HEALTH TIPS

ಪ್ರಾಸಗಳ ತ್ರಾಸಗಳಿಗೆ ವಿರಾಮ ನೀಡಿ ಹೊಸ ಭಾಷ್ಯ ಬರೆದವರು ಗೋವಿಂದ ಪೈ-ಪ್ರೊ.ಎ.ವಿ.ನಾವಡ -ಗೋವಿಂದ ಪೈಗಳ 137ನೇ ಜನ್ಮ ದಿನಾಚರಣೆಯಲ್ಲಿ ಉಪನ್ಯಾಸ

ಮಂಜೇಶ್ವರ: ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಒಂದೊಂದು ಕೃತಿಗಳೂ ಅಧ್ಯಯನ ಯೋಗ್ಯವಾಗಿದ್ದು, ಆದರೆ ಸಾಕಷ್ಟು ಅಧ್ಯಯನ ಈವರೆಗೆ ನಡೆದಿಲ್ಲ. ವಿದ್ವತ್ ಮತ್ತು ಸಾಹಿತ್ಯ ಶ್ರೀಮಂತಿಕೆಯಲ್ಲಿ ಗೋವಿಂದ ಪೈಗಳನ್ನು ಮೀರಿಸುವ ಮತ್ತೊಬ್ಬ ವ್ಯಕ್ತಿ ರಾಷ್ಟ್ರದಲ್ಲೇ ಇಲ್ಲ ಎಂದು ಹಂಪಿ ಕನ್ನಡ ವಿವಿಯ ನಿವೃತ್ತ ಕನ್ನಡ ಮುಖ್ಯಸ್ಥ ಪ್ರೊ.ಎ.ವಿ.ನಾವಡ ಅವರು ತಿಳಿಸಿದ್ದಾರೆ. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಸ್ಮಾರಕ ಗಿಳಿವಿಂಡು ಆವರಣದಲ್ಲಿ ಶನಿವಾರ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ ನೂರ ಮೂವತ್ತ ಏಳನೆಯ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಗೋವಿಂದ ಪೈಯವರ ವ್ಯಕ್ತಿತ್ವ ಮತ್ತು ಮನೋಭಾವ ಎಂಬ ವಿಷಯದಲ್ಲಿ ವಿಶೇಷೋಪನ್ಯಾಸಗೈದು ಮಾತನಾಡಿದರು. ಖಗೋಳ ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಜ್ಞಾನ ಸಂಪನ್ನರಾದ ಗೋವಿಂದ ಪೈಗಳು ಕಾಲನಿರ್ಣಯದ ವಿಶೇಷ ಅರಿವಿನಿಂದ ದ ನೂರಾರು ಸಾಹಿತ್ಯ ರಚನೆಗಳು ಇಂದಿಗೂ ಸದಾ ಹಸಿರಾಗಿ ನಮ್ಮಿದಿರು ರೋಮಾಂಚನಗೊಳಿಸುತ್ತದೆ. ಮಂಜೇಶ್ವರ ಪ್ರದೇಶಕ್ಕೆ ಅಂದೊಂದು ಕಾಲದಲ್ಲಿ ಆಗಮಿಸುತ್ತಿದ್ದ ನೂರಾರು ಅಭಿಮಾನಿಗಳು ಎರಡು ಸಾಗರಗಳನ್ನು ನೋಡಿ ಪುಳಕಿತರಾಗುತ್ತಿದ್ದರು. ಒಂದೆಡೆ ಭೋರ್ಗರೆಯುವ ಅರಬ್ಬೀ ಸಮುದ್ರ ಹಾಗೂ ಸಾಗರದಷ್ಟೇ ಜ್ಞಾನ ಕಡಲಾದ ಗೋವಿಂದ ಪೈಗಳು ಕನ್ನಡ ಸಾರಸ್ವತ ಲೋಕದ ಬೆಳಗುವ ನಕ್ಷತ್ರವಾಗಿದ್ದರು ಎಂದು ಅವರು ತಿಳಿಸಿದರು. ಕನ್ನಡ ಸಾಹಿತ್ಯ ರಚನೆಗಳ ಪ್ರಾಸಗಳನ್ನು ಬಿಟ್ಟು ಹೊಸತನದ ಕಾವ್ಯ ಸೃಷ್ಟಿಗೆ ತೀವ್ರ ವಿರೋಧಗಳ ನಡುವೆಯೂ ಹೊಸ ಭಾಷ್ಯ ಬರೆದ ಗೋವಿಂದ ಪೈಗಳ ಸಮಗ್ರ ಸಾಹಿತ್ಯ, ಸಂಶೋಧನೆಗಳ ಹಸ್ತಪ್ರತಿಗಳ ಪ್ರತಿಗಳನ್ನು ಸಂರಕ್ಷಿಸುವಲ್ಲಿ ಸ್ಮಾರಕ ಕೇಂದ್ರ ಗಿಳಿವಿಂಡಿನಲ್ಲಿ ಅಗತ್ಯ ಕ್ರಮಗಳಿಗೆ ಪ್ರಯತ್ನಿಸಬೇಕು ಎಂದು ಅವರು ತಿಳಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಮೂಡಬಿದ್ರೆ ಕಾಲೇಜಿನ ಉಪನ್ಯಾಸಕ, ಲೇಖಕ, ವಿಮರ್ಶಕ ಟಿ.ಎನ್.ಎ.ಖಂಡಿಗೆ ಅವರು ಈ ಸಂದರ್ಭ ಗೋವಿಂದ ಪೈಗಳ ಒಂದು ಕವಿತೆಯಾಸ್ವಾದನೆ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿ, ಜಲಶೋಧದ ಸೂಕ್ಷ್ಮತೆಯಂತೆ ಮಾನವೀಯ ಮೌಲ್ಯಗಳ ಶೋಧನೆ ಗೋವಿಂದ ಪೈಗಳ ಬರವಣಿಗೆಯ ಲಕ್ಷಣವಾಗಿ ಸಾರ್ವಕಾಲಿಕ ಮೌಲ್ಯಗಳಿಂದ ಕೂಡಿದೆ ಎಂದು ತಿಳಿಸಿದರು. ಮುಕ್ತತೆ ಮತ್ತು ಮುಗ್ದತೆಯ ಕಾವ್ಯ ಲಕ್ಷಣದಂತೆ ರಾಷ್ಟ್ರದ ಸ್ವಾತಂತ್ಯ್ರಾನಂತರದ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲಿದ ಪೈಯವರ ರಾಹುವನು ತೊಲಗಿಸಿದೆ..ಕೇತುವನು ತಂದೆ ಕವಿತೆಯನ್ನು ಉಲ್ಲೇಖಿಸಿದ ಅವರು ಈ ಕವಿತೆ ದೇಶದ ಅಂತರಂಗವನ್ನು ಶೋಧಿಸುವಲ್ಲಿ ಅಚ್ಚರಿಮೂಡಿಸಿದೆ ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವೈದ್ಯ, ಸಾಹಿತಿ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಸದಸ್ಯ ಡಾ.ರಮಾನಂದ ಬನಾರಿ ಅವರು ಮಾತನಾಡಿ, ಸಾರ್ವಕಾಲಿಕತೆ ಮತ್ತು ತಾತ್ಕಾಲಿಕತೆಯ ಮಧ್ಯೆ ಸಮನ್ವಯ ಸಾಧಿಸಿದ ಭೀಮ ವ್ಯಕ್ತಿತ್ವದ ಗೋವಿಂದ ಪೈಗಳು ವಿಶ್ವ ಕವಿತ್ವದ ಮಹಾ ಕವಿ ತಿಲಕರಾಗಿದ್ದರು ಎಂದು ಬಣ್ಣಿಸಿದರು. ಪೈಗಳ ಸಾಹಿತ್ಯ, ಸಂಶೋಧನೆಗಳ ಸಮಗ್ರ ಅವಲೋಕನ, ಪ್ರಚುರಪಡಿಸುವಿಕೆ ಇಂದಿನ ಸಂಕೀರ್ಣ ಸಮಾಜ ವ್ಯವಸ್ಥೆಗೆ ಅಗತದಯವಿದೆ. ಈ ನಿಟ್ಟಿನಲ್ಲಿ ಟ್ರಸ್ಟ್ ನೇತೃತ್ವದಲ್ಲಿ ಕವಿ-ಕಾವ್ಯ ಸಾಲುಗಳ ಜಾಗೃತಿಗೆ ಪ್ರಯತ್ನಿಸಲು ಉದ್ದೇಶಿಸಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಕಾಸರಗೋಡಿನ ಗಾನ ಮಂಜೂಷ ಬಳಗದ ಜಯಶ್ರೀ ಶ್ರೀಕೃಷ್ಣಯ್ಯ ಅನಂತಪುರ, ಜ್ಯೋಸ್ನ್ಸಾ ಎಂ ಕಡಂದೇಲು, ರಮ್ಯಾ ಅಂಬಕಾನ, ಶ್ರದ್ದಾ ನಾಯರ್ಪಳ್ಳ, ಪ್ರಭಾವತಿ ಕೆದಿಲಾಯ, ದಿವ್ಯಶ್ರೀ ಪೆರಡಾಲ ಅವರಿಂದ ಕಾವ್ಯ ಗಾನ ಯಾನ ನಡೆಯಿತು.ಗೋವಿಂದ ಪೈಗಳ ಪೀಳಿಗೆಯವರಾದ ಮಣೇಲ್ ವಾಮನ ನಾಯಕ್ ಹಾಗೂ ಮಿಜಾರು ಸುರೇಶ್ ಪೈ ಅವರು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡಿಗೆ ಉದಾರವಾಗಿ ಕೊಡಮಾಡಿದ ಧ್ವನಿವರ್ಧಕ ವ್ಯವಸ್ಥೆಯನ್ನು ಅವರು ಈ ಸಂದರ್ಭ ಹಸ್ತಾಂತರಿಸಿದರು. ಸ್ಮಾರಕ ಗಿಳಿವಿಂಡಿನ ಟ್ರಸ್ಟಿ ಜಯಾನಂದ ಕೆ.ಆರ್. ಉಪಸ್ಥಿತರಿದ್ದರು. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡಿನ ಆಡಳಿತಾಧಿಕಾರಿ ಡಾ.ಕೆ.ಕಮಲಾಕ್ಷ ಉಪಸ್ಥಿತರಿದ್ದರು. ಕವಿಗಳಾದ ಶ್ರೀಕೃಷ್ಣಯ್ಯ ಅನಂತಪುರ, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಸುಭಾಶ್ಚಂದ್ರ ಕಣ್ವತೀರ್ಥ ಸ್ವರಚಿತ ಕವನಗಳನ್ನು ವಾಚಿಸಿದರು. ಸ್ಮಾರಕ ಟ್ರಸ್ಟ್ ಸದಸ್ಯ ಸುಭಾಶ್ಚಂದ್ರ ಕಣ್ವತೀರ್ಥ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗಗತಿಸಿ, ವಂದಿಸಿದರು. ಹರೀಶ್ ಸುಲಾಯ ಒಡ್ಡಂಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries