ಕೀವ್: ಉಕ್ರೇನ್‍ನ ಪೂರ್ವ ಭಾಗದಲ್ಲಿ ಸಾರ್ವಜನಿಕ ಬಸ್ ಒಂದರ ಮೇಲಿನ ದಾಳಿ ಸೇರಿದಂತೆ ರಶ್ಯ ನಡೆಸಿದ ಸರಣಿ ದಾಳಿಗಳಲ್ಲಿ 30 ಜನರು ಮೃತಪಟ್ಟಿದ್ದು, ಕನಿಷ್ಠ 18 ಜನರು ಗಾಯಗೊಂಡಿದ್ದಾರೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ಉಕ್ರೇನ್ ಮೇಲೆ ರಶ್ಯದ ದಾಳಿಗಳು ತೀವ್ರಗೊಂಡಿದ್ದು, ರಾಜಧಾನಿ ಕೀವ್‍ನಲ್ಲಿ ವಿದ್ಯುತ್ ವ್ಯವಸ್ಥೆ ಮತ್ತಷ್ಟು ಹದಗೆಟ್ಟಿದೆ.
ಉಕ್ರೇನ್‍ನ ಡೊನೆಟ್ಸ್ಕ್ ಪ್ರದೇಶದ ಕ್ರಾಮಾಟೋಸ್ರ್ಕ್ ಮತ್ತು ನೆರೆಯ ಸ್ಲೋವಿಯಾನ್ಸ್ಕ್ ನಗರಗಳಲ್ಲಿ ಭದ್ರತಾ ಪರಿಸ್ಥಿತಿ ತೀವ್ರವಾಗಿ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಪ್ರಾದೇಶಿಕ ಮಿಲಿಟರಿ ಆಡಳಿತದ ಮುಖ್ಯಸ್ಥ ವಡಿಮ್ ಫಿಲಾಶ್ಕಿನ್ ತಿಳಿಸಿದ್ದಾರೆ.
ಮತ್ತೊಂದೆಡೆ, ವಸತಿ ಕಟ್ಟಡಗಳ ಬಳಿ ಬಿದ್ದಿದ್ದ ತಲಾ ಅರ್ಧ ಟನ್ ತೂಕದ ಎರಡು ಸ್ಫೋಟಗೊಳ್ಳದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಾಂಬ್ ವಿಲೇವಾರಿ ತಜ್ಞರು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿದ್ದಾರೆ ಎಂದು ಕೀವ್ ಪೊಲೀಸರು ತಿಳಿಸಿದ್ದಾರೆ.



