ಬದಿಯಡ್ಕ: ಕಳೆದ ನಾಲ್ಕು ದಿನಗಳಿಂದ ಬದಿಯಡ್ಕದ ಸಮೀಪದ ಕರಿಂಬಿಲದಲ್ಲಿ ನಾಗರಿಕರಿಗೆ ಭೀತಿಯನ್ನು ತಂದೊಡ್ಡಿದ ರಸ್ತೆ ಬದಿಯ ಗುಡ್ಡಕುಸಿತಗೊಂಡ ಸ್ಥಳಕ್ಕೆ ಗುರುವಾರ ಬೆಳಿಗ್ಗೆ ಕಾಸರಗೋಡು ಜಿಲ್ಲಾಧಿಕಾರಿ ಕೆ.ಸಜಿತ್ ಬಾಬು ಭೇಟಿ ನೀಡಿ ಮಾಹಿತಿಯನ್ನು ಕಲೆಹಾಕಿ ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ನೀಡಿದರು.
ವಿವಿಧ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯಕ್ರಮಕೈಗೊಳ್ಳಲು ಆದೇಶವನ್ನು ನೀಡಿದರು. ಈ ವೇಳೆ ಮಾಧ್ಯಮದವರೊಂದಿಗೆ ಅವರು ಮಾತನಾಡಿ ರಸ್ತೆ ಅಗಲಗೊಳಿಸುವ ವೇಳೆ ಉಂಟಾದ ಲೋಪವು ಇಲ್ಲಿ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಪ್ರಸ್ತುತ ಸ್ಥಳವು ತುಂಬಾ ಅಪಾಯಕಾರಿಯಾಗಿ ಗೋಚರಿಸುತ್ತಿದ್ದು, ಗುತ್ತಿಗೆದಾರರು, ಇಂಜಿನಿಯರ್‍ಗಳ ಜೊತೆ ಈ ಕುರಿತು ಚರ್ಚಿಸಲಾಗುವುದು. ನಾಗರಿಕರ ಭೀತಿಯನ್ನು ದೂರ ಮಾಡಿ ರಸ್ತೆಯನ್ನು ಸಂಚಾರಯೋಗ್ಯವನ್ನಾಗಿಸಲು ಸೂಕ್ತ ಕ್ರಮಕೈಗಳ್ಳಲಾಗುವುದು ಎಂದರು.
ಇದೇ ವೇಳೆ ನಾಗರಿಕರು ಜಿಲ್ಲಾಧಿಕಾರಿಯವರಲ್ಲಿ ಮಾತನಾಡಿ, ಲೋಕೋಪಯೋಗಿ ಇಲಾಖೆಯ ಯಾವುದೇ ಅಧಿಕಾರಿಗಳು ಇಲ್ಲಿ ರಸ್ತೆ ಅಗಲಗೊಳಿಸುವ ಸಂದರ್ಭದಲ್ಲಿ ಅಗತ್ಯ ಮೇಲ್ನೋಟ ವಹಿಸದಿರುವುದರಿಂದ ಇಂತಹ ಬಹುದೊಡ್ಡ ಅಪಾಯ ಬಂದೊದಗಿದೆ. ಪಳ್ಳತ್ತಡ್ಕ, ಉಕ್ಕಿನಡ್ಕದಲ್ಲಿಯೂ ಇದೇ ರೀತಿ ರಸ್ತೆ ಬದಿ ಗುಡ್ಡೆ ಪ್ರದೇಶವು ಅಪಾಯಕಾರಿಯಾಗಿವೆ. ಇದರ ಕುರಿತಾಗಿಯೂ ಪರಿಗಣಿಸಬೇಕೆಂದು ಅವರಲ್ಲಿ ತಿಳಿಸಿದರು.
ಶಾಲಾಮಕ್ಕಳಿಗೆ ಶಾಲೆಗಳಿಗೆ ತಲುಪಲು ಉಂಟಾಗುವ ಕಷ್ಟಗಳ ಕುರಿತಾಗಿ ಬದಿಯಡ್ಕ ನವಜೀವನ ಪ್ರೌಢಶಾಲೆಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿಯನ್ನು ನೀಡಲಾಯಿತು. ಸ್ಥಳೀಯ ನಿವಾಸಿ ಆಂಟನಿ ಅವರು ತಮ್ಮ ಕಷ್ಟದ ಕುರಿತಾಗಿ ಮನವಿಯನ್ನು ನೀಡಿದರು.
ಸತತ 3ನೇ ದಿನವೂ ರಸ್ತೆ ಸಂಚಾರ ಬಂದ್ :
ಚೆರ್ಕಳ ಕಲ್ಲಡ್ಕ ಅಂತಾರಾಜ್ಯ ಸಂಪರ್ಕ ರಸ್ತೆಯ ಕರಿಂಬಿಲ ಪ್ರದೇಶದಲ್ಲಿ ಸತತ ಮೂರನೇ ದಿನವೂ ರಸ್ತೆ ಸಂಚಾರಕ್ಕೆ ತಡೆಯೊಡ್ಡಲಾಗಿತ್ತು. ಗುಡ್ಡ ಕುಸಿಯು ಭೀತಿಯಿಂದಾಗಿ ಮಂಗಳವಾರ ಮಧ್ಯಾಹ್ನದಿಂದಲೇ ವಾಹನ ಸಂಚಾರ ನಿಲ್ಲಿಸಲಾಗಿತ್ತು. ಕೆಡೆಂಜಿ ಹಾಗೂ ಕಾಡಮನೆಯಿಂದ ವಾಹನಗಳು ಸುತ್ತು ಬಳಸಿ ಸಂಚರಿಸುತ್ತಿದೆ. ಅನ್ಯದಾರಿಯನ್ನು ಬಳಸಿ ಬಸ್ ಸಂಚಾರ ನಡೆಸಿ ನಷ್ಟವುಂಟಾಗುತ್ತದೆ ಎಂದು ಖಾಸಗಿ ಬಸ್‍ಗಳು ತಮ್ಮ ಸಂಚಾರವನ್ನೇ ನಿಲ್ಲಿಸಿವೆ. ಸಾರ್ವಜನಿಕರು, ವಿದ್ಯಾರ್ಥಿಗಳು ನಿರ್ದಿಷ್ಟ ಸ್ಥಳಕ್ಕೆ ತಲುಪಲು ಹರಸಾಹಸಪಡುವಂತಾಗಿದೆ.
ಅಭಿಮತ:
ಜಿಲ್ಲಾ ಪಂಚಾಯತ್ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತರ ಸಮಯೋಚಿತ ಹಸ್ತಕ್ಷೇಪದಿಂದಾಗಿ ಬಿದ್ದ, ಬೀಳುತ್ತಿರುವ ಮರಗಳ ತೆರವು ಪರಕ್ರಿಯೆ ಆರಂಭವಾಗಿದೆ. ಸತತ ಮೂರು ದಿನಗಳ ಕಾಲ ನಮ್ಮೊಂದಿಗಿದ್ದಾರೆ. ಎಲ್ಲ ಜನಪ್ರತಿನಿಧಿಗಳೂ ಇದೇ ರೀತಿ ಒಂದಾಗಿ ಕಾರ್ಯಪ್ರವೃತ್ತರಾಗಿದ್ದಲ್ಲಿ ಈ ಸಮಸ್ಯೆಯನ್ನು ಪರಿಹರಿಸಬಹುದಿತ್ತು. ರಸ್ತೆಯ ಅಗಲಗೊಳಿಸುವ ವೇಳೆ ಇದು ಅವೈಜ್ಞಾನಿಕವೆಂದೂ, ಗುಡ್ಡಜರಿದು ಬೀಳಬಹುದೆಂದೂ ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಲಾಗಿತ್ತು. ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಎಚ್ಚೆತ್ತುಕೊಳ್ಳದ ಕಾರಣ ಜನತೆ ಸಮಸ್ಯೆಯನ್ನು ಎದುರಿಸುವಂತಾಯಿತು.
- ಬಿ.ಎಂ.ಹ್ಯಾರಿಸ್ ಬದಿಯಡ್ಕ, ಸಾಮಾಜಿಕ ಕಾರ್ಯಕರ್ತ


