದು ಪ್ರಾರಂಭಿಸಿದ ''ಅಖಿಲ ಭಾರತ ರಕ್ಷಣೆ ಮತ್ತು ಪುನರ್ವಸತಿ'' ಅಭಿಯಾನ ಆಗಸ್ಟ್ 31ರ ವರೆಗೆ ಮುಂದುವರಿಯಿತು.
ಬಾಲಕಾರ್ಮಿಕ ಪದ್ಧತಿ ಮತ್ತು ಮಕ್ಕಳ ಸಾಗಾಟ ತಾಣಗಳೆಂದು ಗುರುತಿಸಲಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲು ಕಾನೂನುಬದ್ಧ ಮಕ್ಕಳ ಹಕ್ಕುಗಳ ಸಂಸ್ಥೆಯು ಜಿಲ್ಲಾಧಿಕಾರಿ, ಕಾರ್ಮಿಕ ಇಲಾಖೆ, ಪೊಲೀಸ್ ಅಧಿಕಾರಿಗಳು ಮತ್ತು ಇತರ ಸಂಬಂಧಪಟ್ಟವರೊಂದಿಗೆ ಕೆಲಸ ಮಾಡಿದೆ.
ಅಭಿಯಾನದ ಭಾಗವಾಗಿ ಗುರಿ ನಿಗದಿಪಡಿಸಿದ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುವಂತೆ ಮತ್ತು ರಕ್ಷಿಸಲಾದ ಮಕ್ಕಳ ವಿವರ, ದಾಖಲಾದ ಎಫ್‌ಐಆರ್, ಪುನರ್ವಸತಿ ಕ್ರಮ, ಕುಟುಂಬಗಳಿಗೆ ಮರು ಸೇರ್ಪಡೆ, ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರುವುದು ಮತ್ತು ಪರಿಹಾರ ಮುಂತಾದ ಮುಂದಿನ ಕ್ರಮಗಳ ವಿವರಗಳನ್ನು ನಿಯಮಿತವಾಗಿ ಹಂಚಿಕೊಳ್ಳುವಂತೆ ಎನ್‌ಸಿಪಿಸಿಆರ್ ಅಧಿಕಾರಿಗಳನ್ನು ಕೇಳಿದೆ.
ಅಭಿಯಾನದ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಮತ್ತು ರಕ್ಷಣಾ ಕಾರ್ಯಾಚರಣೆಗಳ ಸಂದರ್ಭ ಎದುರಾದ ಸಮಸ್ಯೆಗಳನ್ನು ಪರಿಹರಿಸಲು ಆಯೋಗವು ಜಿಲ್ಲಾಡಳಿತಗಳೊಂದಿಗೆ ಸಭೆಗಳನ್ನು ನಡೆಸಿದೆ. ಕಾರ್ಯಾಚರಣೆಗಳ ಅಡೆತಡೆಗಳನ್ನು ನಿವಾರಿಸುವುದು, ತೆಗೆದುಕೊಂಡ ಕ್ರಮ ವರದಿಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಇಲಾಖೆಗಳು ಹಾಗೂ ಏಜೆನ್ಸಿಗಳ ನಡುವಿನ ಸಮನ್ವಯವನ್ನು ಸುಧಾರಿಸುವುದರ ಮೇಲೆ ಸಭೆಗಳು ಗಮನ ಹರಿಸಿವೆ ಎಂದು ಸಚಿವಾಲಯ ತಿಳಿಸಿದೆ.
ಎನ್‌ಸಿಪಿಸಿಆರ್ ಸಾಮಾಜಿಕ ಮಾಧ್ಯಮ ಮತ್ತು ಇತರ ಸಂವಹನ ವೇದಿಕೆಗಳ ಮೂಲಕ ಜಾಗೃತಿ ಮತ್ತು ಸಂಪರ್ಕ ಅಭಿಯಾನಗಳನ್ನು ನಡೆಸಿದೆ. ಬಾಲಕಾರ್ಮಿಕ ಪದ್ಧತಿಯನ್ನು ವರದಿ ಮಾಡಲು ಪ್ರೋತ್ಸಾಹಿಸಿದೆ ಮತ್ತು ರಕ್ಷಿಸಲಾದ ಮಕ್ಕಳ ಪುನರ್ವಸತಿ ಹಾಗೂ ಶೈಕ್ಷಣಿಕ ಮುಖ್ಯವಾಹಿನಿಗೆ ತರುವ ಅಗತ್ಯವನ್ನು ಎತ್ತಿ ತೋರಿಸಿದೆ.
ಸಚಿವಾಲಯದ ಪ್ರಕಾರ, ರಾಜ್ಯದ ಅಧಿಕಾರಿಗಳೊಂದಿಗೆ ನಿರಂತರ ಮೇಲ್ವಿಚಾರಣೆ ಮತ್ತು ಸಮನ್ವಯತೆಯು ಅಭಿಯಾನದ ಅವಧಿಯಲ್ಲಿ 3,800ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಲು ಕಾರಣವಾಯಿತು. ಕಾರ್ಯಾಚರಣೆ ಸಂದರ್ಭ ಗುರುತಿಸಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ 575ಕ್ಕೂ ಹೆಚ್ಚು ಎಫ್‌ಐಆರ್‌ಗಳನ್ನು ಕೂಡ ದಾಖಲಿಸಲಾಗಿದೆ.

