ಉಪ್ಪಳ: ತ್ರಿವೇಣಿ ಸಂಗಮವಾದ ಪ್ರಯಾಗದಂತೆ ಶ್ರೀಕೊಂಡೆವೂರಿನ ಧಾರ್ಮಿಕ ಚಟುವಟಿಕೆಗಳು ಸನಾತನ ಧರ್ಮದ ಎಲ್ಲಾ ಸಮುದಾಯಗಳ ಜನರನ್ನು ಒಗ್ಗೂಡಿಸುವಲ್ಲಿ ಮಹತ್ತರವಾಗಿ ಗುರುತಿಸಿಕೊಂಡಿದೆ. ಯಾಗ ಯಜ್ಞಾಧಿಗಳಿಂದ ಪಾವಿತ್ಯ್ರಗೊಂಡು ಇಲ್ಲಿ ಉತ್ಪನ್ನಗೊಂಡ ಧನಾತ್ಮಕ ಶಕ್ತಿ ಸಕಲ ಚರಾಚರಗಳ ಸಹಿತ ಲೋಕ ಹಿತಕ್ಕೆ ವಿನಿಯೋಗವಾಗುವುದು. ಜೊತೆಗೆ ಪ್ರತಿಯೊಬ್ಬರೂ ತಮ್ಮ ಪುಣ್ಯದ ಒಂದಂಶವನ್ನು ರಾಷ್ಟ್ರದ ಹಿತಕಾಯ್ದು ವೀರ ಮರಣವನ್ನು ಅಪ್ಪಿದ ಹುತಾತ್ಮ ಸೈನಿಕರಿಗೆ ಮೀಸಲಿಡುವ ಸಂಕಲ್ಪ ತೊಡಬೇಕು ಎಂದು ಶ್ರೀಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ವೇದಮೂರ್ತಿ ಕಮಲಾದೇವೀ ಪ್ರಸಾದ ಆಸ್ರಣ್ಣ ಅವರು ತಿಳಿಸಿದರು.
ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ನಡೆಯುತ್ತಿರುವ ವಿಶಿಷ್ಟ ಸೋಮಯಾಗದ ಅಂಗವಾಗಿ ಮಂಗಳವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಅನುಗ್ರಹ ಭಾಷಣಗೈದು ಅವರು ಮಾತನಾಡಿದರು.
ಆಧ್ಯಾತ್ಮಕ ಶಕ್ತಿ ಸಂಚಯನವು ದೌಷ್ಟ್ರ್ಯದ ವಿರುದ್ದ ಜಯಗೊಳಿಸುವಲ್ಲಿ ಬಲ ನೀಡುತ್ತದೆ. ಪ್ರತಿಯೊಬ್ಬರಲ್ಲೂ ಇಂತಹ ಶಕ್ತಿ ವೃದ್ದಿಸಲಿ. ಕೊಂಡೆವೂರು ಶ್ರೀಕ್ಷೇತ್ರದ ಇಂತಹ ಪ್ರಯತ್ನಗಳಿಗೆ ಕೈನೀಡುವ ಸುಮನಸ್ಸು ಮೂಡಿಬರಲಿ ಎಂದು ತಿಳಿಸಿದರು.
ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಉದ್ಯಮಿ ಸೌಂದರ್ಯ ರಮೇಶ್ ಬೆಂಗಳೂರು ಅವರು ಮಾತನಾಡಿ, ದೇವರ ಕ್ಷೇತ್ರಗಳಿಗೆ ನಾವು ಎಲ್ಲಾ ರೀತಿಯ ಸೇವೆ ಸಲ್ಲಿಸುವುದರಿಂದ ಒಳಿತು ಸಾಧ್ಯ. ಕೊಂಡೆವೂರಿನ ಎಲ್ಲಾ ಸಮಾಜ ಮುಖೀ ಕಾರ್ಯಗಳಿಗೆ ತನ್ನ ಸಂಪೂರ್ಣ ಸಹಕಾರ ಎಂದಿಗೂ ಮುಡಿಪಾಗಿದೆ ಎಂದು ತಿಳಿಸಿದರು.
ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ಮಾಲಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬದುಕಿನ ಪಾಪವನ್ನು ತೊಳೆದು ಪುಣ್ಯ ಸಂಪಾದನೆಯ ಯಾಗಭೂಮಿಯಾಗಿ ಬೆಳೆದಿರುವ ಕೊಂಡೆವೂರು ಕರಾವಳಿಯ ಕಾಶಿ ಎನಿಸಿದೆ ಎಂದು ತಿಳಿಸಿದರು.
ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಐಲ ಕ್ಷೇತ್ರದ ಆಡಳಿತ ಮೊಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ, ಕಚ್ಚೂರು ಶ್ರೀನಾಗೇಶ್ವರ ಕ್ಷೇತ್ರದ ಆಡಳಿತ ಮೊಕ್ತೇಸರ ಸುರೇಶ್ ಭಂಡಾರಿ ಕಡಂದಲೆ, ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಸೂರಜ್ ಇಂಟರ್ ನ್ಯಾಶನಲ್ ವಿದ್ಯಾಸಂಸ್ಥೆಯ ಅಧ್ಯಕ್ಷ ಮಂಜುನಾಥ ರೇವಣ್‍ಕರ್, ಯಾಗ ಸಮಿತಿ ಗೌರವಾಧ್ಯಕ್ಷ ಇ.ಎಸ್.ಮಹಾಬಲೇಶ್ವರ ಭಟ್ ರಷ್ಯಾ, ಯಾಗ ಸಮಿತಿ ಕಾರ್ಯಾಧ್ಯಕ್ಷರಾದ ಮೋನಪ್ಪ ಭಂಡಾರಿ ಹಾಗೂ ಡಾ.ಶ್ರೀಧರ ಭಟ್ ಉಪ್ಪಳ, ಕುಲಾಲ ಸಂಘದ ಜಿಲ್ಲಾಧ್ಯಕ್ಷ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ, ಕಿರಣ್ ಭಟ್ ಬೆಂಗಳೂರು, ಬೆಂಗಳೂರು ಯಾಗ ಸಮಿತಿ ಗೌರವಾಧ್ಯಕ್ಷ ಇ.ಎಸ್.ರಾಮ ಭಟ್ ಉಪಸ್ಥಿತರಿದ್ದು, ಯಾಗ ಸಾಕಾರತೆಯ ಮೂಲಕ ದೈವಾನುಗ್ರಹ ವನ್ನು ನಾವು ಪಡೆಯೋಣ ಎಂದು ಸದಾಶಯ ವ್ಯಕ್ತಪಡಿಸಿ ಹಿತನುಡಿಗಳನ್ನಾಡಿದರು.
ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಶ್ರೀಗಳು ಆಶೀರ್ವಚನಗೈದು, ಹಿಂದೂ ಸಮಾಜದ ವಿರಾಟ್ ದರ್ಶನಕ್ಕೆ ಕಾರಣೀಭೂತರಾದ ಕೊಂಡೆವೂರು ಶ್ರೀಗಳನ್ನು ಶಿಷ್ಯರನ್ನಾಗಿ ಪಡೆದಿರುವುದು ನಮಗೆ ಧನ್ಯತೆಯನ್ನುಂಟುಮಾಡಿದೆ ಎಂದು ನುಡಿದರು. ಕೊಂಡೆವೂರು ಶ್ರೀಗಳು ತಮ್ಮ ಅನುಗ್ರಹ ಸಂದೇಶದಲ್ಲಿ ನಾವು ನಿಮಿತ್ತ ಮಾತ್ರ. ದೇವರು ಎಲ್ಲಾ ಸತ್ಕರ್ಮಗಳನ್ನೂ ಯಥೋಚಿತವಾಗಿ ಮಾಡಿಸುತ್ತಿದ್ದಾರೆ ಎಂದು ನುಡಿದರು.
ಈ ಸಂದರ್ಭದಲ್ಲಿ ರಾಷ್ಟ್ರ ಸಂರಕ್ಷಣೆಗಾಗಿ ಹುತಾತ್ಮರಾದ ಧೀರ ಸೈನಿಕರಿಗೆ ಒಂದು ನಿಮಿಷಗಳ ಮೌನವಾಚರಿಸಿ ಗೌರವ ನಮನಗಳನ್ನು ಸಮರ್ಪಿಸಲಾಯಿತು. ವೇದಿಕೆಯಲ್ಲಿ ಕೊಂಡೆವೂರು ಶ್ರೀಕ್ಷೇತ್ರದ ಭಕ್ತಿ ಗಾನಗಳ ಯೋಗಾಮೃತ ವಿಶೇಷ ಸಿಡಿ ಧ್ವನಿಮುದ್ರಿಕೆಯನ್ನು ಯತಿದ್ವಯರು ಬಿಡುಗಡೆಗೊಳಿಸಿದರು. ಕು.ಗಾಯತ್ರೀ ಕೊಂಡೆವೂರು ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ನ್ಯಾಯವಾದಿ ಗಂಗಾಧರ ಕೊಂಡೆವೂರು ಸ್ವಾಗತಿಸಿ, ದಿನಕರ ಹೊಸಂಗಡಿ ವಂದಿಸಿದರು. ರಾಜಾರಾಮ ರಾವ್ ಮೀಯಪದವು ಕಾರ್ಯಕ್ರಮ ನಿರೂಪಿಸಿದರು.
