ಮಂಜೇಶ್ವರ: ಬಡಾಜೆ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಹಾಲಿ ಅಧ್ಯಕ್ಷ ಕಬೀರ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಹಿರಿಯ ಶಿಕ್ಷಕಿ ಶೈಲಶ್ರೀ ವರದಿ ಮಂಡಿಸಿದರು. ಗ್ರಾ.ಪಂ.ಸದಸ್ಯೆ ಬೇಬಿಲತಾ ಯಾದವ್ ಮಹಾಸಭೆ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ ಸಾರ್ವಜನಿಕ ವಿದ್ಯಾಲಯಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕತೆ ಹೆಚ್ಚಿರುತ್ತದೆ. ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವ ಜೊತೆಗೆ ಕಲಿಕೆಗೂ ಮಹತ್ವ ನೀಡಬೇಕು. ಶಿಕ್ಷಕರೊಂದಿಗೆ ಹೆತ್ತವರ ಪಾಲ್ಗೊಳ್ಳುವಿಕೆಯೂ ಮಹತ್ವದ್ದು ಎಂದು ತಿಳಿಸಿದರು.
ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯೂಸುಫ್ ಜಮಾಲ್, ಉಪಾಧ್ಯಕ್ಷ ಖಲೀಲ್, ಇಸ್ಮಾಯಿಲ್, ಶಿಕ್ಷಕಿಯರಾದ ಸಬೀರಾ, ಮಮತಾ, ಸಾಯಿಝ, ಸಫ್ರೀನಾ, ಸಿಬ್ಬಂದಿಗಳಾದ ಹೇಮಲತಾ, ರಿಮೋ ಮೊದಲಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ನೂತನ ರಕ್ಷಕ ಶಿಕ್ಷಕ ಸಮಿತಿ ರೂಪಿಸಲಾಯಿತು. ಅಧ್ಯಕ್ಷರಾಗಿ ಅಹಮ್ಮದ್ ಕಬೀರ್ ಹಾಗೂ ಮಾತೃಮಂಡಳಿ ಅಧ್ಯಕ್ಷೆಯಾಗಿ ಮರಿಯಮ್ಮ ಅವರನ್ನು ಸರ್ವಾನುಮತದಿಂದ ಆರಿಸಲಾಯಿತು. ಮುಖ್ಯೋಪಾಧ್ಯಾಯ ಭಾಸ್ಕರ ಶೆಟ್ಟಿಗಾರ್ ಉಪಸ್ಥಿತರಿದ್ದು ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಯ ಸಮಗ್ರ ಚಟುವಟಿಕೆಗಳ ಮಾಹಿತಿ ನೀಡಿ ಸ್ವಾಗತಿಸಿದರು. ಹರ್ಷಿತಾ ಟೀಚರ್ ವಂದಿಸಿದರು. ಶಿಕ್ಷಕ ಅಶೋಕ ಕೊಡ್ಲಮೊಗರು ಕಾರ್ಯಕ್ರಮ ನಿರೂಪಿಸಿದರು.


