HEALTH TIPS

ಸೋಮಯಾಗ ಭೂಮಿಗೆ ಸೋಮರಾಜನ ಆಗಮನ!-ಪ್ರವಗ್ರ್ಯ ಅಗ್ನಿಯ ಅಚ್ಚರಿ ವೇದೋಕ್ತ ಯಾಗ ಕ್ರಮಗಳಿಂದ ಗಮನ ಸೆಳೆವ ಕೊಂಡೆವೂರು

ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ನಡೆಯುತ್ತಿರುವ ಅತಿರಾತ್ರ ಸೋಮಯಾಗದ ಅಂಗವಾಗಿ ಬುಧವಾರ ಬೆಳಿಗ್ಗೆ ಪಾರಂಪರಿಕ ಜೋಡು ಎತ್ತಿನ ಗಾಡಿಯಲ್ಲಿ ಸೋಮರಾಜನನ್ನು ಯಾಗ ಭೂಮಿಗೆ ಕರೆ ತರುವ ವಿಶಿಷ್ಟ ಕಾರ್ಯಕ್ರಮ ನಡೆಯಿತು. ಸೋಮಯಾಗದ ಪ್ರಧಾನ ದೇವತೆಯಾದ ಸೋಮರಾಜನ ಉಪಸ್ಥಿತಿಯಲ್ಲಿ ವಿಧಿವಿಧಾನಗಳು ಏರ್ಪಡುವುದು ಇದರ ಹಿನ್ನೆಲೆಯಾಗಿದೆ. ಸುಬ್ರಹ್ಮಣ್ಯ ನಾಮಕರಾದ ಋತ್ವಿಜರು ಸೋಮರಾಜರ ಪೋಷಾಕಿನಲ್ಲಿ ಜೋಡಿ ಎತ್ತುಗಳು ಎಳೆದ ಗಾಡಿಯಲ್ಲಿ ಋಕ್, ಯಜುರ್, ಸಾಮ ಹಾಗೂ ಅಥರ್ವ ವೇದೋಕ್ತ ಮಂತ್ರೋಚ್ಚಾರಗಳೊಂದಿಗೆ ಸ್ವಾಗತಿಸಲಾಯಿತು. ಸೋಮಯಾಗ ಋತ್ವಿಜರಾದ ವಿದ್ವಾನ್ ಗಣೇಶ ವಾಸುದೇವ ಜೋಗಳೇಕರ್ ಅವರ ವೈದಿಕರ ತಂಡ ಸ್ವಾಗತಿಸಿದರು. ಗಗನಕ್ಕೆ ಚಿಮ್ಮಿದ ಪ್ರವಗ್ರ್ಯ ಅಗ್ನಿ ವೈಭವ: ಯಾಗದ ಮಹತ್ತರ ಅಂಶವೆಂದೇ ಬಿಂಬಿತವಾಗಿರುವ ಪ್ರವಗ್ರ್ಯ ಎಂಬ ವಿಧಿ ವಿಶಿಷ್ಟವಾಗಿ ಗುರುತಿಸಲ್ಪಡುತ್ತಿದೆ. ಒಟ್ಟು ಯಾಗ ಪ್ರಕ್ರಿಯೆಯಲ್ಲಿ 8 ಬಾರಿ ಆಚರಿಸಲ್ಪಡುವ ಈ ವಿಧಾನದಲ್ಲಿ ದಿನಕ್ಕೆ ಎರಡು ಬಾರಿಯಂತೆ ಕ್ರಮ ಅನುಸರಿಸಲಾಗುತ್ತಿದೆ. ಶೇ. 50 ಹುತ್ತದ ಮಣ್ಣು, ಶೇ. 15 ಹಂದಿ ತಿವಿದ ಮಣ್ಣು, ಶೇ.35 ಆವೆ ಮಣ್ಣಿಗೆ ಆಡಿನ ಹಾಲು, ಗರಿಕೆ, ಸೋಮಲತೆ, ಗಂಡು ಆಡಿನ ರೋಮ, ಕೃಷ್ಣ ಮೃಗದ ರೋಮವನ್ನು ಸೇರಿಸಿ ತಯಾರಿಸಿದ ಮೂರು ಪಾತ್ರೆಗಳು ಇಲ್ಲಿ ಉಪಯೋಗಿಸಲ್ಪಡುತ್ತದೆ. ಇದನ್ನು ಮಹಾವೀರ ಪಾತ್ರೆ ಎಂದು ಕರೆಯಲಾಗುತ್ತದೆ. ಈ ಪಾತ್ರೆಯಲ್ಲಿ ವಿಶೇಷ ಕ್ರಮದಲ್ಲಿ ತಯಾರಿಸಿದ ಅಜ್ಯಗಳನ್ನು ಬಳಸಿ ನಡೆಸುವ ಯಾಗ ಪ್ರಕ್ರಿಯೆ ಪ್ರವಗ್ರ್ಯ ಎನಿಸಿಕೊಂಡಿದ್ದು, ನಾಲ್ಕೂ ವೇದಗಳ ಮಂತ್ರೋಚ್ಚಾರಗಳೊಂದಿಗೆ ಸುಮಾರು 20ನಿಮಿಷಗಳ ಈ ವಿಧಿವಿಧಾನದಲ್ಲಿ ಮೂರು ಬಾರಿ ಸ್ಪೋಟ ಸಂಭವಿಸಿ ಅಗ್ನಿಯ ಕೆನ್ನಾಲಿಗೆ 5-6 ಫೀಟ್ ಎತ್ತರಕ್ಕೆ ಚಿಮ್ಮುತ್ತದೆ. ಜೊತೆಗೆ ಯಾಗ ಪರಿಸರದಲ್ಲಿ ಕಟ್ಟಿದ ಕಾಸರಗೋಡು ಗಿಡ್ಡ ತಳಿಯ ಹಸುವಿನ ಹಾಲನ್ನು ಕರೆದು ಬಳಸಲಾಯಿತು. ಮಂತ್ರೋಚ್ಚಾರಗಳ ಧ್ವನಿಗಳ ಆವರ್ತಾಂಕ ಮತ್ತು ಬಳಸುವ ಸುವಸ್ತುಗಳ ಧೂಮಗಳು ಪ್ರಕೃತಿಯನ್ನು ಸುಸ್ತಿತಿಯಲ್ಲಿರಿಸುತ್ತದೆ ಎಂಬುದು ಈ ಪ್ರಕ್ರಿಯೆಯ ಮೂಲಾಂಶ ಎಂದು ಯಾಗ ಪ್ರಧಾನರಾದ ವಿದ್ವಾನ್ ಗಣೇಶ ವಾಸುದೇವ ಜೋಗಳೇಕರ್ ಸಮರಸ ಸುದ್ದಿಗೆ ಮಾಹಿತಿ ನೀಡಿದ ವಿಶೇಷ ಸಂದರ್ಶನದಲ್ಲಿ ಮಾಹಿತಿ ನೀಡಿದರು. ವಿಜ್ಞಾನಿಗಳ ತಂಡ ಆಗಮನ ನಿರೀಕ್ಷೆ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ನಡೆಯುತ್ತಿರುವ ಅತಿರಾತ್ರ ಸೋಮಯಾಗದ ಒಟ್ಟು ವೈಜ್ಞಾನಿಕ ಮಹತ್ವದ ದಾಖಲೀಕರಣಕ್ಕೆ ಗೋವಾದ ವಿಜ್ಞಾನಿಗಳ ತಂಡವೊಂದು ಗುರುವಾರ ಶ್ರೀಕ್ಷೇತ್ರಕ್ಕೆ ಆಗಮಿಸಲಿದೆ ಎಂದು ಕೊಂಡೆವೂರು ಶ್ರೀ ಆಶ್ರಮದ ಯೋಗಾನಂದ ಸರಸ್ವತೀ ಶ್ರೀಗಳು ಸಮರಸ ಸುದ್ದಿಗೆ ತಿಳಿಸಿದರು. ಆಶ್ರಮದಲ್ಲಿ ಈ ಹಿಂದೆ 2017ರಲ್ಲಿ ನಡೆಸಿದ ಘೃತ ಸಂಹಿತಾ ಯಾಗದ ಸಂದರ್ಭದಲ್ಲೂ ಕೇರಳದ ತಿರುವನಂತಪುರ ಮತ್ತು ಚೆನ್ನೈಗಳಿಂದ ವಿಜ್ಞಾನಿಗಳ ತಂಡ ಆಗಮಿಸಿ ದಾಖಲೀಕರಣ ನಡೆಸಿದ್ದರು. ಅಗ್ನಿಹೋತ್ರಿಗಳ ಸಾನ್ನಿಧ್ಯ: ಸೋಮಯಾಗದ ಯಜಮಾನರಾದ ಮುಂಬಯಿ ರತ್ನಗಿರಿಯ ಅಗ್ನಿಹೋತ್ರಿಗಳಾದ ಅನಿರುದ್ದ ವಾಜಪೇಯಿ ದಂಪತಿಗಳ ಸಾನ್ನಿಧ್ಯ ಮಹತ್ವದ್ದಾಗಿದೆ. ಭರತ ಖಂಡದಲ್ಲಿ ಒಟ್ಟು 26 ಮಂದಿ ಅಗ್ನಿಹೋತ್ರಿಗಳು ಮಾತ್ರವಿದ್ದು ಅವರಲ್ಲಿ ಅನಿರುದ್ದ ವಾಜಪೇಯಿ ದಂಪತಿಗಳೂ ಓರ್ವರು. ಪ್ರಸ್ತುತ ಕೊಂಡೆವೂರು ಶ್ರೀಕ್ಷೇತ್ರದ ಸೋಮಯಾಗಕ್ಕೆ ಇವರೇ ಯಜಮಾನತ್ವ ವಹಿಸಿದ್ದಾರೆ. ಕಠಿಣ ವಿಧಾನಗಳ ಮೂಲಕ ಸೋಮಯಾಗದಲ್ಲಿ ಅವರು ಯಜಮಾನ್ಯತ್ವ ವಹಿಸುತ್ತಾರೆ. ಯಾಗ ಶಾಲೆಯಲ್ಲೇ ಯಾಗ ಕೊನೆಯಾಗುವ ತನಕ ಉಳಕೊಳ್ಳುವ ಅವರು ನಿಗದಿತ ಸರಳ ಆಹಾರ ಸೇವಿಸುತ್ತಾರೆ. ಕೊನೆಯ ಒಂದು ದಿನದ(24 ಗಂಟೆ)ನಿದ್ರೆಗಳನ್ನೂ ಮಾಡದೆ, ಆಹಾರ ಸೇವಿಸದೆ ಇವರು ವಿಧಿ ವಿಧಾನ ನಿರ್ವಹಿಸುತ್ತಾರೆ. ದ್ರವಾಹಾರ ಸೇವನೆ ಮೊದಲಾದ ಕಠಿಣ ಕ್ರಮಗಳನ್ನು ಅನುಸರಿಸುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries