ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಫೆ.18 ರಿಂದ ಐತಿಹಾಸಿಕವಾಗಿ ನಡೆದು ಬಂದ ಅರುಣ ಕೇತುಕ ಚಯನಪೂರ್ವಕವಾಗಿ ಹಮ್ಮಿಕೊಳ್ಳಲಾಗಿದ್ದ ವಿಶ್ವಜಿತ್ ಅತಿರಾತ್ರ ಸೋಮಯಾಗ ಭಾನುವಾರ ಸಂಪನ್ನಗೊಂಡಿತು.
ಬೆಳಿಗ್ಗೆ ಪ್ರಾಯಶ್ಚಿತ್ತಾದಿ ಯಜ್ಞಪುಚ್ಚ, ಬಳಿಕ ಅವಭೃತ ಸ್ನಾನ ನಡೆಯಿತು. ಬಳಿಕ ಉದಯನಿಯೇಷ್ಠಿ ಹಾಗೂ ಮೈತ್ರಾವರುಣ್ಯೇಷ್ಟಿ, ಉದವಸಾನೀಯ ನೆರವೇರಿತು. ಆ ಬಳಿಕ ಯಾಗಾಚಾರ್ಯ ಗಣೇಶ ವಾಸುದೇವ ಜೋಗಳೇಕರ್, ಯಾಗ ನೇತೃತ್ವ ವಹಿಸಿದ್ದ ಅಗ್ನಿಹೋತ್ರಿ ಅನಿರುದ್ದ ವಾಜಪೇಯಿ ಯವರ ಸಮಕ್ಷಮ ಪೂರ್ಣಾಹುತಿ ನೆರವೇರಿತು.
ಈ ಸಂದರ್ಭ ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಸ್ವಾಮೀಜಿ ಹಾಗೂ ಕರಿಂಜೆ ಸ್ವಾಮೀಜಿಗಳು, ಯಾಗ ರಕ್ಷಕರಾದ ಕೇಂದ್ರ ಆಯುಷ್ ಖಾತೆಸಚಿವ ಶ್ರೀಪಾದ್ ಎಸ್ಸೋ ನಾಯಕ್, ಕಟೀಲು ಶ್ರೀಕ್ಷೇತ್ರದ ಕಮಲಾದೇವೀ ಪ್ರಸಾದ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಾರ್ಯಾಧ್ಯಕ್ಷ ಮೋನಪ್ಪ ಭಂಡಾರಿ, ಕೆ.ನಾರಾಯಣ ಸ್ಕ್ಯಾನ್ ಪ್ರಿಂಟರ್ಸ್, ಡಾ.ಶ್ರೀಧರ ಭಟ್ ಉಪ್ಪಳ, ಕೋಶಾಧ್ಯಕ್ಷಶಶಿಧರ ಶೆಟ್ಟಿ ಗ್ರಾಮ ಚಾವಡಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರು, ರಾಮಚಂದ್ರ ಚೆರುಗೋಳಿ, ಸದಾಶಿವ ಮೋಂತಿಮಾರ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

ಪೂರ್ಣಾಹುತಿಯ ಬಳಿಕ ಮಾತನಾಡಿದ ಯಾಗ ಅಧ್ಯರ್ಯರಾದ ಗಣೇಶ ವಾಸುದೇವ ಜೋಗಳೇಕರ್ ಅವರು ಮಾತನಾಡಿ, ಭೂಮಂಡಲದ ಜೀವಕೋಟಿಗಳ ಸೌಖ್ಯ ಸಮಾಧಾನಗಳಿಗೆ ಯಾಗ ಪುಣ್ಯ ನಿಕ್ಷಿಪ್ತವಾಗಲೆಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸಸ್ವಾಮೀಜಿ ಅವರು ಮಾತನಾಡಿ, ಲೋಕ ಕಲ್ಯಾಣದ ಆಶಯದೊಂದಿಗೆ ನೆರವೇರಿಸಲಾದ ಯಾಗ ಸಜ್ಜನ ಭಜಕರ ನೆರವಿನೊಂದಿಗೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಸರ್ವರಿಗೂ ಯಾಗ ಸತ್ಪಲ ದೊರಕುವಂತಾಗಲಿ ಎಂದು ತಿಳಿಸಿದರು.

ಬಳಿಕ ಸಮಾರೋಪ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಆ ಬಳಿಕ ಯಾಗ ಸಮರ್ಪಣೆಯ ಭಾಗವಾಗಿ ಸಂಪೂರ್ಣ ಯಾಗಶಾಲೆಗೆ ಅಗ್ನಿಸ್ಪರ್ಶ ನಡೆಸಲಾಯಿತು. ಬಳಿಕ ಮಂತ್ರಾಶೀರ್ವಾದ, ಮಹಾಪ್ರಸಾದ ವಿತರಣೆ ನೆರವೇರಿತು.