ಪ್ರೇಯಸ್ಸು ರಹಿತ ಶ್ರೇಯಸ್ಸು ಬದುಕಿನ ಲಕ್ಷ್ಯವಾಗಿರಲಿ-ಒಡಿಯೂರು ಶ್ರೀ
0
ಫೆಬ್ರವರಿ 21, 2019
ಅತಿರಾತ್ರ ಸೋಮಯಾಗ ಧರ್ಮ ಸಭೆಯಲ್ಲಿ ಸಂದೇಶ
ಉಪ್ಪಳ: ಧರ್ಮವೆಂಬ ನೆಟ್‍ವರ್ಕ್‍ನ ಮೂಲಕ ಆಧ್ಯಾತ್ಮಿಕತೆಯ ಸಂರಕ್ಷಣೆಯನ್ನು ಕೊಂಡೆವೂರಿನ ಶ್ರೀಗಳು ಅತ್ಯಂತ ಶಿಸ್ತಿನಿಂದ ಮಾಡುತ್ತಿದ್ದು, ಸೋಮಯಾಗದಿಂದ ವಿಶ್ವಪರಿಚರ್ತನೆಯ ಸಂದೇಶವನ್ನು ಸಮಾಜಕ್ಕೆ ನೀಡುತ್ತಿರುವುದು ಶ್ರೇಷ್ಟ. ಕಲ್ಲನ್ನು ಶಿಲ್ಪವಾಗಿಸುವ ಸಂಕಲ್ಪದೊಂದಿಗೆ ನಡೆಯುತ್ತಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದಿಂದ ಧರ್ಮ ಸಂಸ್ಕøತಿಯ ಅನಾವರಣವಾಗಲಿದೆ. ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಈ ಕಾಲಘಟ್ಟದಲ್ಲಿ ಯಾಗ ಯಜ್ಞಾದಿಗಳು ನಡೆಯಬೇಕಾದ ಅಗತ್ಯವಿದೆ. ಆ ಪುಣ್ಯದ ಕೆಲಸ ಕೊಂಡೆವೂರಿನ ಪವಿತ್ರ ನೆಲದಲ್ಲಿ ಸಂಪನ್ನಗೊಳ್ಳುತ್ತಿದೆ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರು ನುಡಿದರು.
ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನಡೆಯುತ್ತಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದ ಪ್ರಯುಕ್ತ ಬುಧವಾರ ಬೆಳಿಗ್ಗೆ ನಡೆದ ಧರ್ಮಸಂದೇಶ ಸಭೆಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ಲೌಕಿಕ ಸುಖವನ್ನು ಪ್ರೇಯಸ್ಸು ನೀಡಿದರೆ ಜೀವನಕ್ಕೆ ಅನಿವಾರ್ಯವಾಗಿರುವ ಶ್ರೇಯಸ್ಸಿನಿಂದ ಶಾಂತಿ ನೆಲೆಗೊಳ್ಳಲಿದೆ ಎಂದು ಅವರು ತಿಳಿಸಿದರು. ಅವಧೂತ ಶ್ರೀ ನಿತ್ಯಾನಂದ ಸ್ವಾಮಿಗಳ ಅನುಗ್ರಹದಿಂದ ಕೊಂಡೆವೂರು ಆಶ್ರಮದಲ್ಲಿ ಗುರುಪರಂಪರೆಯ ದೃಷ್ಟಿಯಿಂದ ಎಲ್ಲವೂ ಸಾಕಾರವಾಗುತ್ತಿದ್ದು, ರಾಷ್ಟ್ರಕಟ್ಟುವ ಮಹಾನ್ ಕೆಲಸಕ್ಕೆ ಈ ಯಾಗವು ಮುನ್ನುಡಿಯಾಗಲಿದೆ ಎಂದು ಅವರು ಹಾರೈಸಿದರು.
ಮೂಡುಬಿದಿರೆ ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿಯವರು ಉಪಸ್ಥಿತರಿದ್ದು ಆಶೀರ್ವಚನ ನೀಡಿ, ತಾಳ್ಮೆ, ಪರಿಶ್ರಮ, ಸಾಧನೆಗಳಿಂದ ಯಜ್ಞಗಂಗೆಯನ್ನು ಕೇರಳಕ್ಕೆ ತಂದು ಭಗೀರಥ ಎಂಬ ಹೆಸರಿಗೆ ಕೊಂಡೆವೂರು ಪಾತ್ರಗಿದ್ದು ಮಾತ್ರವಲ್ಲ ಕೊಂಡೆವೂರು ಶ್ರೀಗಳು ಕಣ್ಣಿಗೆ ಕಾಣುವ ದೇವರೆನಿಸಿಕೊಂಡಿದ್ದಾರೆ. ಭಕ್ತರ ಹಿಂದೆ ಭಗವಂತ ಸದಾ ಇರುತ್ತಾನೆ. ದೇವರ ನಾಡೆಂಬ ಕೇರಳ ಪ್ರಸ್ತುತ ರಾಕ್ಷಸರ ನಾಡೆನಿಸಿಕೊಂಡಿದ್ದು, ಇಲ್ಲಿ ನಡೆಯುತ್ತಿರುವ ಅತ್ಯಪೂರ್ವ ಸೋಮಯಾಗದ ಫಲದಿಂದ ಕೇರಳ ಮತ್ತೆ ದೇವರ ನಾಡೆನಿಸಿಕೊಳ್ಳಲಿ ಎಂದು ಅವರು ತಿಳಿಸಿದರು. ಭಾರತ ಮತ್ತೆ ಜಗತ್ತಿನ ಗುರುವಾಗಿಸುವಲ್ಲಿ ಇಂತಹ ಪುಣ್ಯಕಾರ್ಯಗಳು ಕಾರಣವಾಗುತ್ತವೆ ಎಂದು ತಿಳಿಸಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಗಳು ದಿವ್ಯ ಉಪಸ್ಥಿತರಿದ್ದರು. ಡಾ,ಜಯಪ್ರಕಾಶ್‍ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿ, ದಿನಕರ ಹೊಸಂಗಡಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

