ಕಾಸರಗೋಡು: ಬಿರುಸಿನ ಗಾಳಿಮಳೆ ತರುತ್ತಿರುವ ನಾಶನಷ್ಟಗಳನ್ನು ಜಿಲ್ಲೆ ಒಗ್ಗಟ್ಟಿನಿಂದ ಎದುರಿಸುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಜಿಲ್ಲಾ ದುರಂತ ನಿವಾರಣೆ ಪ್ರಾಧಿಕಾರ, ಪೊಲೀಸ್, ಕಂದಾಯ,ಕರಾವಳಿ ಪೊಲೀಸ್, ಅಗ್ನಿಶಾಮಕ, ಮೀನುಗಾರಿಕೆ ಇಲಾಖೆಗಳು ಯಾವುದೇ ಪರಿಸ್ಥಿತಿಯನ್ನೂ ಎದುರಿಸಲು ಸಜ್ಜಾಗಿವೆ ಎಂದವರು ನುಡಿದರು.
ಇತ್ತೀಚೆಗಿನ ವರ್ಷಗಳಲ್ಲಿ ಅತ್ಯಧಿಕ ಪ್ರಮಣದಲ್ಲಿ ಈ ಬಾರಿ ಬಿರುಸಿನ ಗಾಳಿಮಳೆ ಸುರಿಯುತ್ತಿದೆ. ತಗ್ಗುಪ್ರದೇಶಗಳು ಜಲಾವೃತವಾಗಿರುವ ಹಿನ್ನೆಲೆಯಲ್ಲಿ ಇಲ್ಲಿನಜನತೆಯನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಜಿಲ್ಲಾ ದುರಂತ ನಿವಾರಣೆ ಪ್ರಾಧಿಕಾರ ಸಾರ್ವಜನಿಕರಿಗೆ ಈ ಸಂಬಂಧ ಮುನ್ಸೂಚನೆಗಳನ್ನು ನೀಡಿದ, ಸೂಕ್ತ ಮುನ್ನೆಚ್ಚರಿಕೆಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಬಹುತೇಕ ನಾಶನಷ್ಟಗಳನ್ನು ಪರಿಹರಿಸಲು ಸಾಧ್ಯವಾಗಿದೆ.
ಹೀಗಿದ್ದೂ ಪ್ರಬಲ ಗಾಳಿಮಳೆ ಜಿಲ್ಲೆ ಅನುಭವಿಸುತ್ತಿರುವ ನಾಶನಷ್ಟ ಸಣ್ಣದಲ್ಲ. ವ್ಯಾಪಕ ಕೃಷಿನಾಶವೂ ಸಂಭವಿಸಿದೆ. 4 ಮನೆಗಳು ಪೂರ್ಣ ಪ್ರಮಾಣದಲ್ಲಿ, 136 ಮನೆಗಳೂ ಭಾಗಶಃ ಹಾನಿಗೀಡಾಗಿವೆ. 1.54 ಕೋಟಿ ರೂ.ನ ಕೃಷಿಹಾನಿ ಅಂದಾಜಿಸಲಾಗಿದೆ. ಕಳೆದ 24 ತಾಸುಗಳಲ್ಲಿ ಮಾತ್ರ 48,01,400 ರೂ.ನ ಕೃಷಿಹಾನಿ ನಡೆದಿದೆ. ಈ ವರೆಗೆ 204,28705 ಹೆಕ್ಟೇರ್ ಕೃಷಿ ಜಾಗ ಹಾನಿಗೀಡಾಗಿದೆ. ಈ ಕೃಷಿಕರಿಗೆ ಅಗತ್ಯದ ಸಹಾಯ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ನುಡಿದರು.
ಜಿಲ್ಲಾ ಕೇಂದ್ರದಲ್ಲು, ತಾಲೂಕು ಕೇಂದ್ರಗಳಲ್ಲೂ 24 ತಾಸೂ ಚಟುವಟಿಕೆನಡೆಸುವ ನಿಯಂತ್ರಣ ಕೊಠಡಿಗಳಿವೆ. ಬಿರುಸಿನ ಮಳೆಯಿಂದ ಸಂಭವಿಸುವ ನಾಶನಷ್ಟಗಳನ್ನು ಸಾರ್ವಜನಿಕರು ಈ ನಿಯಂತ್ರಣ ಕೊಠಡಿಗಳಿಗೆ ಕರೆಮಾಡಿ ತಿಳಿಸಬಹುದು. ಒಂದೊಮ್ಮೆ ಇಲ್ಲಿ ಪರಿಹಾರ ದೊರೆಯದಿದ್ದಲ್ಲಿ ಜಿಲ್ಲಾಧಿಕಾರಿ ಅವರಿಗೆ ನೇರವಾಗಿ ಕರೆಮಾಡಬಹುದು ಎಂದು ತಿಳಿಸಿರುವರು.
ರಕ್ಷಣೆ ಚಟುವಟಿಕೆಗಳಿಗಾಗಿ ನೀಲೇಶ್ವರ ಅಳಿತ್ತಲದಲ್ಲಿ ರೆಸ್ಕ್ಯೂ ಬೋಟ್, ಕಾಸರಗೋಡು ಕೀಯೂರು ನಲ್ಲಿ ದೊಡ್ಡ ದೋಣಿ ಸಜ್ಜುಗೊಳಿಸಲಾಗಿದೆ. ತರಬೇತಿ ಲಭಿಸಿದ ರಕ್ಷಣಾಭಟರು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗದ್ದಾರೆ. ಕರಾವಳಿ ಪೊಲೀಸರು ಜಾಗರೂಕತೆ ಪಾಲಿಸುತ್ತಿದ್ದಾರೆ. ಕರಾವಳಿಯಲ್ಲಿ ದುಸ್ಥಿತಿ ಅನುಭವಿಸುತ್ತಿರುವ ಬೆಸ್ತರಿಗೆ ಉಚಿತ ಪಡಿತರ ಸಾಮಾಗ್ರಿ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು. ಮಳೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿಕರ್ಗಲ್ಲಕೋರೆ ಗಳ ಚಟುವಟಿಕೆಗಳನ್ನು ನಿಲುಗಡೆ ಮಾಡಲಾಗಿದೆ. ನೀರುತುಂಬಿರುವ ಕರ್ಗಲ್ಲಕೋರೆಗಳ ಸುತ್ತಲೂ ಸುರಕ್ಷೆ ಬೇಲಿ ನಿರ್ಮಿಸಲು ಆದೇಶ ನೀಡಲಾಗಿದೆ. ವಿದ್ಯಾಲಯಗಳ ಬಳಿಯಿರುವ ಕೋರೆಗಳ ಬಗ್ಗೆ ವಿಶೇಷ ಗಮನ ಹರಿಸುವಂತೆ ಶಿಕ್ಷಣ ಇಲಾಖೆಗೆ ಆದೇಶ ನೀಡಲಾಗಿದೆ. ಕಡಲ್ಕೊರತೆ ಎದುರಿಸುವ ನಿಟ್ಟಿನಲ್ಲಿ ಜಿಯೋ ಬ್ಯಾಗ್ ಗಳನ್ನು, ಮಳಲ ಗೋಣಿಗಳನ್ನು ಬಳಸಲು ನೀರಾವರಿ ಇಲಾಖೆಗೆ ಆದೇಶ ನೀಡಲಾಇದೆ. ನೆರೆ ಹಾವಳಿ ತಲೆದೋರಿರುವ ಪ್ರದೇಶಗಳಲ್ಲಿ ನೀರು ಹರಿದುಹೋಗುವಂತೆ ಸೌಲಭ್ಯ ಏರ್ಪಡಿಸಲು ಹಾರ್ಬರ್ ಇಂಜಿನಿಯರಿಂಗ್ ವಿಭಾಗಕ್ಕೆ ಆದೇಶಿಸಲಾಗಿದೆ. ಮಳೆ ಬಿರುಸುಗೊಂಡಿರುವುದರಿಂದ ಈ ಚಟುವಟಿಕೆಗಳಿಗೆ ತೊಡಕಾಗುತ್ತಿದೆ ಎಂದವರು ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಯ ದೂರವಾಣಿಸಂಖ್ಯೆ: 04994-257700, 9446601700. ತಾಲೂಕು ನಿಯಂತ್ರಣ ಕೊಠಡಿಗಳು: ಕಾಸರಗೋಡು: 04994-2230021, ಮಂಜೇಶ್ವರ: 04998-244044, ಹೊಸದುರ್ಗ: 0467-2294942, 0467-2206222. ವೆಳ್ಳರಿಕುಂಡ್: 067-334043.
ಕೃಷಿನಾಶ ಸಂಭವಿಸಿದಲ್ಲಿ ಕಾಸರಗೋಡು ಪ್ರಧಾನ ಕೃಷಿ ಅಧಿಕಾರಿ ಕಚೇರಿಯಲ್ಲಿ 24 ತಾಸೂ ಚಟುವಟಿಕೆ ನಡೆಸುವ ಹೆಲ್ಪ್ ಡೆಸ್ಕ್ ಗೆ ಕರೆಮಾಡಬಹುದು. ದೂರವಾಣಿ ಸಂಖ್ಯೆ: 04994-255346,9447270166.

