ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಸುಧಾರಣೆಗಳ ಕುರಿತ 382ನೇ ವರದಿಯನ್ನು ಶಿಕ್ಷಣ, ಮಹಿಳೆ, ಮಕ್ಕಳು, ಯುವಜನ ಮತ್ತು ಕ್ರೀಡಾ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು ಶುಕ್ರವಾರ ಸಂಸತ್ತಿಗೆ ಸಲ್ಲಿಸಿತು. ನೀಟ್-ಯುಜಿ ಪರೀಕ್ಷೆಯನ್ನು ಎಷ್ಟು ಬಾರಿಯಾದರೂ ಬರೆಯಬಹುದು ಮತ್ತು ಇದಕ್ಕೆ ಯಾವುದೇ ನಿಗದಿತ ವಯಸ್ಸಿನ ಮಿತಿಯಿಲ್ಲ ಎಂಬ ಅಂಶವನ್ನು ಸಮಿತಿಯ ಗಮನಕ್ಕೆ ತರಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದರಿಂದಾಗಿ 70 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಕೂಡ ಪರೀಕ್ಷೆ ಬರೆಯುತ್ತಿರುವ ಅಸಮರ್ಪಕ ಸಂಗತಿಗಳು ಬೆಳಕಿಗೆ ಬಂದಿವೆ ಎಂದು ವರದಿ ಉಲ್ಲೇಖಿಸಿದೆ. ಈ ಸಮಿತಿಯ ನೇತೃತ್ವವನ್ನು ರಾಜ್ಯಸಭೆಯ ಕಾಂಗ್ರೆಸ್ ಸಂಸದ ಮುಕುಲ್ ವಾಸನಿಕ್ ವಹಿಸಿದ್ದಾರೆ.
"ನೀಟ್-ಯುಜಿ ಸೇರಿದಂತೆ ಪ್ರಮುಖ ಪರೀಕ್ಷೆಗಳಿಗೆ ಸಮಂಜಸವಾದ ವಯೋಮಿತಿ ಮತ್ತು ಪ್ರಯತ್ನಗಳ ಮಿತಿಯನ್ನು ನಿಗದಿಪಡಿಸುವ ಸಾಧ್ಯತೆಗಳ ಬಗ್ಗೆ ಶಿಕ್ಷಣ ಸಚಿವಾಲಯವು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಇತರ ಸಂಬಂಧಿತ ವ್ಯಕ್ತಿಗಳೊಂದಿಗೆ ಚರ್ಚಿಸಿ ಪರಿಶೀಲಿಸಬೇಕು" ಎಂದು ಸಮಿತಿ ಶಿಫಾರಸು ಮಾಡಿದೆ.
ನೀಟ್-ಯುಜಿಗೆ ಯಾವುದೇ ವಯೋಮಿತಿ ಅಥವಾ ಪ್ರಯತ್ನಗಳ ಮಿತಿಯಿಲ್ಲದಿದ್ದರೂ, ಜೆಇಇ ಅಡ್ವಾನ್ಸ್ಡ್ (JEE Advanced) ಪರೀಕ್ಷೆಯಲ್ಲಿ ವಯಸ್ಸಿನ ನಿರ್ಬಂಧವಿದ್ದು, ಅಭ್ಯರ್ಥಿಗಳು ಸತತ ಎರಡು ವರ್ಷಗಳಲ್ಲಿ ಗರಿಷ್ಠ ಎರಡು ಬಾರಿ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿದೆ.
ಕೇಂದ್ರ ಸರ್ಕಾರವು 2017ರಲ್ಲಿ ನೀಟ್ ಪರೀಕ್ಷೆಗೆ ಗರಿಷ್ಠ ಮೂರು ಪ್ರಯತ್ನಗಳು ಮತ್ತು 25 ವರ್ಷಗಳ ವಯೋಮಿತಿ (ಮೀಸಲಾತಿ ವರ್ಗದವರಿಗೆ 30 ವರ್ಷ) ನಿಗದಿಪಡಿಸಿತ್ತು. ಆದರೆ ಅದೇ ವರ್ಷ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿತು. ನ್ಯಾಯಾಲಯದ ವಿಚಾರಣೆ ಬಾಕಿ ಇರುವಂತೆಯೇ 2019ರ ನೀಟ್-ಯುಜಿಗೆ 25 ವರ್ಷಕ್ಕಿಂತ ಮೇಲ್ಪಟ್ಟ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ತಾತ್ಕಾಲಿಕ ಅವಕಾಶ ನೀಡಲಾಯಿತು. ಬಳಿಕ, 2022ರ ಮಾರ್ಚ್ನಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗವು (NMC) ಗರಿಷ್ಠ ವಯೋಮಿತಿಯನ್ನು ಸಂಪೂರ್ಣವಾಗಿ ತೆಗೆದುಹಾಕಿತ್ತು.
ನೀಟ್-ಯುಜಿ (NEET-UG) ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ವಿಧಾನಕ್ಕೆ ಬದಲಾಯಿಸುವ ಪ್ರಸ್ತಾವನೆಯ ಭಾಗವಾಗಿ, ಎಲ್ಲಾ ಪರೀಕ್ಷಾ ಕೇಂದ್ರಗಳು ಸಂಪೂರ್ಣವಾಗಿ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಒಡೆತನದಲ್ಲಿರಬೇಕು ಮತ್ತು ಅವುಗಳೇ ನಿರ್ವಹಿಸಬೇಕು ಎಂದು ಸಂಸದೀಯ ಸ್ಥಾಯಿ ಸಮಿತಿಯು ಶಿಫಾರಸು ಮಾಡಿದೆ.
ವಿಶೇಷವಾಗಿ ದ್ವಿತೀಯ ಮತ್ತು ತೃತೀಯ ಹಂತದ ನಗರಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸುರಕ್ಷಿತ ಸರ್ಕಾರಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದ ಬಳಿಕವೇ ಈ ಬದಲಾವಣೆಯನ್ನು ತರಬೇಕು ಎಂದು ಸಮಿತಿ ತಿಳಿಸಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಾಜಿ ಮುಖ್ಯಸ್ಥ ಕೆ. ರಾಧಾಕೃಷ್ಣನ್ ನೇತೃತ್ವದ ಉನ್ನತ ಮಟ್ಟದ ತಜ್ಞರ ಸಮಿತಿಯು 2024ರಲ್ಲಿ ನೀಡಿದ್ದ, ಸಿಬಿಟಿ ಸ್ವರೂಪಕ್ಕೆ ಹಂತ ಹಂತವಾಗಿ ಬದಲಾಗುವ ಶಿಫಾರಸನ್ನು ಈ ಸಮಿತಿಯೂ ಸಮರ್ಥಿಸಿದೆ. ಆದರೆ, ಮೂಲಸೌಕರ್ಯ ಕೊರತೆಗಳನ್ನು ನೀಗಿಸದೆ, ಅಭ್ಯರ್ಥಿಗಳಿಗೆ ಪರೀಕ್ಷಾ ಸೌಲಭ್ಯಗಳ ಸುಲಭ ಲಭ್ಯತೆ ಮತ್ತು ಬಹು ಹಂತಗಳಲ್ಲಿ ನಡೆಸುವ ಪರೀಕ್ಷೆಗಳ ಅಂಕಗಳ ಮೌಲ್ಯಮಾಪನದಲ್ಲಿ ಪಾರದರ್ಶಕತೆ ಖಚಿತಪಡಿಸಿಕೊಳ್ಳದೆ ಈ ಬದಲಾವಣೆಗೆ ಮುಂದಾಗಬಾರದು ಎಂದು ಸಮಿತಿ ಒತ್ತಿಹೇಳಿದೆ.
ಸಬ್ ಕಾಂಟ್ರಾಕ್ಟ್ ಆಧಾರದ ಮೇಲೆ ಪರೀಕ್ಷಾ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಸಂಸ್ಥೆಗಳು "ಪರೀಕ್ಷೆಯ ಭದ್ರತೆಯಲ್ಲಿ ದುರ್ಬಲ ಕೊಂಡಿಯಾಗಿ ಸಾಬೀತಾಗಿವೆ" ಎಂದು ವರದಿ ತಿಳಿಸಿದೆ. "ಆದ್ದರಿಂದ ಎಲ್ಲಾ ಪರೀಕ್ಷಾ ಕೇಂದ್ರಗಳು ಕೇಂದ್ರ ಮತ್ತು/ಅಥವಾ ರಾಜ್ಯ ಸರ್ಕಾರದ ಒಡೆತನದಲ್ಲಿದ್ದು, ಅವುಗಳೇ ನಿರ್ವಹಿಸಬೇಕು" ಎಂದು ಸಮಿತಿ ಸ್ಪಷ್ಟಪಡಿಸಿದೆ.
ದೇಶಾದ್ಯಂತದ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಮಧ್ಯಮ ಗಾತ್ರದ (100 ರಿಂದ 200 ನೋಡ್ಗಳುಳ್ಳ) ಐಟಿ ಪ್ರಯೋಗಾಲಯಗಳನ್ನು ಸ್ಥಾಪಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯೇ (NTA) ಆರ್ಥಿಕ ನೆರವು ನೀಡಬೇಕು ಎಂದು ಸಮಿತಿ ಸಲಹೆ ಮಾಡಿದೆ. "ಶಾಲೆ ಅಥವಾ ಕಾಲೇಜು ಆಡಳಿತ ಮಂಡಳಿಯು ಐಟಿ ಪ್ರಯೋಗಾಲಯಕ್ಕೆ ಸ್ಥಳಾವಕಾಶ ನೀಡಿದರೆ, ಅಗತ್ಯವಿರುವ ಯಾವುದೇ ಪರೀಕ್ಷೆಯನ್ನು ನಡೆಸಲು ಈ ಸೌಲಭ್ಯವನ್ನು ಎನ್ಟಿಎಗೆ ಬಿಟ್ಟುಕೊಡುವ ಷರತ್ತಿನ ಮೇಲೆ, ಅದಕ್ಕೆ ಬೇಕಾದ ಹಾರ್ಡ್ವೇರ್ ಉಪಕರಣಗಳಲ್ಲಿ ಎನ್ಟಿಎ ಹೂಡಿಕೆ ಮಾಡಬಹುದು" ಎಂದು ಸಮಿತಿ ತಿಳಿಸಿದೆ.
ಪ್ರತಿ ಜಿಲ್ಲೆಗೊಂದು ಪರೀಕ್ಷಾ ಕೇಂದ್ರ:
ಗ್ರಾಮೀಣ ಮತ್ತು ದೂರದ ಪ್ರದೇಶಗಳ ಅಭ್ಯರ್ಥಿಗಳಿಗೆ ತೊಂದರೆಯಾಗದಂತೆ, ಈ ಬದಲಾವಣೆಗೆ ಅಗತ್ಯವಿರುವ ಮೂಲಸೌಕರ್ಯಗಳು ಎಲ್ಲೆಡೆ ಸಮನಾಗಿ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಸಂಸದೀಯ ಸಮಿತಿ ತಿಳಿಸಿದೆ. ವಿದ್ಯಾರ್ಥಿಗಳ ಪ್ರಯಾಣ ಹಾಗೂ ವಸತಿ ವೆಚ್ಚವನ್ನು ತಗ್ಗಿಸಲು ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಂದು ಪರೀಕ್ಷಾ ಕೇಂದ್ರವನ್ನು ಸ್ಥಾಪಿಸುವಂತೆ ಸಮಿತಿ ಶಿಫಾರಸು ಮಾಡಿದೆ.
ಅಭ್ಯರ್ಥಿಗಳಿಗೆ ಸಿಬಿಟಿ ಮಾದರಿ ಮತ್ತು ಡಿಜಿಟಲ್ ಇಂಟರ್ಫೇಸ್ನ ಪರಿಚಯವಾಗಲು ಮಾದರಿ ಪರೀಕ್ಷೆಗಳನ್ನು ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಸಮಿತಿ ತಿಳಿಸಿದೆ. "ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಪರೀಕ್ಷೆಗಳ ಬಗ್ಗೆ ರೂಢಿ ಬೆಳೆಸಲು ಶಿಕ್ಷಣ ಸಚಿವಾಲಯವು ಶಾಲಾ ಹಂತದಲ್ಲೂ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ಪರಿಚಯಿಸುವುದನ್ನು ಪರಿಗಣಿಸಬಹುದು" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕಂಪ್ಯೂಟರ್ ಅಥವಾ ಇಂಟರ್ನೆಟ್ ಸೌಲಭ್ಯ ಸರಿ ಇಲ್ಲದ ಪ್ರದೇಶಗಳಿಗಾಗಿ, "ಸಂಪೂರ್ಣ ಸಿದ್ಧತೆ ಆಗುವವರೆಗೆ, ಎನ್ಕ್ರಿಪ್ಟ್ ಮಾಡಲಾದ ಪ್ರಶ್ನೆಗಳನ್ನು ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪಿಸಿ ಅಲ್ಲಿಯೇ ಮುದ್ರಿಸುವ ತಾತ್ಕಾಲಿಕ ಹೈಬ್ರಿಡ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದು" ಎಂದು ಸಮಿತಿ ಪ್ರಸ್ತಾಪಿಸಿದೆ. ಇದು ಪ್ರಾಯೋಗಿಕವಾಗಿ ಸಾಧ್ಯವಿದೆ ಎಂದು ಸಮಿತಿಗೆ ಮಾಹಿತಿ ನೀಡಲಾಗಿದೆ.
JEE (Mains) ಮತ್ತು CUET ಪರೀಕ್ಷೆಗಳಂತೆ ನೀಟ್-ಯುಜಿ ಪರೀಕ್ಷೆಯನ್ನೂ ಹಲವಾರು ಹಂತಗಳಲ್ಲಿ ನಡೆಸಿದರೆ, ಅಭ್ಯರ್ಥಿಗಳ ಅಂಕಗಳನ್ನು ಯಾವ ರೀತಿ ಹೋಲಿಕೆ ಮಾಡಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕಾದ ಅಗತ್ಯವನ್ನೂ ಸಮಿತಿ ಎತ್ತಿಹಿಡಿದಿದೆ.
ಪರೀಕ್ಷಾ ವಿಧಾನ ಬದಲಾವಣೆಗೂ ಮುನ್ನ "ಖಚಿತ, ಪಾರದರ್ಶಕ ಮತ್ತು ಸ್ವತಂತ್ರವಾಗಿ ಪರಿಶೋಧಿಸಲ್ಪಟ್ಟ ಅಂಕಗಳ ನಾರ್ಮಲೈಸೇಶನ್ ವಿಧಾನವನ್ನು" ರೂಪಿಸಿ, ಅದನ್ನು ಸಾರ್ವಜನಿಕವಾಗಿ ವಿವರಿಸಬೇಕು ಎಂದು ಸಮಿತಿ ಒತ್ತಾಯಿಸಿದೆ.
ಏತನ್ಮಧ್ಯೆ ಡಿಜಿಟಲ್ ಪರೀಕ್ಷೆಗಳಲ್ಲಿ ಸೈಬರ್ ಭದ್ರತೆಯ ಅಪಾಯಗಳೂ ಇರುತ್ತವೆ ಎಂಬುದನ್ನು ಸಮಿತಿ ಒಪ್ಪಿಕೊಂಡಿದೆ. ರಿಮೋಟ್ ಪ್ರವೇಶ, ಸ್ಕ್ರೀನ್ ರೆಕಾರ್ಡಿಂಗ್ ಮತ್ತು ವರ್ಚುವಲ್ ಯಂತ್ರಗಳ ಬಳಕೆಯನ್ನು ತಡೆಯುವ ಸುರಕ್ಷಿತ ಪರೀಕ್ಷಾ ಸಾಫ್ಟ್ವೇರ್ ಅನ್ನು ಅಭಿವೃದ್ಧಿಪಡಿಸಲು, ಎನ್ಟಿಎ (NTA) ಸಂಸ್ಥೆಯಲ್ಲೇ ಸ್ವಂತ ಸೈಬರ್ ಭದ್ರತಾ ತಂಡವನ್ನು ರಚಿಸುವಂತೆ ಶಿಫಾರಸು ಮಾಡಿದೆ. ಅಲ್ಲದೆ, ಅಕ್ರಮಗಳು ನಡೆಯುತ್ತಿರುವುದನ್ನು ಸೂಚಿಸುವ ಅಸಾಮಾನ್ಯ ಉತ್ತರಗಳ ಮಾದರಿಗಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ (AI) ಆಧಾರಿತ ಸಾಧನಗಳನ್ನೂ ಬಳಸಿಕೊಳ್ಳಬಹುದು.

