ನವದೆಹಲಿ: ಕಳೆದ ತಿಂಗಳ 30ರಂದು ಫ್ಲೈದುಬೈ ಪ್ರಯಾಣಿಕ ವಿಮಾನದ ಕಾಕ್‌ಪಿಟ್‌ನಲ್ಲಿ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಅವರಿಗೆ ಓಮನ್ ಮೂಲದ ಸಹಪೈಲಟ್ ಮಾರಣಾಂತಿಕವಾಗಿ ಇರಿದು, ವಿಮಾನವನ್ನು ಅಪಹರಿಸಲು ಅಥವಾ ಪತನಗೊಳಿಸಲು ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.
2016ರ ವಿಮಾನ ಅಪಹರಣ ವಿರೋಧಿ ಕಾಯ್ದೆಯ ಕಲಂ 3 ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ ಎನ್‌ಐಎ ಈ ತನಿಖೆಯನ್ನು ಕೈಗೆತ್ತಿಕೊಂಡಿದೆ.
ಭಾರತೀಯ ಪೈಲಟ್ ಮೇಲಿನ ಈ ದಾಳಿ ಮತ್ತು ವಿಮಾನ ಅಪಹರಣದ ಯತ್ನವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಗಂಭೀರ ಅಪರಾಧವಾಗಿರುವುದರಿಂದ ಕೇಂದ್ರ ಸರಕಾರವು ಎನ್‌ಐಎ ತನಿಖೆಗೆ ಆದೇಶಿಸಿದೆ.
ಪೈಲಟ್ ಮೇಲಿನ ಈ ದಾಳಿಯ ಕುರಿತು ಕೇಂದ್ರಕ್ಕೆ ಮಾಹಿತಿ ಲಭಿಸಿದ್ದು, ಘಟನೆಯಲ್ಲಿ ಉಲ್ಲೇಖಿಸಲಾದ ಅಪರಾಧಗಳು ವಿಮಾನ ಅಪಹರಣ ವಿರೋಧಿ ಕಾಯ್ದೆ ಮತ್ತು ಯುಎಪಿಎ ಅಡಿಯಲ್ಲಿ ಬರುತ್ತವೆ ಎಂದು ತೀರ್ಮಾನಿಸಲಾಗಿದೆ ಎಂದು ಎಫ್‌ಐಆರ್ ತಿಳಿಸಿದೆ. ಈ ಪ್ರಕರಣದಲ್ಲಿ ಉಲ್ಲೇಖಿಸಲಾದ ಎರಡು ನಿಬಂಧನೆಗಳು 2008ರ ಎನ್‌ಐಎ ಕಾಯ್ದೆಯಡಿ ಬರುವ ನಿಗದಿತ ಅಪರಾಧಗಳಾಗಿವೆ.
ಎನ್‌ಐಎ ಕಾಯ್ದೆಯ ಕಲಂ 8ರೊಂದಿಗೆ ಓದಲಾದ ಕಲಂ 6ರ (5) ಮತ್ತು (8) ಉಪಕಲಂಗಳನ್ನು ಬಳಸಿ, ಪ್ರಕರಣ ದಾಖಲಿಸಿ ತನಿಖೆ ಆರಂಭಿಸುವಂತೆ ಸರಕಾರವು ಎನ್‌ಐಎಗೆ ನಿರ್ದೇಶನ ನೀಡಿದೆ.
ಈ ಅನಿರೀಕ್ಷಿತ ದಾಳಿಗೆ ನಿಖರವಾದ ಪ್ರಚೋದನೆ ಅಥವಾ ಕಾರಣವೇನು ಹಾಗೂ ಇದರ ಹಿಂದೆ ಬೇರೆ ಯಾರದ್ದಾದರೂ ದೊಡ್ಡ ಸಂಚು ಅಡಗಿದೆಯೇ ಎಂಬುದು ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.
ಘಟನೆಯಲ್ಲಿ ಗಾಯಗೊಂಡು ಅಬುಧಾಬಿಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬುಧವಾರ ತಿಳಿಸಿತ್ತು.
ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಅವರು ಆಸ್ಪತ್ರೆಗೆ ಖುದ್ದು ಭೇಟಿ ನೀಡಿ ಕ್ಯಾಪ್ಟನ್ ಅವರ ಆರೋಗ್ಯ ವಿಚಾರಿಸಿದ್ದು, ಅವರು ಗುಣಮುಖರಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಭಾರತೀಯ ರಾಯಭಾರ ಕಚೇರಿಯು ಕ್ಯಾಪ್ಟನ್ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದೆ.



