ಕೀವ್: ಉಕ್ರೇನ್ ನಾಲ್ಕು ದೇಶಗಳಿಂದ ಕದನ ವಿರಾಮ ಪ್ರಸ್ತಾಪಗಳನ್ನು ಸ್ವೀಕರಿಸಿದ್ದು, ಇದರಲ್ಲಿ ಭಾರತದ ಪ್ರಸ್ತಾಪವು ಅತ್ಯಂತ ಸಮಗ್ರವಾಗಿದೆ ಎಂದು ಉಕ್ರೇನ್ ವಿದೇಶಾಂಗ ಸಚಿವ ಆಂಡ್ರಿ ಸಿಬಿಹಾ ಹೇಳಿದ್ದಾರೆ.
ಇತರ ಪ್ರಸ್ತಾಪಗಳು ತುರ್ಕಿಯೆ, ಈಜಿಪ್ಟ್ ಮತ್ತು ಅಮೆರಿಕದಿಂದ ಬಂದಿದ್ದು, ರಶ್ಯದೊಂದಿಗೆ ಕದನ ವಿರಾಮಕ್ಕಾಗಿ ಉಕ್ರೇನ್ ವಿವಿಧ ಆಯ್ಕೆಗಳಿಗೆ ಸಿದ್ಧವಾಗಿದೆ ಎಂದು ಕೀವ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿಬಿಹಾ ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಮುಂಚೂಣಿ ವಲಯ ಸೇರಿದಂತೆ ವಿವಿಧ ಕದನ ವಿರಾಮ ಸ್ವರೂಪಗಳನ್ನು ಪರಿಗಣಿಸಲು ಉಕ್ರೇನ್ ಸಿದ್ಧವಾಗಿದೆ. ನಮ್ಮ ಬಳಿ ನಾಲ್ಕು ಪ್ರಸ್ತಾಪಗಳಿವೆ. ಅತ್ಯಂತ ಸಮಗ್ರವಾದದ್ದು ಭಾರತದ ಪ್ರಸ್ತಾಪ. ನಾವು ಇಂಧನ ಮತ್ತು ಕಪ್ಪು ಸಮುದ್ರದ ಕದನ ವಿರಾಮಕ್ಕೆ ಸಿದ್ಧರಿದ್ದೇವೆ. ಆದರೆ ಬಂದರು ಮೂಲಸೌಕರ್ಯ ಸೇರಿದಂತೆ ಎಲ್ಲಾ ಇಂಧನ ಸೌಲಭ್ಯಗಳ ಮೇಲಿನ ದಾಳಿಗಳನ್ನು ನಿಲ್ಲಿಸಬೇಕು ಎಂದು ಸಿಬಿಹಾ ಹೇಳಿದ್ದಾರೆ.

