ಬದಿಯಡ್ಕ: ಪರಿಸರ, ಜಲ ಸಂರಕ್ಷಣೆಯ ಭಾಗವಾಗಿ ಪುನರುಜ್ಜೀನಗೊಳ್ಳುತ್ತಿರುವ ಪ್ರಾಚೀನವಾದ ನೀರ್ಚಾಲು ಮದಕಕ್ಕೆ ಗುರುವಾರ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಸ್ಥಳೀಯ ನಿವಾಸಿಗಳು ಜಿಲ್ಲಾಧಿಕಾರಿಯವರೊಂದಿಗೆ ಮಾತುಕತೆ ನಡೆಸಿ ಮದಕ ಪುನರ್ ನಿರ್ಮಾಣದ ಹೆಸರಲ್ಲಿ ಸ್ಥಳೀಯ ಕೃಷಿ ಭೂಮಿ, ವಸತಿ ಪ್ರದೇಶಗಳಿಗೆ ಹಾನಿಯಾಗದಂತೆ ಕಾಮಗಾರಿ ನಿರ್ವಹಿಸಲು ಮನವಿ ಮಾಡಿದರು. ಪ್ರಸ್ತುತ ಭಾರೀ ಮಳೆಯ ಮಧ್ಯೆ ಕಾಮಗಾರಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು,ಮದಕದ ಒಂದು ಪಾಶ್ರ್ವದಲ್ಲಿ ತುಂಬಿಕೊಂಡಿರುವ 6 ಫೀಟ್ ಎತ್ತರದಷ್ಟಿರುವ ನೀರನ್ನು ಹೊರಹಾಕಲು ಮಂಗಳವಾರ ಪ್ರಯತ್ನಿಸಿದ ಕಾರ್ಮಿಕರನ್ನು ಸ್ಥಳೀಯರು ತಡೆದಿದ್ದರು. ಒಂದು ವೇಳೆ ಪ್ರ್ಯೇಕ ನಾಲೆಯ ಮೂಲಕ ಮದಕದ ನೀರನ್ನು ಹೊರಬಿಟ್ಟಿದ್ದರೆ ಪರಿಸರದ ಎಕ್ರೆಗಟ್ಟಲೆ ಗದ್ದೆಗಳು, ಅಡಿಕೆ ತೋಟ ಹಾಗೂ ಹತ್ತರಿಂದಲೂ ಹೆಚ್ಚಿನ ಮನೆಗಳು ಸಂಪೂರ್ಣ ಜಲಾವೃತಗೊಳ್ಳುವ ಭೀತಿ ಇತ್ತು. ಆದರೆ ಸ್ಥಳೀಯ ಮುಖಂಡರ ಸಕಾಲಿಕ ಕಾರ್ಯಾಚರಣೆಯಿಂದ ನೀರನ್ನು ಹರಬಿಡುವ ದುಸ್ಸಾಹಸದಿಂದ ನಿರ್ಮಾಣ ಕಾರ್ಯ ಕ್ಥಗೆತ್ತಿಕೊಂಡಿರುವ ಅಧಿಕಾರಿಗಳು ತಮ್ಮ ನಿಲುವಿಂದ ಹಿಂದೆ ಸರಿದಿದ್ದರು.
ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡಲಾಯಿತು.ಈ ಸಂದರ್ಭ ಸ್ಥಳೀಯ ಜನರೊಂದಿಗೆ ಪ್ರತಿಕ್ರಿಯಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಜನರಿಗೆ ಸಂಕಷ್ಟ ತಂದೊಡ್ಡುವ ಯಾವುದೇ ಯೋಜನೆಗಳನ್ನು ಅನುಷ್ಠಾನಗೊಳಿಸುವುದಿಲ್ಲ. ಆದರೆ ಕೈಗೆತ್ತಿಕೊಂಡಿರುವ ಬಹುನಿರೀಕ್ಷಿತ ಯೋಜನೆಯಿಂದ ಹಿಂದೆ ಸರಿಯುವ ಯಾವ ಇರಾದೆಯೂ ಸರ್ಕಾರಕ್ಕಿಲ್ಲ. ಜನರು ಸರ್ಕಾರದೊಂದಿಗೆ ಸ್ಪಂಧಿಸಬೇಕು ಎಂದು ತಿಳಿಸಿದರು.
ಈ ಸಂದರ್ಭ ಮುಖಂಡರಾದ ಆನಂದ ಕೆ.ಮವ್ವಾರು, ಗ್ರಾ.ಪಂ.ಸದಸ್ಯೆ ಪ್ರೇಮಾ ಕೆ., ನೀರ್ಚಾಲು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಯದೇವ ಖಂಡಿಗೆ,ಗಣೇಶ ಕೃಷ್ಣ ಅಳಕ್ಕೆ, ಸಹಾಯಕ ಜಿಲ್ಲಾ ಅಭಿವೃದ್ದಿ ಅಧಿಕಾರಿ ಬೆವಿನ್ ಜೋನ್ ವರ್ಗೀಸ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
ಏನಿದು ಯೋಜನೆ:
ನೂರಾರು ವರ್ಷಗಳ ಇತಿಹಾಸವುಳ್ಳ ನೀರ್ಚಾಲು ಮದಕವನ್ನು ಅಭಿವೃದ್ಧಿಪಡಿಸಲು ಕೇಂದ್ರ ಜಲಶಕ್ತಿ ಅಭಿಯಾನ, ವ್ಯಾಪಕ ಯೋಜನೆಗಳೊಂದಿಗೆ ಕ್ರಮಗಳು ಜಾರಿಗೊಳ್ಳುತ್ತಿದೆ. ಈ ಪ್ರದೇಶದ ಅಂತರ್ಜಲ ಸಮೃದ್ಧಿ, ಕುಡಿಯುವ ನೀರು, ಕೃಷಿಗೆ ನೀರುಣಿಸುವ ಬೃಹತ್ ಜಲ ಮರುಪೂರಣ ಯೋಜನೆ ಇದಾಗಿದೆ.
2011ರಲ್ಲಿ ಆರಂಭಿಸಿ ಆರ್‍ಐಡಿಎಫ್ ಸಹಸ್ರ ಸರೋವರ ಯೋಜನೆ ಬಳಿಕ ಜಾರಿಗೊಳ್ಳದೆ ಸ್ತಬ್ದವಾಗಿತ್ತು. ಆದರೆ ಇದೀಗ ಕೇಂದ್ರ ಜಲ ಶಕ್ತಿ ಅಭಿಯಾನ ಸಹಿತ ಸರ್ಕಾರದ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಮರುಜೀವ ನೀಡಲು ನಿರ್ಧರಿಸಲಾಗಿದೆ. ನೀರ್ಚಾಲು ಮದಕ ಪೂರ್ವ ಹಾಗೂ ದಕ್ಷಿಣ ಭಾಗದಲ್ಲಿ ನೀರ್ಚಾಲು, ಓಣಿಯಡ್ಕ, ಪುದುಕೋಳಿ ಭತ್ತದ ಕೃಷಿ ಬಯಲುಗಳಿದ್ದು ದಶಕಗಳ ಹಿಂದೆ ಭಾರೀ ಪ್ರಮಾಣದಲ್ಲಿ ಭತ್ತದ ಬೆಳೆ ನಡೆಯುತ್ತಿತ್ತು. ಆದರೆ ನೀರಿನ ಅಭಾವ ಮತ್ತು ಇದರ ಸಮಸ್ಯೆಗಳಿಂದ ಭತ್ತದ ಬೇಸಾಯ ಮೂಲೆಗುಂಪಾಗಿದೆ. ಈ ಮದಕವನ್ನು ಅಭಿವೃದ್ಧಿಪಡಿಸಿದಲ್ಲಿ ಕುಡಿಯಲು ಕೃಷಿಗೆ ಅಗತ್ಯಕ್ಕೆ ನೀರಿನ ಸಮಸ್ಯೆ ಉಂಟಾಗದೆಂದು ನಿರೀಕ್ಷಿಸಲಾಗಿದೆ.



