ಆಲಂಕೂಡ್ಲು ದೇವಸ್ಥಾನ - ಫೆ.14ರಂದು ಅನುಜ್ಞಾಕಲಶ
0
ಫೆಬ್ರವರಿ 12, 2019
ಬದಿಯಡ್ಕ: ನೆಕ್ರಾಜೆ ಗ್ರಾಮದ ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ತ್ವರಿತಗತಿಯಿಂದ ಸಾಗುತ್ತಿದ್ದು, ಅನುಜ್ಞಾ ಕಲಶವು ಫೆ.14ರಂದು ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳು ಹಾಗೂ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳವರ ನೇತೃತ್ವದಲ್ಲಿ ಬಲಿವಾಡು ಕೂಟದೊಂದಿಗೆ ಜರಗಲಿದೆ. ಬೆಳಗ್ಗೆ 8.55 ರಿಂದ 10 ಗಂಟೆಯ ಶುಭಮುಹೂರ್ತದಲ್ಲಿ ಧಾರ್ಮಿಕ, ತಾಂತ್ರಿಕ ವಿಧಿವಿಧಾನಗಳು ನಡೆಯಲಿರುವುದು.
ಇದೇ ಸಂದರ್ಭದಲ್ಲಿ ಜೀರ್ಣೋದ್ಧಾರದ ಬಾಬ್ತು ಹಮ್ಮಿಕೊಂಡ ನಿಧಿಸಂಗ್ರಹ ಕೂಪನ್ ಬಿಡುಗಡೆ ಸಮಾರಂಭವೂ ನಡೆಯಲಿರುವುದು. ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಕೂಪನ್ ಬಿಡುಗಡೆಗೊಳಿಸಲಿರುವರು. ದೇವಸ್ಥಾನದ ರಕ್ಷಾಧಿಕಾರಿ, ಮಲ್ಲ ಕ್ಷೇತ್ರದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣುಭಟ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ವಸಂತ ಪೈ ಬದಿಯಡ್ಕ ಉಪಸ್ಥಿತರಿರುವರು. ಊರಪರವೂರ ಭಕ್ತಾದಿಗಳು ಪಾಲ್ಗೊಂಡು, ಜೀರ್ಣೋದ್ಧಾರ ಕಾರ್ಯದಲ್ಲಿ ಸಹಕರಿಸಬೇಕೆಂದು ಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

