ಪೆರ್ಲ: ಪುಸ್ತಕಗಳ ಓದುವಿಕೆಯು ಮನುಷ್ಯನ ಚಿಂತೆ ದೂರಮಾಡಿ ಚಿಂತನೆಗೆ ಹಚ್ಚುತ್ತದೆ. ಗ್ರಾಮೀಣ ಗ್ರಂಥಾಲಯಗಳು ಊರ ಸಂಪತ್ತು ಎಂದು ಕಜಂಪಾಡಿ ಶಾಲಾ ಶಿಕ್ಷಕಿ, ಸಂಪನ್ಮೂಲ ವ್ಯಕ್ತಿ ಸುರೇಖಾ ಕಾಟುಕುಕ್ಕೆ ನುಡಿದರು.
ನಲ್ಕದ ಭಗತ್ ಸಿಂಗ್ ಸಾರ್ವಜನಿಕ ಗ್ರಂಥಾಲಯ ಏರ್ಪಡಿಸಿದ 'ಈ ಸಂಜೆ ಪುಸ್ತಕ ಪರಿಚಯ 'ಕಾರ್ಯಕ್ರಮದಲ್ಲಿ ಪುಸ್ತಕ ಪರಿಚಯಿಸಿ ಅವರು ಮಾತನಾಡಿದರು.
ಕಮಲಾಕರ್ ಅವರ "ಸಮಯದ ನಿರ್ವಹಣೆ "ಪುಸ್ತಕವನ್ನು ವಿಮರ್ಶಿಸಿದ ಅವರು, ಪ್ರತಿಯೊಬ್ಬರಿಗೂ ಲಭ್ಯವಾಗುವ ದಿನದ ಇಪ್ಪತ್ತನಾಲ್ಕು ಗಂಟೆಗಳನ್ನು ಸಮರ್ಪಕ ಯೋಜನೆಗಳೊಂದಿಗೆ ವ್ಯಯಿಸುವ ಅಗತ್ಯತೆಯನ್ನು ತಮ್ಮ ಅನುಭವದೊಂದಿಗೆ ವಿವರಿಸಿದರು. ಆಧುನಿಕ ಸಂಪರ್ಕ ಮಾಧ್ಯಮ,ಜಾಲತಾಣಗಳ ಬಳಕೆಯಲ್ಲಿ ವಹಿಸಬೇಕಾದ ಎಚ್ಚರವನ್ನು ಅವರು ಈ ಸಂದರ್ಭ ನೆನಪಿಸಿದರು.ಸಮಯದ ಸದುಪಯೋಗದ ವಿವಿಧ ಸೂತ್ರಗಳನ್ನು ಲೇಖಕರು ಬಣ್ಣಿಸಿರುವುದನ್ನು ಗುರುತಿಸಿದರು.
ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ನ ಉದಯ ಸಾರಂಗ್ ಅವರು ಮಾತನಾಡಿ ಪ್ರಸ್ತುತ ಯುಗದಲ್ಲಿ ಯುವಜನಾಂಗದಲ್ಲಿ ನಶಿಸುತ್ತಿರುವ ಮಾನವೀಯ ಸಂಬಂಧಗಳು ಪುನರುಜ್ಜೀವನಗೊಳ್ಳಲು, ಸಮಾಜದ ಎಲ್ಲರನ್ನು ಒಗ್ಗೂಡಲು ಗ್ರಂಥಾಲಯವು ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ತಿಳಿಸಿದರು.
ಶಿಕ್ಷಕ ಶ್ರೀಧರ ಭಟ್ ಬೀಡುಬೈಲ್ ಮಾತನಾಡಿ, ಓದಿನಿಂದ ಜ್ಞಾನ ವೃಧ್ಧಿಗಾಗಿ ದಿನಚರಿಯಲ್ಲಿ ಸಮಯ ಮೀಸಲಿಡಬೇಕೆಂದು ಹೇಳಿಧರು.
ಸುರೇಖಾ ಟೀಚರ್ ಅವರು ಗ್ರಂಥಾಲಯಕ್ಕೆ ತಮ್ಮ ಕೊಡುಗೆಯಾಗಿ ಪುಸ್ತಕಗಳನ್ನು ಗ್ರಂಥಪಾಲಕಿ ರೇಖಾ ಅವರಿಗೆ ಹಸ್ತಾಂತರಿಸಿದರು.ಗ್ರಂಥಾಲಯದ ಅಧ್ಯಕ್ಷ ನಾರಾಯಣ ಗೋಳಿತ್ತಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಂಥಾಲಯದ ಕಾರ್ಯದರ್ಶಿ ಸದಾನಂದ ಬಿರ್ಮೂಲೆ ಸ್ವಾಗತಿಸಿ, ಚಟುವಟಿಕೆಗಳ ವರದಿ ನೀಡಿದರು. ಸದಸ್ಯ ವಸಂತ ವಂದಿಸಿದರು. ವಿನೊದ್, ಶಶಿಧರ,ರಮೇಶ,ಆಸೀಫ್,ಸುಕನ್ಯಾ ಮೊದಲಾದವರು ನೇತೃತ್ವ ನೀಡಿದರು.


