HEALTH TIPS

ರಿಯಾದ್ ವಿಮಾನ ನಿಲ್ದಾಣದ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ: ಹೌತಿಗಳ ಹೇಳಿಕೆ

 ಯೆಮೆನ್ ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಸೌದಿ ಅರೇಬಿಯದ ರಾಜಧಾನಿ ರಿಯಾದ್ನ ಕಿಂಗ್ ಖಾಲಿದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿರುವುದಾಗಿ ಗುರುವಾರ ಹೇಳಿಕೊಂಡಿದ್ದಾರೆ. ದಾಳಿಯ ಬಳಿಕ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ವಿಮಾನವೊಂದರಿಂದ ಹೊಗೆ ಏರುತ್ತಿರುವುದು ಕಂಡುಬಂದಿದ್ದು, ವಿಮಾನಗಳ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ವರದಿಯಾಗಿದೆ. 


ಕಿಂಗ್ ಖಾಲಿದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಉಡಾಯಿಸಿರುವುದಾಗಿ ಹೌತಿ ಸೇನಾ ವಕ್ತಾರ ಯಾಹ್ಯಾ ಸಾರಿ ಹೇಳಿಕೆ ನೀಡಿದ್ದಾರೆ. ಕ್ಷಿಪಣಿ ದಾಳಿಯಿಂದ ವಿಮಾನ ನಿಲ್ದಾಣದಲ್ಲಿ ಹಾನಿಯಾಗಿದ್ದು, ವಾಯು ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಅವರು ಹೇಳಿದ್ದಾರೆ. ಸೌದಿ ವಾಯುಪ್ರದೇಶವನ್ನು ಮುಚ್ಚುವಂತೆ ಒತ್ತಾಯಿಸುವ ಸಾಧ್ಯತೆಯ ಬಗ್ಗೆಯೂ ಹೌತಿಗಳು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.

ರಾಯಿಟರ್ಸ್ ಸುದ್ದಿ ಸಂಸ್ಥೆಯ ಪ್ರಕಾರ, ರಿಯಾದ್ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ವಿಮಾನವೊಂದರಿಂದ ಹೊಗೆ ಏರುತ್ತಿರುವುದನ್ನು ಪ್ರತ್ಯಕ್ಷದರ್ಶಿಯೊಬ್ಬರು ಗಮನಿಸಿದ್ದಾರೆ. ವಿಮಾನ ಖಾಲಿಯಾಗಿತ್ತು ಎನ್ನಲಾಗಿದೆ. ರಿಯಾದ್ ವಿಮಾನ ನಿಲ್ದಾಣವನ್ನು ಮತ್ತೆ ಮುಚ್ಚಲಾಗಿದೆ ಎಂದು ವಿಮಾನ ಸಂಚಾರದ ಮಾಹಿತಿ ನೀಡುವ ಫ್ಲೈಟ್ರಾಡಾರ್24 ಸಾಮಾಜಿಕ ಮಾಧ್ಯಮದ ಪೋಸ್ಟ್ ನಲ್ಲಿ ತಿಳಿಸಿದೆ. ಕೊನೆಯ ವಿಮಾನ ಇಳಿದಿದ್ದು 80 ನಿಮಿಷಗಳಿಗೂ ಹೆಚ್ಚು ಸಮಯದ ಹಿಂದೆ ಹಾಗೂ ಕೊನೆಯ ವಿಮಾನ ಟೇಕ್‌ಆಫ್ ಆಗಿದ್ದು 90 ನಿಮಿಷಗಳಿಗೂ ಹೆಚ್ಚು ಸಮಯದ ಹಿಂದೆ ಎಂದು ಅದು ತಿಳಿಸಿದೆ.

ಹೌತಿಗಳ ವಿರುದ್ಧ ಸೌದಿ ಅರೇಬಿಯ ಬೆಂಬಲಿತ ಪಡೆಗಳು ನಡೆಸುತ್ತಿರುವ ಹೋರಾಟ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಯೆಮೆನ್ ನ ಅಂತರ್ಯುದ್ಧವು ವರ್ಷಗಳಿಂದ ಬಹುತೇಕ ಸ್ಥಗಿತಗೊಂಡಿತ್ತು. ಆದರೆ ವ್ಯಾಪಕವಾಗಿರುವ ಅಮೆರಿಕ-ಇರಾನ್ ಸಂಘರ್ಷದ ನಡುವೆಯೇ ಯೆಮೆನ್ ನಲ್ಲಿನ ಸಂಘರ್ಷ ಮತ್ತೆ ತೀವ್ರಗೊಂಡಿದ್ದು, ಹೌತಿಗಳು ಸೌದಿ ನಗರಗಳು ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ಹೆಚ್ಚಿಸಿದ್ದಾರೆ.

ರಿಯಾದ್ ಕಡೆಗೆ ಹಾರಿಸಲಾಗಿದ್ದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಮ್ಮ ಪಡೆಗಳು ನಾಶಪಡಿಸಿವೆ ಎಂದು ಸೌದಿ ನೇತೃತ್ವದ ಒಕ್ಕೂಟ ತಿಳಿಸಿದೆ. ಸೌದಿಯನ್ನು ಗುರಿಯಾಗಿಸಿಕೊಂಡು ಹೌತಿಗಳು ನಡೆಸಿದ ಕ್ಷಿಪಣಿ ದಾಳಿಗಳನ್ನು ಈ ಹಿಂದೆ ಕೂಡ ತಡೆದಿರುವುದಾಗಿ ಒಕ್ಕೂಟ ಹೇಳಿತ್ತು. ಆದರೆ ಇತ್ತೀಚಿನ ದಾಳಿ ಅಥವಾ ವಿಮಾನ ನಿಲ್ದಾಣಕ್ಕೆ ಉಂಟಾದ ಹಾನಿಯ ಕುರಿತು ಸೌದಿ ಸರಕಾರ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸಂಘರ್ಷ ಯೆಮೆನ್ ನ ಗಡಿಗಳನ್ನು ಮೀರಿ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಹೌತಿಗಳು ಪ್ರದೇಶದ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳಿಗೂ ಎಚ್ಚರಿಕೆ ನೀಡಿದ್ದಾರೆ. ಇದರಿಂದ ವಾಣಿಜ್ಯ ವಿಮಾನಯಾನದ ಸುರಕ್ಷತೆ ಕುರಿತು ಆತಂಕ ಹೆಚ್ಚಾಗಿದೆ.

ರಿಯಾದ್ ಮತ್ತು ಸೌದಿ ಅರೇಬಿಯದ ನೈಋತ್ಯ ಭಾಗದಲ್ಲಿರುವ ಅಭಾ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಬುಧವಾರ ನಡೆದ ದಾಳಿಗಳಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಸೌದಿ ಅಧಿಕಾರಿಗಳು ತಿಳಿಸಿದ್ದರು. ಅದರ ಬೆನ್ನಲ್ಲೇ ರಿಯಾದ್ ವಿಮಾನ ನಿಲ್ದಾಣದ ಮೇಲೆ ಇತ್ತೀಚಿನ ದಾಳಿ ನಡೆದಿದೆ.

ದಾಳಿಯ ಪರಿಣಾಮ ರಿಯಾದ್ ನ ಉದ್ಯಮ ವಲಯದಲ್ಲೂ ಆತಂಕ ಉಂಟಾಗಿದೆ. ಗುರುವಾರ ಬೆಳಿಗ್ಗೆ ದೊಡ್ಡ ಶಬ್ದ ಕೇಳಿಬಂದ ಬಳಿಕ ರಿಯಾದ್ ನ ಕಿಂಗ್ ಅಬ್ದುಲ್ಲಾ ಫೈನಾನ್ಶಿಯಲ್ ಡಿಸ್ಟ್ರಿಕ್ (KAFD)ನಲ್ಲೂ ಆತಂಕ ಉಂಟಾಗಿದೆ. ಆ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಬಹುರಾಷ್ಟ್ರೀಯ ಕಂಪೆನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಕೆಲವು ರಾಜತಾಂತ್ರಿಕರು ಭದ್ರತಾ ಎಚ್ಚರಿಕೆಗಳನ್ನು ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ. ರಿಯಾದ್ ನ ಹಲವು ಶಾಲೆಗಳು ವಿದ್ಯಾರ್ಥಿಗಳು ಶಾಲಾ ಆವರಣದಲ್ಲೇ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯುವಂತೆ ಪೋಷಕರಿಗೆ ಸೂಚಿಸಿರುವುದಾಗಿ ವರದಿಯಾಗಿದೆ.

ಯೆಮೆನ್ ನ ಅಂತರ್ಯುದ್ಧವು 2022ರಲ್ಲಿ ಜಾರಿಗೆ ಬಂದ ಕದನ ವಿರಾಮದ ಬಳಿಕ ಬಹುತೇಕ ಸ್ಥಗಿತಗೊಂಡಿತ್ತು. ಆದರೆ ಈಗ ಕದನ ವಿರಾಮ ಕದಡಿದೆ. ಯೆಮೆನ್ ನ ರಾಜಧಾನಿ ಸನಾ ಹಾಗೂ ದೇಶದ ಹೆಚ್ಚು ಜನಸಂಖ್ಯೆ ಹೊಂದಿರುವ ಹಲವು ಪ್ರದೇಶಗಳ ಮೇಲೆ ಹೌತಿಗಳು ನಿಯಂತ್ರಣ ಹೊಂದಿದ್ದಾರೆ. ಕೆಂಪು ಸಮುದ್ರದ ಕರಾವಳಿಯಲ್ಲಿರುವ ಆಯಕಟ್ಟಿನ ಬಾಬ್ ಎಲ್-ಮಂಡೇಬ್ ಜಲಸಂಧಿಯ ಸುತ್ತಲಿನ ಪ್ರದೇಶಗಳಲ್ಲೂ ಹೌತಿಗಳು ಇತ್ತೀಚೆಗೆ ತಮ್ಮ ನಿಯಂತ್ರಣ ವಿಸ್ತರಿಸಿದ್ದಾರೆ.

ಯೆಮೆನ್ ನ ಅಂತರರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಸರಕಾರವನ್ನು ಬೆಂಬಲಿಸುವ ಸೌದಿ ಬೆಂಬಲಿತ ಪಡೆಗಳ ದಾಳಿಗೆ ಪ್ರತಿಯಾಗಿ ತಮ್ಮ ಇತ್ತೀಚಿನ ದಾಳಿ ಆರಂಭಿಸಲಾಗಿದೆ ಎಂದು ಹೌತಿಗಳು ಹೇಳಿವೆ. ಆದರೆ ಹೌತಿಗಳು ಹೇಳಿರುವ ರೀತಿಯಲ್ಲಿ ಹೊಸ ಸಂಘರ್ಷವನ್ನು ತಾವೇ ಆರಂಭಿಸಿದ್ದೇವೆ ಎಂಬುದನ್ನು ಯೆಮೆನ್ ಸರಕಾರ ನಿರಾಕರಿಸಿದೆ.

ಈ ನಡುವೆ ಸೌದಿ ಬೆಂಬಲಿತ ಪಡೆಗಳು ಈ ವಾರ ಪ್ರತಿದಾಳಿ ನಡೆಸಿ ಬಾಬ್ ಎಲ್-ಮಂಡೇಬ್ ಜಲಸಂಧಿಯ ಸುತ್ತಲಿನ ಕೆಲವು ಪ್ರದೇಶಗಳನ್ನು ವಶಪಡಿಸಿಕೊಂಡಿವೆ. ಮತ್ತೊಂದೆಡೆ, ಹೌತಿಗಳು ಯೆಮೆನ್ ನ ಮೂರನೇ ಅತಿ ದೊಡ್ಡ ನಗರವಾದ ತೈಝ್ ಸುತ್ತಲಿನ ಪ್ರದೇಶಗಳಲ್ಲೂ ತಮ್ಮ ಚಟುವಟಿಕೆ ವಿಸ್ತರಿಸಿದ್ದಾರೆ. ಆಡೆನ್ ಕಡೆಗೆ ಸಾಗುವ ಪ್ರಮುಖ ಪರ್ವತ ಮಾರ್ಗದ ಪ್ರದೇಶವನ್ನು ವಶಪಡಿಸಿಕೊಂಡ ಬಳಿಕ ತೈಝ್ ನಗರವನ್ನು ಸುತ್ತುವರಿದಿದ್ದಾರೆ ಎಂದು ವರದಿಯಾಗಿದೆ.

ಮತ್ತೆ ಆರಂಭಗೊಂಡಿರುವ ಹೋರಾಟದಿಂದ ನಾಗರಿಕರ ಮೇಲೂ ಪರಿಣಾಮ ಬೀರಿದೆ. ಸಂಘರ್ಷ ಪುನರಾರಂಭವಾದ ಬಳಿಕ ಸುಮಾರು 2 ಲಕ್ಷ ಮಂದಿ ಸ್ಥಳಾಂತರಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಅರಬ್ ಜಗತ್ತಿನ ಅತ್ಯಂತ ಬಡ ದೇಶವಾಗಿರುವ ಯೆಮೆನ್ ನಲ್ಲಿ ಮುಂದುವರಿದಿರುವ ಮಾನವೀಯ ಬಿಕ್ಕಟ್ಟಿಗೆ ಸಂಘರ್ಷ ಮತ್ತಷ್ಟು ಸಂಕಷ್ಟ ತಂದಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries