ಮಂಜೇಶ್ವರ: ರಾಗಂ ಜಂಕ್ಷನ್‍ನಿಂದ ಸಿರಾಜುಲ್ ಹುದಾ ತನಕ ನಡೆಯಬೇಕಾದ ರಸ್ತೆ ಅಭಿವೃದ್ಧಿ ಕಾಮಗಾರಿ ತೀವ್ರ ವಿಳಂಬವಾಗಿದ್ದು, ಸ್ಥಳೀಯ ನಿವಾಸಿಗಳು ಮತ್ತು ಸಾರ್ವಜನಿಕರು ಭಾರೀ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಶಾಸಕರ ನಿಧಿಯಿಂದ ಮಂಜೂರಾದ ಸುಮಾರು 97,000 ರೂ. ಅನುದಾನದಡಿ 1300 ಮೀಟರ್ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದರೂ, ಗುತ್ತಿಗೆ ವಹಿಸಿಕೊಂಡವರು ಕರಾರಿನ ಪ್ರಕಾರ ಅಗತ್ಯ ಮುತುವರ್ಜಿ ವಹಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ರಸ್ತೆಯನ್ನು ಅಗೆದು ಹಾಕಿ ಎರಡು ತಿಂಗಳುಗಳು ಕಳೆದಿದ್ದರೂ ಮುಂದಿನ ಹಂತದ ಕಾಮಗಾರಿ ಪ್ರಾರಂಭವಾಗದೇ ಇರುವುದೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 1 ಕಿಲೋ ಮೀಟರ್ ಕಾಂಕ್ರೀಟ್ ರಸ್ತೆ ಹಾಗೂ 300 ಮೀಟರ್ ಡಾಮಾರು ರಸ್ತೆ ನಿರ್ಮಾಣದ ಜೊತೆಗೆ 100 ಮೀಟರ್ ಚರಂಡಿ ವ್ಯವಸ್ಥೆ ಮಾಡುವ ಯೋಜನೆ ಇದ್ದರೂ, ಕಾಮಗಾರಿ ಪ್ರಗತಿ ಶೂನ್ಯಕ್ಕೆ ಸಮೀಪವಾಗಿದೆ.
ಒಂದಲ್ಲೊಂದು ಕಾರಣ ಮುಂದಿಟ್ಟು ಕಾಮಗಾರಿ ವಿಳಂಬಗೊಳಿಸಲಾಗುತ್ತಿದ್ದು, ಇದರಿಂದ ದಿನನಿತ್ಯ ಶಾಲಾ ವಾಹನಗಳು ಸೇರಿದಂತೆ ನೂರಾರು ವಾಹನಗಳು ಸಂಚರಿಸುವ ಈ ಪ್ರಮುಖ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಅಗೆದು ಬಿಟ್ಟಿರುವ ರಸ್ತೆಯಿಂದ ಎದ್ದು ಬರುತ್ತಿರುವ ಧೂಳು ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳಿಗೆ ಭಾರೀ ತೊಂದರೆಯಾಗಿ ಪರಿಣಮಿಸಿದೆ. ಮಕ್ಕಳು, ವೃದ್ಧರು ಹಾಗೂ ರೋಗಿಗಳಿಗೆ ಇದು ಆರೋಗ್ಯ ಸಮಸ್ಯೆಯನ್ನೂ ಉಂಟುಮಾಡುತ್ತಿದೆ.
ತಕ್ಷಣ ಕಾಮಗಾರಿ ಪೂರ್ಣಗೊಳಿಸಬೇಕು, ಗುಣಮಟ್ಟದ ರಸ್ತೆ ನಿರ್ಮಿಸಬೇಕು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದಾರೆ. ವಿಳಂಬ ಮುಂದುವರಿದರೆ ಹೋರಾಟಕ್ಕೆ ಇಳಿಯಬೇಕಾದ ಅನಿವಾರ್ಯತೆ ಎದುರಾಗಬಹುದು ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

.jpg)
