ಉಪ್ಪಳ: ಸಹಕಾರದೊಂದಿಗೆ ಪರಸ್ಪರ ಕೈಜೊಡಿಸುವುದು ಜೀವನದ ಮೂಲ ಧರ್ಮವಾಗಿದೆ. ಪ್ರೀತಿ ಎನ್ನುವುದೇ ಬದುಕಿನ ಮೂಲ ತತ್ವವಾದಾಗ ಒಲುಮೆಯ ಸ್ಥಾಯೀ ಭಾವ ಬೆಳೆದುಬರುತ್ತದೆ. ಇಂತಹ ಸಂಸ್ಕಾರಗಳನ್ನು ಕಲೆ, ಸಾಹಿತ್ಯಗಳು ಕಲಿಸಿಕೊಡುತ್ತದೆ ಎಂದು ಹಿರಿಯ ವೈದ್ಯ, ಸಾಹಿತಿ, ಜಿಲ್ಲಾ ಲೇಖಕರ ಸಂಘದಧ್ಯಕ್ಷ ಡಾ.ರಮಾನಂದ ಬನಾರಿ ತಿಳಿಸಿದರು.
ಜಿಲ್ಲಾ ಕನ್ನಡ ಲೇಖಕರ ಸಂಘ, ತಪಸ್ಯ ಕಲಾ ಸಾಹಿತ್ಯ ವೇದಿಕೆಯ ಜಿಲ್ಲಾ ಘಟಕ ಮತ್ತು ಕಾರ್ಟೂನು ಕಾಸರಗೋಡು ಇವುಗಳ ಸಂಯುಕ್ತ ಆಶ್ರಯದಲ್ಲಿ ಪೈವಳಿಕೆ ಸಮೀಪದ ಬಾಯಿಕಟ್ಟೆಯ ಶ್ರೀಅಯ್ಯಪ್ಪ ಭಜನಾ ಮಂದಿರದ ಸಭಾ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ "ಗೆರೆ-ಬರೆ-ವರ್ಣ ಜಾಲ" ಎಂಬ ವಿಶಿಷ್ಟ ಕಾರ್ಯಕ್ರಮದ ಅಂಗವಾಗಿ ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಸಿ, ಸಮಾರೋಪ ಭಾಷಣಗೈದು ಅವರು ಮಾತನಾಡಿದರು.
ಭಾಷೆ-ಭಾಷೆಗಳ ಮಧ್ಯೆ ದ್ವೇಶ-ಅಸೂಯೆಗಳು ಸರ್ವಥಾ ಸಲ್ಲದು. ಮಾತೃಭಾಷೆಯ ಪ್ರೀತಿ-ಅನುಮೋದನೆಯೊಂದಿಗೆ ಇತರ ಭಾಷೆಯ ಅರಿವನ್ನೂ ಪಡೆದುಕೊಂಡು ಜೀವನದಲ್ಲಿ ಮುನ್ನಡೆಯುವ ಸನ್ಮನಸ್ಸು ಪ್ರತಿಯೊಬ್ಬರಲ್ಲೂ ಉತ್ಸಾಹ ಮೂಡಿಸುವಲ್ಲಿ ಸಫಲವಾಗುತ್ತದೆ ಎಂದು ತಿಳಿಸಿದ ಅವರು, ಎಳೆಯ ಹರೆಯದ ಮಕ್ಕಳಲ್ಲಿನ ಸೃಜನಾತ್ಮಕತೆಗೆ ಆಶ್ರಯ, ಬೆಂಬಲ ನೀಡುವ ಪ್ರಯತ್ನಗಳಾಗಬೇಕು ಎಂದು ತಿಳಿಸಿದರು. ಚಿತ್ರ ಕಲೆಯ ಮೂಲಕ ಭಾವನೆಗಳನ್ನು ತೆರೆದಿಡುವುದರ ಜೊತೆಗೆ ವರ್ತಮಾನದ ಸಮಾಜವನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿಹೊಂದಿರುತ್ತದೆ. ಮನಸ್ಸುಗಳಿಗೆ ಮುದನೀಡುವುದರ ಜೊತೆಗೆ ಮನೋವಿಕಾಸಕ್ಕೆ ಚಿತ್ರಕಲೆ ಬಲ ನೀಡುತ್ತದೆ ಎಂದು ಅವರು ಈ ಸಂದರ್ಭ ತಿಳಿಸಿದರು.

ಕಾರ್ಟೂನ್ ಕಾಸರಗೋಡು ಸಂಸ್ಥೆಯ ಜಿಲ್ಲಾಧ್ಯಕ್ಷ ವೆಂಕಟ್ ಭಟ್ ಎಡನೀರು, ತಪಸ್ಯದ ಜಿಲ್ಲಾಧ್ಯಕ್ಷ ಸುರೇಂದ್ರ ಉದುಮ, ನಿವೃತ್ತ ಚಿತ್ರ ಶಿಕ್ಷಕ ಬಾಲ ಮಧುರಕಾನನ ಉಪಸ್ಥಿತರಿದ್ದು ಶುಭಹಾರೈಸಿದರು. ಶಿಬಿರದಲ್ಲಿ ಪಾಲ್ಗೊಂಡು ಚಿತ್ರಕಲೆ, ಕವಿತಾ ರಚನೆ ಮೊದಲಾದ ಸ್ಪರ್ಧೆಗಳಲ್ಲಿ ವಿಜೇತರಾದ ಸಂದೇಶ್, ತೇಜಸ್, ಸಿ.ಜೆ.ಶಶಾಂಕ್, ನಿಖಿಲ್ ಪಿ, ಮಂಜುಷಾ ಪಿ ಮೊದಲಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಂಘಟಕ ಪ್ರೊ.ಪಿ.ಎನ್.ಮೂಡಿತ್ತಾಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಹರೀಶ್ ಸುಲಾಯ ಒಡ್ಡಂಬೆಟ್ಟು ನಿರೂಪಿಸಿ ವಂದಿಸಿದರು.
ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಚಿತ್ರಕಲಾವಿದ ಹರಿಶ್ಚಂದ್ರ ಶೆಟ್ಟಿ ಮಂಗಳೂರು ಅವರು ಕಾರ್ಟೂನ್ ಬಿಡಿಸುವ ಮೂಲಕ ಶಿಬಿರ ಉದ್ಘಾಟಿಸಿದರು. ಹಿರಿಯ ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ ಅಧ್ಯಕ್ಷತೆ ವಹಿಸಿದರು. ಅವರು ಈ ಸಂದರ್ಭ ಮಾತನಾಡಿ ಸೃಜನಾತ್ಮಕತೆಗೆ ಪ್ರೋತ್ಸಾಹ ನೀಡುವ ಕಾರ್ಯಚಟುವಟಿಕೆಗಳು ಕಲ್ಯಾಣ ಸಮಾಜ ನಿರ್ಮಾಣದ ಪ್ರಧಾನ ಭೂಮಿಕೆಯಾಗಿದೆ. ವಿದ್ಯಾರ್ಥಿ ಜೀವನದ ಹಸಿಮಣ್ಣಿನ ಹೆಜ್ಜೆಗಳು ಮುಂದಿನ ಬದುಕಿನ ಭದ್ರ ಗೋಪುರ ನಿರ್ಮಾಣದ ಗಟ್ಟಿತನಕ್ಕೆ ನಿರ್ಣಾಯಕವಾಗಿರುತ್ತದೆ. ಈ ನಿಟ್ಟಿನಲ್ಲಿ ಧನಾತ್ಮಕ, ಕ್ರಿಯಾಶೀಲ ತರಬೇತಿ, ಮಾರ್ಗದರ್ಶನ ಪ್ರಸ್ತುತ ಎಂದು ತಿಳಿಸಿದರು.
ಚಿತ್ರಕಲಾವಿದ ಜಗಜ್ಜೀವನ್ ಶೆಟ್ಟಿ ಉಡುಪಿ, ತಪಸ್ಯದ ತಾಲೂಕು ಅಧ್ಯಕ್ಷ ಸುಧಾಕರ ಮಾಸ್ತರ್, ಬಾಯಿಕಟ್ಟೆ ಶ್ರೀಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ಸುದರ್ಶನಪಾಣಿ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಪ್ರೊ.ಪಿ.ಎನ್.ಮೂಡಿತ್ತಾಯ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವೆಂಕಟ್ ಭಟ್ ಎಡನೀರು ವಂದಿಸಿದರು. ಸಾಹಿತಿ ಹರೀಶ್ ಸುಲಾಯ ಒಡ್ಡಂಬೆಟ್ಟು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಕವನಗಳ ಓದು, ಚಿತ್ರ ರಚನೆ, ಕಾರ್ಟೂನ್ ರಚನೆಯ ಬಗ್ಗೆ ಪರಿಚಯಾತ್ಮಕ ತರಬೇತಿ ನಡೆಯಿತು. ಜೊತೆಗೆ ಸ್ವರಚಿತ ಕವನ ವಾಚನದ ಕವಿಗೋಷ್ಠಿ ನಡೆಯಿತು. ಅಕ್ಷತಾರಾಜ್ ಪೆರ್ಲ, ರಾಜಶ್ರೀ ಟಿ.ರೈ ಪೆರ್ಲ, ಗಣೇಶ್ ಪ್ರಸಾದ್ ನಾಯಕ್ ಮಂಜೇಶ್ವರ, ವೈ.ಸತ್ಯನಾರಾಯಣ, ಗಣೇಶ್ ಪೈ ಬದಿಯಡ್ಕ, ನಿರ್ಮಲಾ ಸೇಸಪ್ಪ ಬಜಕ್ಕೂಡ್ಲು, ಪ್ರಭಾವತಿ ಕೆದಿಲಾಯ ಪುಂಡೂರು, ಸುಭಾಶ್ ಪೆರ್ಲ, ಶ್ರೀಪತಿ ಮಾಸ್ತರ್ ಪದ್ಯಾಣ, ಜೋನ್ ಡಿ.ಸೋಜ, ರಾಮ ಬಾಯಿಕಟ್ಟೆ ಮೊದಲಾದವರು ಕವನಗಳನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ಕಾರ್ಟೂನ್ ಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
