ಬದಿಯಡ್ಕ: ಕಾರು ಮತ್ತು ಸ್ಕೂಟರ್ ಡಿಕ್ಕಿ ಹೊಡೆದು ಯುವಕನೊಬ್ಬ ಮೃತಪಟ್ಟ ದಾರುಣ ಘಟನೆ ಇಂದು ಬೆಳಿಗ್ಗೆ ನೀರ್ಚಾಲು ಪರಿಸರವನ್ನು ಕಳವಳಕ್ಕೀಡುಮಾಡಿದೆ.
ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ನೀರ್ಚಾಲು ಪೇಟೆಯಲ್ಲಿ ಬುಧವಾರ ಬೆಳಿಗ್ಗೆ ಈ ಅಪಘಾತ ಸಂಭವಿಸಿದೆ. ಸೀತಾಂಗೋಳಿಯ ಪೆಟ್ರೋಲ್ ಪಂಪ್‌ನಲ್ಲಿ ಕೆಲಸ ಮಾಡುತ್ತಿರುವ ಕನ್ಯಪ್ಪಾಡಿ ಮಾಡತ್ತಡ್ಕದ ಮೊಹಮ್ಮದ್ ಜೈನುದ್ದೀನ್ (29) ಮೃತ ವ್ಯಕ್ತಿ.
ಬುಧವಾರ (ಡಿಸೆಂಬರ್ 31) ಬೆಳಿಗ್ಗೆ 6.15 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್ ಮುಂದೆ ಈ ಘಟನೆ ನಡೆದಿದೆ. ಬೆಳಿಗ್ಗೆ ಸ್ಕೂಟರ್‌ನಲ್ಲಿ ಪೆಟ್ರೋಲ್ ಪಂಪ್‌ಗೆ ಕೆಲಸಕ್ಕೆ ಹೋಗುತ್ತಿದ್ದಾಗ ಮೊಹಮ್ಮದ್ ಜೈನುದ್ದೀನ್ ಅಪಘಾತಕ್ಕೀಡಾಗಿದ್ದಾರೆ. ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರಿನ ಮುಂಭಾಗವೂ ಹಾನಿಗೊಳಗಾಗಿದೆ. ಮೊಹಮ್ಮದ್ ಜೈನುದ್ದೀನ್ ಯೂತ್ ಲೀಗ್‌ನ ಸಕ್ರಿಯ ಕಾರ್ಯಕರ್ತರಾಗಿದ್ದರು. ಅವರು ಅಬ್ದುಲ್ ರೆಹಮಾನ್ ಮತ್ತು ಆಯಿಷಾ ದಂಪತಿಯ ಪುತ್ರ. ಅವರು ಪತ್ನಿ ಫೌಜಿಯಾ.ಪುತ್ರ ಇಬಾನ್, ಒಡಹುಟ್ಟಿದವರಾದ ಅಬ್ದುಲ್ ಖಾದರ್ ಮತ್ತು ರಜಿಯಾ ಅವರನ್ನು ಅಗಲಿದ್ದಾರೆ
ಶವವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಮುಹಮ್ಮದ್ ಜೈನುದ್ದೀನ್ ಅವರ ಅನಿರೀಕ್ಷಿತ ಸಾವಿನಿಂದ ನೀರ್ಚಾಲು ಪರಿಸರ ತತ್ತರಿಸಿದ್ದು, ಅಪಘಾತದ ಬಗ್ಗೆ ಬದಿಯಡ್ಕ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅತ್ಯಂತ ವಾಹನ ದಟ್ಟಣೆಯ ನೀರ್ಚಾಲಲ್ಲಿ ಇತ್ತೀಚೆಗೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು ಜನರು ಭಯ ಭೀತರಾಗಿದ್ದಾರೆ. ಇಲ್ಲಿಯ ಕೆ.ಎಸ್.ಟಿ.ಪಿ ರಸ್ತೆಯ ಅವ್ಯೆಜ್ಞಾನಿಕ ವ್ಯವಸ್ಥೆಗಳೇ ಅವಘಡ ಹೆಚ್ಚಳಕ್ಕೆ ಕಾರಣ. ಪರಿಸರದಲ್ಲಿ ಶಾಲೆ, ಕಾಲೇಜು, ಬ್ಯಾಂಕ್ ಸಹಿತ ವಿವಿಧ ಕಚೇರಿಗಳಿರುವುದರಿಂದ ರಸ್ತೆಯಲ್ಲಿ ಅಗತ್ಯದ ಬದಲಾವಣೆಗೆ ವ್ಯಾಪಾರಿ ಸಂಘಟನೆಗಳ ಸಹಿತ ಸಾರ್ವಜನಿಕರು ಕಾಲಗಳಿಂದ ಪರಿಹಾರಕ್ಕೆ ಒತ್ತಾಯಿಸುತ್ತಿದ್ದಾರೆ.

