ಬದಿಯಡ್ಕ: ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆಯು ಬದಿಯಡ್ಕ ತುಳು ಭವನದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಸಹಕಾರದೊಂದಿಗೆ ನಡೆಯಿತು. ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ರವಿ ನಾಯ್ಕಾಪು ದೀಪ ಬೆಳಗಿಸಿ ಪುಷ್ಪಾರ್ಚನೆಗೈದು ಉದ್ಘಾಟಿಸಿ 'ಸತ್ಯ, ಶಾಂತಿ, ಸರಳತೆಯ ಸಹಕಾರ ಮೂರ್ತಿ ಬಾಪೂಜಿಯವರು. ಅಹಿಂಸೆಯಿಂದ ಇಡೀ ಸಾಮ್ರಾಜ್ಯವನ್ನು ಜಯಿಸಬಹುದು ಎಂದು ಇಡೀ ಜಗತ್ತಿಗೆ ತೋರಿಸಿಕೊಟ್ಟವರು ಗಾಂಧೀಜಿ. ಅದೇ ರೀತಿ ದೇಶದ 2ನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಸರಳ ಜೀವನ, ಉನ್ನತ ಚಿಂತನೆಯನ್ನು ಮೈಗೂಡಿಸಿಕೊಂಡವರು. ಗಾಂಧೀಜಿ ಎಂದಾಗ ಮಕ್ಕಳಿಗೆ ಮೊದಲು ನೆನಪಾಗುವುದು ಚರಕ, ಅರ್ಧ ಉಡುಪು ಹಾಗೂ ಖಾದಿ ಬಟ್ಟೆ ಇತ್ಯಾದಿ. ಆದರೆ ನಾವು ಗುರುತಿಸಬೇಕಾದ್ದು ಆ ಕನ್ನಡಕದ ಹಿಂದಿನ ದೂರದೃಷ್ಟಿ, ಚರಕದ ಹಿಂದಿನ ಅವರ ಸ್ವಾವಲಂಬನೆಯ ಬದುಕು, ಸರಳ ಬದುಕು ಉಡುಗೆ ತೊಡುಗೆಗಳು. ದೇಶದ ಸ್ವಾತಂತ್ರ್ಯಕ್ಕೋಸ್ಕರ ಇಷ್ಟೆಲ್ಲಾ ತ್ಯಾಗ ಸಹಿಸಿದ ಬೇರೊಬ್ಬ ವ್ಯಕ್ತಿ ಇರಲು ಅಸಾಧ್ಯ. ' ಎಂದು ಹೇಳಿದರು.
ನಿವೃತ್ತ ಮುಖ್ಯೋಪಾಧ್ಯಾಯ ಡಾ. ಬೇ.ಸಿ. ಗೋಪಾಲಕೃಷ್ಣ ಭಟ್ ಮಾತನಾಡಿ 'ಬಡತನದ ಕುಟುಂಬದಲ್ಲಿ ಜನಿಸಿದ ಶಾಸ್ತ್ರೀಯವರು ಸಾಧಿಸಿದಂತಹ ಸಾಧನೆ ಬಹು ದೊಡ್ಡದು. 'ಜೈ ಜವಾನ್ ಜೈ ಕಿಸಾನ್' ಎಂಬ ಘೋಷಣೆಯೊಂದಿಗೆ ದೇಶ ಅಭಿವೃದ್ಧಿ ಆಗಬೇಕಾದರೆ ರೈತ ಜಾಣನಾಗಬೇಕು, ಅವನಿಗೆ ಸಾಮರ್ಥ್ಯ ಬರಬೇಕು, ಆದರೆ ಮಾತ್ರ ಅವನು ನಮ್ಮ ದೇಶದ ಬೆನ್ನೆಲುಬಾಗಬಲ್ಲ ಎಂದು ಮನಗಂಡವರು. ಅದೇ ರೀತಿ ನಮ್ಮ ದೇಶವನ್ನು ರಕ್ಷಣೆ ಮಾಡುವ ಸೈನಿಕನೊಬ್ಬ ಸಾಕಷ್ಟು ಬಲಶಾಲಿಯಾಗಬೇಕು ಎಂಬ ಕನಸು ಕಂಡವರು ಶಾಸ್ತ್ರೀಜಿ. ಅವರ ಕಾಲದಲ್ಲಿ ಭಾರತ ಮತ್ತು ಪಾಕಿಸ್ತಾನ ಯುದ್ಧವಾದ ಸಂದರ್ಭ ಅದನ್ನು ಬಹಳ ಶಿಸ್ತುಬದ್ಧವಾಗಿ ವ್ಯವಸ್ಥೆಗೊಳಿಸಿ ಭಾರತವನ್ನು ಗೆಲ್ಲಿಸಿಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ' ಎಂದು ಹೇಳಿದರು.
'ಗಾಂಧಿ ಜಯಂತಿ ಮಹಾತ್ಮ ಗಾಂಧೀಜಿಯವರ ಜನ್ಮದಿನವನ್ನು ಸ್ಮರಿಸುವ ಪವಿತ್ರ ದಿನ. ಸತ್ಯ, ಅಹಿಂಸೆ, ಸರಳತೆ ಮತ್ತು ಸ್ವಚ್ಛತೆಯ ಮೂಲಕ ಸಮಾಜಕ್ಕೆ ಹೊಸ ದಾರಿ ತೋರಿಸಿದ ಗಾಂಧೀಜಿಯವರ ಆದರ್ಶಗಳನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ' ಎಂದು ಖ್ಯಾತ ಚುಟುಕು ಕವಿಗಳು ವೆಂಕಟ ಭಟ್ ಎಡನೀರು ಅಭಿಪ್ರಾಯಪಟ್ಟರು.
'ಮಹಾತ್ಮ ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆಯ ಮಾರ್ಗದ ಮೂಲಕ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ನೀಡಿದರು. ಸರಳ ಜೀವನ, ಸ್ವಚ್ಛತೆ, ಸ್ವಾವಲಂಬನೆ ಮತ್ತು ಮಾನವೀಯತೆಯ ಸಂದೇಶವನ್ನು ಸಮಾಜಕ್ಕೆ ನೀಡಿದರು.ಲಾಲ್ ಬಹದ್ದೂರ್ ಶಾಸ್ತ್ರಿಯವರು ಸರಳತೆ ಮತ್ತು ಪ್ರಾಮಾಣಿಕತೆಗೆ ಹೆಸರಾದ ನಾಯಕರು ವರ್ಷ ಪ್ರತಿ ಇಂತಹ ಕಾರ್ಯಕ್ರಮ ಮಾಡುವುದರಿಂದ ಮುಂದಿನ ತಲೆಮಾರುಗಳಿಗೆ ಇದು ಆದರ್ಶವಾಗಲಿ' ಎಂದು ವಿದ್ಯಾಗಿರಿ ಶಾಲೆಯ ಶಿಕ್ಷಕಿ ಅನಿತಾ ಟೀಚರ್ ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಎ ಆರ್ ಸುಬ್ಬಯ್ಯಕಟ್ಟೆ , ಜಿಎಚ್ ಎಸ್ ಪೆರಡಾಲ ಶಾಲೆಯ ಶಿಕ್ಷಕರಾದ ರಾಜೇಶ್ ಮಾಸ್ತರ್, ಕೇರಳ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷರಾದ ಮೊಹಮ್ಮದ್ ಅಲಿ ಪೆರ್ಲ, ವಿಶ್ವ ತುಳುವರೇ ಆಯನ ಮಾಜಿ ಅಧ್ಯಕ್ಷ ನ್ಯಾಯವಾದಿ ಥೋಮಸ್ ಡಿಸೋಜ, ಜುಬೇರ್ ಬಾಪಾನಿಪೊನ, ಕನ್ನಡ ಪತ್ರಕರ್ತ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ, ತಾರನಾಥ ರೈ, ಹರೀಶ್ ಗೋಸಾಡ ಮುಂತಾದವರು ಶುಭಹಾರೈಸಿದರು. ಲೀಲಾವತಿ ಕನಕಪ್ಪಾಡಿ, ವಸಂತ ಬಾರಡ್ಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಕುಸುಮ, ಶೌರ್ಯ ತಂಡ ಸದಸ್ಯರಾದ ರಮೇಶ್ ಮಾವಿನಕಟ್ಟೆ, ಕವಿತಾ ಗಿರೀಶ್ ರೈ, ಸುನಿತಾ, ಸುನಿತಾ ಪಿಲಾಂಕಟ್ಟೆ, ಶಾಂತಕುಮಾರಿ ಹಾಗೂ ಪೆರಡಾಲ ಸರಕಾರಿ ಶಾಲೆಯ ಮಕ್ಕಳು ಉಪಸ್ಥಿತರಿದ್ದರು. ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಜ್ಯೋತಿರ್ಲಕ್ಷ್ಮಿ ಸ್ವಾಗತಿಸಿ, ಹರೀಶ್ ಗೋಸಾಡ ವಂದಿಸಿದರು. ಅಖಿಲೇಶ್ ನಗುಮುಗಂ ನಿರೂಪಿಸಿದರು.



