ಲೋಕೋದ್ದಾರದ ಆಶಯದೊಂದಿಗೆ ಯಾಗ ಶಾಲೆಗೆ ಅಗ್ನಿಸ್ಪರ್ಶ
0
ಫೆಬ್ರವರಿ 24, 2019
ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಫೆ.18 ರಿಂದ ಲೋಕಕಲ್ಯಾಣಾರ್ಥವಾಗಿ ನಡೆದು ಬಂದ ಅರುಣ ಕೇತಕ ಚಯನ ಪೂರ್ವಕವಾದ ವಿಶ್ವಜಿತ್ ಅತಿರಾತ್ರ ಸೋಮಯಾಗದ ಕೊನೆಯ ದಿನವಾದ ಭಾನುವಾರ ಪೂರ್ಣಾಹುತಿಯ ಬಳಿಕ ಯಾಗ ಶಾಲೆಗೆ ಅಗ್ನಿಸ್ಪರ್ಶ ಕಾರ್ಯಕ್ರಮ ನಡೆಯಿತು.
ಪೂರ್ಣಾಹುತಿಯ ಬಳಿಕ ಶಾಸ್ತ್ರೀಯ ವೈಶ್ರವಣ ಪೂಜೆ ನಡೆಯಿತು. ಅರುಣ ಕೇತುಕ ಚಯನದ ಕೊನೆಯ ಘಟ್ಟವಾದ ವೈಶ್ರವಣ ಪೂಜೆಯು ವಿಶಿಷ್ಟವಾದುದು. ಯಾಗದ ಬಳಿಕ ಎಲ್ಲಾ ದೇವಾನುದೇವತೆಗಳಿಗೆ ಹವಿಸ್ಸು ಸಮರ್ಪಣೆ, ಋತ್ವಿಜರಿಗೆ ದಕ್ಷಿಣೆ ಹಂಚಿಕೆಯ ಬಳಿಕ ಮಹಾರುದ್ರನು ತನಗೇನೂ ಕೊಡಲಿಲ್ಲವೆಂದು ತಕರಾರು ತೆಗೆದಾಗ, ರುದ್ರ ಸಂಪ್ರೀತಿಗಾಗಿ ಯಾಗ ಶಾಲೆಯನ್ನು ಅಗ್ನಿಪೂರ್ವಕ ರುದ್ರ ಆಪೋಶನ ನೀಡುವ ಭಾಗವಾಗಿ ಈ ಆಚರಣೆ ನಡೆಸಲ್ಪಡುತ್ತದೆ.
ಮೊದಲು ಕಟೀಲು ಶ್ರೀಕ್ಷೇತ್ರದ ಅನಂತಪದ್ಮನಾಭ ಆಸ್ರಣ್ಣ ಅವರು ನಮೊದಲು ಯಾಗ ಶಾಲೆಯ ಪೂರ್ವ ದ್ವಾರದ ಮಾಡಿಗೆ ಅಗ್ನಿ ಸ್ಪರ್ಶಗೈಯ್ಯಲಾಯಿತು. ಈ ಸಂದರ್ಭ ಅಗ್ನಿಯಿಂದ ತೊಂದರೆಯಾಗದಂತೆ ಸೇರಿದ್ದ ಭಕ್ತರಿಗೆ ಸೂಚನೆ ನೀಡಲಾಯಿತು. ಜೊತೆಗೆ ಅಗ್ನಿ ಶಮನಕಾರಕ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಕಳೆದ 18 ರಂದು ಯಾಗಾರಂಭದ ದಿನದಿಂದಲೂ ಮಧ್ಯಾಹ್ನ ವೇಳೆ ಯಾಗಶಾಲೆಯ ಮೇಲ್ಬದಿ ಕೆಲವಷ್ಟು ಹೊತ್ತು ರೆಕ್ಕೆಗಳನ್ನು ಬಡಿಯುತ್ತಾ ಹಾರಾಡುತ್ತಿದ್ದ ಗಿಡುಗ ಭಾನುವಾರ ಮಧ್ಯಾಹ್ನದಿಂದ ಸಂಜೆ ಯಾಗಶಾಲೆಗೆ ಅಗ್ನಿ ಸ್ಪರ್ಶ ಗೈಯ್ಯುವವರೆಗೂ ಆಗಾಗ ಕಾಣಿಸುತ್ತಿತ್ತು.ಅಗ್ನಿಸ್ಪರ್ಶ ನಡೆಸುತ್ತಿರುವಂತೆ ದೊಡ್ಡ ಗಿಡುಗನ ಜೊತೆಗೆ ಐದಾರು ಪುಟ್ಟ ಗಿಡುಗಗಳೂ ಹಾರಾಡಿ ಮರೆಯಾದುದು ಭಕ್ತ ಜನರನ್ನು ಪುಳಕಗೊಳಿಸಿತು.

