ನವದೆಹಲಿ: ಸೆಪ್ಟೆಂಬರ್ ತಿಂಗಳಿನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ₹2.03 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದ್ದು, ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಸಂಗ್ರಹದಲ್ಲಿ ಶೇ 14.7ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.
ದೇಶದ ಮಾರುಕಟ್ಟೆಯಲ್ಲಿ ಸರಕುಗಳಿಗೆ ಹೆಚ್ಚಿದ ಬೇಡಿಕೆ ಮತ್ತು ಸರಕುಗಳ ಆಮದು ವಹಿವಾಟಿನಿಂದ ಬಂದ ವರಮಾನದಲ್ಲಿನ ಏರಿಕೆಯು ಒಟ್ಟಾರೆ ಜಿಎಸ್‌ಟಿ ವರಮಾನ ಹೆಚ್ಚಳಕ್ಕೆ ಕಾರಣವಾಗಿವೆ.
ದೇಶದ ಆಂತರಿಕ ವಹಿವಾಟುಗಳಿಂದ ಆಗುವ ಜಿಎಸ್‌ಟಿ ಸಂಗ್ರಹವು ಶೇ 10.1ರಷ್ಟು ಏರಿಕೆಯಾಗಿದ್ದು, ₹1.38 ಲಕ್ಷ ಕೋಟಿಗೆ ತಲುಪಿದೆ. ಆಮದು ವಹಿವಾಟು ಮೂಲಕ ಆಗುವ ಜಿಎಸ್‌ಟಿ ಸಂಗ್ರಹವು ಶೇ 26ರಷ್ಟು ಹೆಚ್ಚಳ ಆಗಿದ್ದು, ₹65,525 ಕೋಟಿಗೆ ತಲುಪಿದೆ.
ಜಿಎಸ್‌ಟಿ ಮರುಪಾವತಿ ಶೇ 3ರಷ್ಟು ಇಳಿಕೆಯಾಗಿದ್ದು, ₹27 ಸಾವಿರ ಕೋಟಿಯಷ್ಟಾಗಿದೆ. ಮರುಪಾವತಿ ಬಳಿಕ ನಿವ್ವಳ ಜಿಎಸ್‌ಟಿ ಸಂಗ್ರಹ ₹1.76 ಲಕ್ಷ ಕೋಟಿ ಆಗಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಎಸ್‌ಟಿ ಸಂಗ್ರಹವು ₹2 ಲಕ್ಷ ಕೋಟಿ ದಾಟಿರುವುದು ಇದು ಮೂರನೇ ಬಾರಿ. ಏಪ್ರಿಲ್ ಮತ್ತು ಜುಲೈನಲ್ಲಿ ಕ್ರಮವಾಗಿ ₹2.43 ಲಕ್ಷ ಕೋಟಿ ಮತ್ತು ₹2.11 ಲಕ್ಷ ಕೋಟಿ ಸಂಗ್ರಹವಾಗಿತ್ತು.
ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ (ಏಪ್ರಿಲ್-ಸೆಪ್ಟೆಂಬರ್) ಒಟ್ಟು ₹12.46 ಲಕ್ಷ ಕೋಟಿ ಸಂಗ್ರಹವಾಗಿದ್ದು, ಶೇ 11.6ರಷ್ಟು ಹೆಚ್ಚಳವಾಗಿದೆ. ನಿವ್ವಳ ಜಿಎಸ್‌ಟಿ ಸಂಗ್ರಹವು ₹10.66 ಲಕ್ಷ ಕೋಟಿಯಾಗಿದೆ.
'ಜಾಗತಿಕ ಮಟ್ಟದ ಬಿಕ್ಕಟ್ಟಿನ ನಡುವೆಯೂ ದೇಶದಲ್ಲಿ ಬೇಡಿಕೆ ನಿರಂತರವಾಗಿದೆ. ಉತ್ತರ ಪ್ರದೇಶ, ತೆಲಂಗಾಣ, ಗುಜರಾತ್ ಮತ್ತು ಕರ್ನಾಟಕದಲ್ಲಿ ಜಿಎಸ್‌ಟಿ ಸಂಗ್ರಹವು ಶೇ 16ರಿಂದ ಶೇ 18ರವರೆಗೆ ಏರಿಕೆಯಾಗಿದೆ. ಅಸ್ಸಾಂ, ಮಣಿಪುರ, ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ನಲ್ಲಿ ಉತ್ತಮ ಬೆಳವಣಿಗೆ ದಾಖಲಿಸಿದೆ' ಎಂದು ಇವೈ ಇಂಡಿಯಾದ ತೆರಿಗೆ ಪಾಲುದಾರ ಸೌರಭ್ ಅಗರವಾಲ್ ಹೇಳಿದ್ದಾರೆ.
'ಕಚ್ಚಾ ತೈಲ, ಸರಕುಗಳ ಬೆಲೆ ಏರಿಕೆಯು ಒಟ್ಟಾರೆ ಆಮದು ಮೊತ್ತ ಹೆಚ್ಚಳಕ್ಕೆ ಕಾರಣವಾಗಿದೆ. ಎಲೆಕ್ಟ್ರಾನಿಕ್ಸ್, ಯಂತ್ರೋಪಕರಣಗಳು, ಚಿನ್ನ, ರಸಗೊಬ್ಬರದಂತಹ ಹೆಚ್ಚಿನ ಮೌಲ್ಯದ ಸರಕುಗಳ ಆಮದು ಹೆಚ್ಚಳದಿಂದಾಗಿ ಆಮದು ಮೂಲಕ ಸಂಗ್ರಹವಾದ ವರಮಾನದಲ್ಲಿ ಏರಿಕೆಯಾಗಿದೆ' ಎಂದು ಗ್ರ್ಯಾಂಟ್ ಥಾರ್ನ್‌ಟನ್ ಭಾರತ್ ಪಾಲುದಾರ ಮನೋಜ್ ಮಿಶ್ರಾ ತಿಳಿಸಿದ್ದಾರೆ.
ಸತತ ಮೂರನೇ ಬಾರಿಯೂ ₹2 ಲಕ್ಷ ಕೋಟಿ ದಾಟಿದ ಜಿಎಸ್‌ಟಿ ಸಂಗ್ರಹ
ಆಮದು ವಹಿವಾಟಿನಿಂದ ಬಂದ ವರಮಾನವು ಸಂಗ್ರಹ ಹೆಚ್ಚಳಕ್ಕೆ ಕಾರಣ
ಜಾಗತಿಕ ಮಟ್ಟದಲ್ಲಿನ ಬಿಕ್ಕಟ್ಟಿನ ನಡುವೆಯೂ ದೇಶದಲ್ಲಿ ಬೇಡಿಕೆ ನಿರಂತರ

