ಗಾಂಧಿನಗರ: ದುಬೈನಿಂದ ಇಸ್ರೇಲ್‌ಗೆ ತೆರಳುತ್ತಿದ್ದ 'ಫ್ಲೈ ದುಬೈ' ವಿಮಾನವನ್ನು ಪತನಗೊಳಿಸಲು ಸಹ-ಪೈಲಟ್ ನಡೆಸಿದ ಪ್ರಯತ್ನವನ್ನು ವಿಫಲಗೊಳಿಸಿ ಭಾರತದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಸಾಹಸ ಮೆರೆದಿದ್ದಾರೆ. ಅವರಿಗೆ 'ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ' ನೀಡಿ ಗೌರವಿಸಲಾಗುವುದು ಎಂದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ತಿಳಿಸಿದ್ದಾರೆ.
'ಸ್ಮಿತ್ ಮಚ್ಚರ್ ಅವರ ಧೈರ್ಯವನ್ನು ಇಂದು ಇಡೀ ಜಗತ್ತೇ ಕೊಂಡಾಡುತ್ತಿದೆ. ಸಹ-ಪೈಲಟ್ ನಡೆಸಿದ ದಾಳಿಯಿಂದಾಗಿ ರಕ್ತಸಿಕ್ತರಾಗಿದ್ದರೂ, 174 ಪ್ರಯಾಣಿಕರ ಪ್ರಾಣ ಉಳಿಸಲು ಅವರು ತೋರಿದ ಅಪ್ರತಿಮ ಧೈರ್ಯವು ಅತ್ಯಂತ ಸ್ಫೂರ್ತಿದಾಯಕ' ಎಂದು ಭೂಪೇಂದ್ರ ಪಟೇಲ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗುಜರಾತ್‌ನ ಈ ವೀರಪುತ್ರ (ಸ್ಮಿತ್) ತಮ್ಮ ಸಾಹಸದ ಮೂಲಕ ಜಾಗತಿಕ ಮಟ್ಟದಲ್ಲಿ ಗುಜರಾತ್ ಮತ್ತು ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅವರ ರಕ್ತದಲ್ಲಿ ಹರಿಯುತ್ತಿರುವ ಗುಜರಾತಿ ಮನೋಭಾವವು ನಮ್ಮೆಲ್ಲರಲ್ಲಿ ಅಪಾರ ಹೆಮ್ಮೆಯನ್ನು ಮೂಡಿಸಿದೆ. ಅಸಾಧಾರಣ ಧೈರ್ಯ ಮತ್ತು ಮಾನವೀಯತೆಯನ್ನು ಗೌರವಿಸುವ ಸಲುವಾಗಿ ಗುಜರಾತ್ ಸರ್ಕಾರವು ಕ್ಯಾಪ್ಟನ್ ಸ್ಮಿತ್ ಅವರಿಗೆ 'ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ'ಯನ್ನು ನೀಡಲಿದೆ ಎಂದೂ ತಿಳಿಸಿದ್ದಾರೆ.
ಸ್ಮಿತ್ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಇಡೀ ಗುಜರಾತ್ ಪ್ರಾರ್ಥಿಸುತ್ತಿದೆ. ಸ್ಮಿತ್ ಅವರ ಆರೋಗ್ಯ ಸುಧಾರಣೆಗಾಗಿ ಮೊದಲ ಜ್ಯೋತಿರ್ಲಿಂಗವಾದ ಶ್ರೀ ಸೋಮನಾಥ ಮಹಾದೇವನ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ 'ಆಯುಷ್ಯ ಮಂತ್ರಜಪ'ವನ್ನು ಪಠಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.
'ದೇವಾದಿದೇವ ಶ್ರೀ ಸೋಮನಾಥೇಶ್ವರನು ನಮ್ಮ ಧೀರನಿಗೆ (ಸ್ಮಿತ್ ಮಚ್ಚರ್) ಶೀಘ್ರವೇ ಸಂಪೂರ್ಣ ಆರೋಗ್ಯವನ್ನು ಕರುಣಿಸಲಿ ಮತ್ತು ದೀರ್ಘಾಯುಷ್ಯವನ್ನು ನೀಡಲಿ ಎಂದು ನಾವು ಪ್ರಾರ್ಥಿಸುತ್ತೇವೆ' ಎಂದಿದ್ದಾರೆ.

