HEALTH TIPS

ಗುರ್ಮೀತ್ ಸಿಂಗ್ ವಿರುದ್ಧ ಪಿತೂರಿ ಆರೋಪ: 'ದಿ ಹಿಂದೂ', 'ದೈನಿಕ್ ಭಾಸ್ಕರ್' ವಿರುದ್ಧ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿಂದ ನ್ಯಾಯಾಂಗ ನಿಂದನೆ ಪ್ರಕರಣ

ಚಂಡೀಗಢ: ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ ವಿರುದ್ಧ ನ್ಯಾಯಾಲಯಗಳು ಪಿತೂರಿ ನಡೆಸುತ್ತಿವೆ ಎಂಬ ಅರ್ಥ ಬರುವಂತೆ ಜಾಹೀರಾತು ಪ್ರಕಟಿಸಿದ್ದಕ್ಕಾಗಿ 'ದಿ ಹಿಂದೂ' ಮತ್ತು 'ದೈನಿಕ್ ಭಾಸ್ಕರ್' ಪತ್ರಿಕೆಗಳ ವಿರುದ್ಧ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡಿದೆ.


ನ್ಯಾಯಾಲಯವೇ ಆರೋಪಿಯ ವಿರುದ್ಧ ಪಿತೂರಿ ನಡೆಸುತ್ತಿದೆ ಎಂಬ ರೀತಿಯಲ್ಲಿ ಜನರಲ್ಲಿ ಅಭಿಪ್ರಾಯ ಮೂಡಿಸುವ ಜಾಹೀರಾತುಗಳು ನ್ಯಾಯಾಲಯದ ಕೆಲಸಕ್ಕೆ ಅಡ್ಡಿಯಾಗಬಹುದು ಎಂದು ಹೈಕೋರ್ಟ್ ಹೇಳಿದೆ.

ಈ ಪ್ರಕರಣವನ್ನು ನ್ಯಾಯಮೂರ್ತಿ ವಿನೋದ್ ಎಸ್. ಭಾರದ್ವಾಜ್ ಮತ್ತು ನ್ಯಾಯಮೂರ್ತಿ ರವೀಂದರ್ ಮಲಿಕ್ ಅವರ ವಿಭಾಗೀಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು. ಮುಂದಿನ ವಿಚಾರಣೆಯನ್ನು ನವೆಂಬರ್ 25ಕ್ಕೆ ಮುಂದೂಡಲಾಗಿದೆ.

'ದಿ ಹಿಂದೂ' ಮತ್ತು 'ದೈನಿಕ್ ಭಾಸ್ಕರ್' ಪತ್ರಿಕೆಗಳ 2026ರ ಸೆಪ್ಟೆಂಬರ್ 12ರ ಆವೃತ್ತಿಗಳ ಮುಖಪುಟದಲ್ಲಿ 'ಡೇರಾ ಸಚ್ಚಾ ಸೌದಾ ಎಂದರೇನು? (ವಾಸ್ತವ vs ಕಲ್ಪನೆ)' ಎಂಬ ಶೀರ್ಷಿಕೆಯ ಜಾಹೀರಾತು ಪ್ರಕಟವಾಗಿತ್ತು. 'ಗುರು ಜಿ ವಿರುದ್ಧ ಪಿತೂರಿ ನಡೆದಿದ್ದೇ?' ಎಂಬ ಉಪಶೀರ್ಷಿಕೆಯೂ ಅದರಲ್ಲಿ ಇತ್ತು.

ಸೆಪ್ಟೆಂಬರ್ 16ರಂದು ಈ ಜಾಹೀರಾತುಗಳನ್ನು ಗಮನಿಸಿದ ನ್ಯಾಯಮೂರ್ತಿ ಸುಭಾಸ್ ಮೆಹ್ಲಾ ಅವರು ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಿದ್ದರು. ಅಕ್ಟೋಬರ್ 7ರೊಳಗೆ ನೋಟಿಸ್ ಗಳಿಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿತ್ತು. ರೋಸ್ಟರ್ ಪ್ರಕಾರ ಪ್ರಕರಣವನ್ನು ವಿಭಾಗೀಯ ಪೀಠದ ಮುಂದೆ ಪಟ್ಟಿ ಮಾಡಲಾಗಿತ್ತು.

ಮೇಲ್ಮನವಿ ಮತ್ತು ವಿಚಾರಣೆಗಳು ಬಾಕಿ ಇರುವಾಗ, ನ್ಯಾಯಾಲಯಗಳು ಆರೋಪಿಯ ವಿರುದ್ಧ ಪಿತೂರಿ ನಡೆಸುತ್ತಿವೆ ಎಂಬಂತೆ ಬಿಂಬಿಸುವ ಸಾರ್ವಜನಿಕ ಮನವಿಗಳು ಹಾಗೂ ಹಣ ಪಾವತಿಸಿ ಪ್ರಕಟಿಸುವ ಜಾಹೀರಾತುಗಳು ಜನರ ಅಭಿಪ್ರಾಯದ ಮೇಲೆ ಪ್ರಭಾವ ಬೀರುವ ಪ್ರಯತ್ನವಾಗಿವೆ. ಇಂತಹ ಪ್ರಯತ್ನಗಳು ನ್ಯಾಯಾಂಗ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಿ, ನ್ಯಾಯದ ಆಡಳಿತಕ್ಕೆ ಅಡ್ಡಿಯಾಗುತ್ತವೆ ಎಂದು ನ್ಯಾಯಮೂರ್ತಿ ಸುಭಾಸ್ ಮೆಹ್ಲಾ ಅಭಿಪ್ರಾಯಪಟ್ಟಿದ್ದರು.

►ನ್ಯಾಯಾಂಗ ಪ್ರಕ್ರಿಯೆಗೆ ಅಡ್ಡಿ

ಪ್ರಾಥಮಿಕ ಪರಿಶೀಲನೆಯ ಆಧಾರದ ಮೇಲೆ ಜಾಹೀರಾತಿನಲ್ಲಿನ ವಿಷಯವು ನ್ಯಾಯಾಲಯದ ಘನತೆಗೆ ಕುಂದುಂಟುಮಾಡುವ ಅಥವಾ ಅದರ ಅಧಿಕಾರವನ್ನು ಕುಗ್ಗಿಸುವ ಸಾಧ್ಯತೆ ಹೊಂದಿದೆ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ನ್ಯಾಯಾಂಗ ಪ್ರಕ್ರಿಯೆಗಳ ಸರಿಯಾದ ಹಾದಿಗೆ ಅಡ್ಡಿಪಡಿಸುವ ಅಥವಾ ಅವುಗಳಲ್ಲಿ ಹಸ್ತಕ್ಷೇಪ ಮಾಡುವ ಸಾಧ್ಯತೆಯೂ ಇದೆ ಎಂದು ತಿಳಿಸಿದೆ. ಈ ಆರೋಪಗಳನ್ನು ನ್ಯಾಯಾಲಯ ನಿಂದನೆ ಕಾಯಿದೆ, 1971ರ ಸೆಕ್ಷನ್ 2(ಸಿ) ಅಡಿಯಲ್ಲಿ ಪರಿಶೀಲಿಸಬೇಕಾಗಿದೆ ಎಂದು ನ್ಯಾಯಾಲಯ ಹೇಳಿದೆ.

'ರೆಕಾರ್ಡ್ ನ್ಯಾಯಾಲಯ'ವಾಗಿರುವ ಹೈಕೋರ್ಟ್ ಗೆ ಸಂವಿಧಾನದ 215ನೇ ವಿಧಿಯ ಅಡಿಯಲ್ಲಿ ತನ್ನದೇ ನಿಂದನೆಗಾಗಿ ಶಿಕ್ಷೆ ವಿಧಿಸುವ ಸಾಂವಿಧಾನಿಕ ಅಧಿಕಾರವಿದೆ. ಕಾಯಿದೆಯ ಸೆಕ್ಷನ್ 15(1) ಕೂಡ ನ್ಯಾಯಾಲಯಕ್ಕೆ ಸ್ವಯಂಪ್ರೇರಿತವಾಗಿ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣವನ್ನು ಪರಿಗಣನೆಗೆ ತೆಗೆದುಕೊಳ್ಳಲು ಅವಕಾಶ ನೀಡುತ್ತದೆ ಎಂದು ಪೀಠ ತಿಳಿಸಿದೆ.

ಪ್ರಕಟಣೆಯ ಸ್ವರೂಪ ಹಾಗೂ ನ್ಯಾಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಅದರ ಸ್ಪಷ್ಟ ಪ್ರವೃತ್ತಿಯನ್ನು ಪರಿಗಣಿಸಿ, ಸಂವಿಧಾನದ 215ನೇ ವಿಧಿಯನ್ನು ನ್ಯಾಯಾಲಯ ನಿಂದನೆ ಕಾಯಿದೆಯ ಸೆಕ್ಷನ್ 2(ಸಿ)(i), 2(ಸಿ)(iii) ಮತ್ತು 15(1) ರೊಂದಿಗೆ ಓದಿ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

►ಪ್ರಕಾಶಕರು, ಸಂಪಾದಕರಿಗೆ ನೋಟಿಸ್

ಡೇರಾ ಸಚ್ಚಾ ಸೌದಾದ ಆಡಳಿತ ಮಂಡಳಿ, 'ದಿ ಹಿಂದೂ' ಪತ್ರಿಕೆಯ ಪ್ರಕಾಶಕರು ಮತ್ತು ಪ್ರಧಾನ ಸಂಪಾದಕರು ಹಾಗೂ 'ದೈನಿಕ್ ಭಾಸ್ಕರ್' ಪತ್ರಿಕೆಯ ಪ್ರಕಾಶಕರು ಮತ್ತು ಪ್ರಧಾನ ಸಂಪಾದಕರಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

ಜಾಹೀರಾತಿಗೆ ಸಂಬಂಧಿಸಿದ ದಾಖಲೆಗಳ ಪ್ರತಿಗಳನ್ನೂ ಸೇರಿಸಿ ನೋಟಿಸ್ ಗಳನ್ನು ಕಳುಹಿಸುವಂತೆ ಹೈಕೋರ್ಟ್ನ ರಿಜಿಸ್ಟ್ರಿಗೆ ಸೂಚಿಸಲಾಗಿದೆ. ನ್ಯಾಯಾಲಯದ ಆದೇಶ ಉಲ್ಲಂಘಿಸಿದವರ ವಿವರಗಳನ್ನು ರಿಜಿಸ್ಟ್ರಿಗೆ ತಕ್ಷಣ ಒದಗಿಸಲು ಚಂಡೀಗಢದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ (SSP) ನೆರವು ನೀಡುವಂತೆ ಸೂಚಿಸಲಾಗಿದೆ.

ನ್ಯಾಯಾಲಯದ ಘನತೆಗೆ ಕುಂದುಂಟುಮಾಡುವ ಮತ್ತು ನ್ಯಾಯದ ಆಡಳಿತಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಅವಹೇಳನಕಾರಿ ಹಾಗೂ ನ್ಯಾಯಾಲಯದ ನಿಂದನೆಗೆ ಕಾರಣವಾಗುವ ವಿಷಯ ಪ್ರಕಟಿಸಿದ ಆರೋಪದ ಕುರಿತು ಈ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries