ಬದಿಯಡ್ಕ: ಕೇಂದ್ರ ಸರ್ಕಾರವು ರೈತರು, ಮಹಿಳೆಯರು, ಯುವಕರು ಹಾಗೂ ಬಡ ವರ್ಗದವರ ಕಲ್ಯಾಣಕ್ಕಾಗಿ ಉಜ್ವಲ ಯೋಜನೆ, ಕಿಸಾನ್ ಸಮ್ಮಾನ್ ನಿಧಿ, ಆಯುಷ್ಮಾನ್ ಭಾರತ್, ಮುದ್ರಾ ಯೋಜನೆ ಸೇರಿದಂತೆ ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಮಾಹಿತಿ ಕೊರತೆಯಿಂದಾಗಿ ಹಲವು ಅರ್ಹ ಫಲಾನುಭವಿಗಳಿಗೆ ಈ ಸೌಲಭ್ಯಗಳು ತಲುಪುತ್ತಿಲ್ಲ. ಈ ಕೊರತೆಯನ್ನು ನೀಗಿಸಿ, ಪ್ರತಿ ಮನೆಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಬದಿಯಡ್ಕದಲ್ಲಿ ಹಮ್ಮಿಕೊಂಡಿರುವ ಈ ಶಿಬಿರವು ಅತ್ಯಂತ ಶ್ಲಾಘನೀಯ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಪಿ.ಆರ್. ಹೇಳಿದರು.
ಬಿಜೆಪಿ ಬದಿಯಡ್ಕ ಪಂಚಾಯಿತಿ ಸಮಿತಿಯ ನೇತೃತ್ವದಲ್ಲಿ `ಸೇವಾ ಸಂಕಲ್ಪ್ ಅಭಿಯಾನ'ದ ಭಾಗವಾಗಿ ಗುರುವಾರ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಹಮ್ಮಿಕೊಂಡ ಹೆಲ್ಪ್ ಡೆಸ್ಕ್ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಬದಿಯಡ್ಕ ಪಂಚಾಯಿತಿ ಪೂರ್ವ ವಲಯ ಅಧ್ಯಕ್ಷ ಉದನೇಶ್ವರ ಬಿ.ಬದಿಯಡ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಶಂಕರ ಶುಭಾಶಂಸನೆಗೈದು ಮಾತುಗಳನ್ನಾಡುತ್ತಾ ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಯಾಗಿ ಸಾರ್ವಜನಿಕ ಸೇವೆಯ 25ನೇ ವರ್ಷದ ಸಂಭ್ರಮದಲ್ಲಿ ಬದಿಯಡ್ಕದಲ್ಲಿ ಬಿಜೆಪಿ ಆಡಳಿತವನ್ನು ನಡೆಸುತ್ತಿದೆ. ನಾಡಿನ ಅಭಿವೃದ್ದಿಗೆ ಬೇಕಾದ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ರಾಮಪ್ಪ ಮಂಜೇಶ್ವರ, ಬದಿಯಡ್ಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಬ್ಲಾಕ್ ಪಂಚಾಯಿತಿ ಸದಸ್ಯ ಮಹೇಶ್ ವಳಕ್ಕುಂಜ, ಬದಿಯಡ್ಕ ಗ್ರಾಮ ಪಂಚಾಯಿತಿ ಸ್ಥಾಯಿಸಮಿತಿ ಅಧ್ಯಕ್ಷರುಗಳಾದ ರಜನಿ ಸಂದೀಪ್, ಅವಿನಾಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಬಿಜೆಪಿ ಬದಿಯಡ್ಕ ಪೂರ್ವವಲಯ ಉಪಾಧ್ಯಕ್ಷ ಗಂಗಾಧರ ಪಳ್ಳತ್ತಡ್ಕ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಶರತ್ ಶೆಟ್ಟಿ ವಳಮಲೆ ವಂದಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಕೆ. ನಿರೂಪಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಉಷಾ ಪಳ್ಳತ್ತಡ್ಕ, ಮಧುಸೂದನ ಕಂಗಿಲ, ಶ್ಯಾಮಪ್ರಸಾದ ಸರಳಿ, ಪಕ್ಷ ಪ್ರಮುಖರಾದ ನವಿನಾಕ್ಷನ್, ಜಯರಾಮ ಚೆಟ್ಟಿಯಾರ್ ಬದಿಯಡ್ಕ, ನಾರಾಯಣ ಪೆರಡಾಲ, ನಾರಾಯಣ ಭಟ್ ಮೈರ್ಕಳ, ಡಿ.ಕೆ.ನಾರಾಯಣನ್ ನಾಯರ್, ಕೃಷ್ಣ ಮಣಿಯಾಣಿ ಮೊಳೆಯಾರು, ಜಯಂತಿ ಚೆಟ್ಟಿಯಾರ್, ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಹೆಲ್ಪ್ ಡೆಸ್ಕ್ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ನೊಂದಾವಣೆ, ಕಾಸರಗೋಡಿನ ಪ್ರಸಾದ್ ನೇತ್ರಾಲಯದ ವತಿಯಿಂದ ನೇತ್ರತಪಾಸಣೆ ಶಿಬಿರ ನಡೆಯಿತು. 200 ರಷ್ಟು ಮಂದಿ ಜನರು ಪಾಲ್ಗೊಂಡಿದ್ದರು.

.jpg)
.jpg)
