ವಾಷಿಂಗ್ಟನ್: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಬೃಹತ್ ವಿದ್ಯಾರ್ಥಿ ಪ್ರತಿಭಟನೆಗಳಿಗೆ ಇಸ್ಲಾಂ ಹಾಗೂ ವಲಸಿಗರೇ ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಆರೋಪಿಸಿದ್ದಾರೆ.
ಇದರೊಂದಿಗೆ ಮಧ್ಯಂತರ ಚುನಾವಣಾ ಹೊಸ್ತಿಲಲ್ಲಿ ಬಲಪಂಥೀಯ ವಾದವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದ್ದಾರೆ.
ಈ ಕುರಿತು ಟ್ರುಥ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿರುವ ಟ್ರಂಪ್, ಫ್ರಾನ್ಸ್‌ನಲ್ಲಿ ನಡೆಯುತ್ತಿರುವುದು ಸಾಮೂಹಿಕ ವಲಸೆಯ ಪರಿಣಾಮವೇ ಹೊರತು ಬೇರೇನೂ ಅಲ್ಲ. ಇದು ಶಾಲೆಗಳ ಸಮಸ್ಯೆಯಲ್ಲ. ಬದಲಿಗೆ ಶ್ರೇಷ್ಠ ದೇಶವೊಂದನ್ನು ಇಸ್ಲಾಂ ಆವರಿಸಿಕೊಳ್ಳಲು ನಡೆಸುತ್ತಿರುವ ಯತ್ನವಷ್ಟೇ! ಎಂದು ಆರೋಪಿಸಿದ್ದಾರೆ.
ಶಾಲೆಗಳಲ್ಲಿ ಉತ್ತಮ ಸೌಲಭ್ಯಗಳಿಗೆ ಆಗ್ರಹಿಸಿ ಫ್ರಾನ್ಸ್ ದೇಶದಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದು ಧರಣಿ ನಡೆಸುತ್ತಿದ್ದಾರೆ. ಹಲವೆಡೆ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು, ಭದ್ರತಾ ಪಡೆಗಳೊಂದಿಗೆ ಘರ್ಷಣೆಗಳು ನಡೆದಿವೆ. ಮಂಗಳವಾರದಂದು ದೇಶದಾದ್ಯಂತ ಸುಮಾರು 2.5 ಲಕ್ಷಕ್ಕೂ ಅಧಿಕ ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ.
ಮತ್ತೊಂದೆಡೆ ಟ್ರಂಪ್ ಹೇಳಿಕೆಗೆ ಫ್ರಾನ್ಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.



