ಕಾಸರಗೋಡು: ಸಂಸ್ಕಾರ, ಸಂಸ್ಕøತಿ ಕಲಿಸಿದ ಮಾತೃ ಭಾಷೆಗೆ ಪೂಜೆ ಸಲ್ಲಿಸಬೇಕಾದದ್ದು ಪ್ರತಿಯೊಬ್ಬನ ಕರ್ತವ್ಯವಾಗಬೇಕು. ಬೆಳೆದ ಮರಕ್ಕೆ ತಾಯಿ ಬೇರು ಹೇಗೆ ಗಟ್ಟಿತನವನ್ನು ಕೊಡುತ್ತದೋ ಹಾಗೇನೇ ಮನುಷ್ಯ ಗಟ್ಟಿಯಾಗಿ ಬೆಳೆಯುವುದಕ್ಕೆ ಮಾತೃ ಭಾಷೆ ಕೂಡಾ ಕಾರಣವಾಗುತ್ತದೆ. ಎಂಟನೇ ಪರಿಚ್ಛೇದದಲ್ಲಿ ಸೇರಿರುವ ಕೊಂಕಣಿ ಭಾಷೆಗೆ ಅದರದ್ದೇ ಆದ ಸೊಗಡು ಮತ್ತು ಇತಿಹಾಸವಿದೆ. ಅದನ್ನು ಬೆಳೆಸಬೇಕಾದದ್ದು ಆಯಾ ಭಾಷಿಕರ ಕರ್ತವ್ಯವಾಗಬೇಕು ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರೂ, ಚಲನಚಿತ್ರ ನಟರೂ, ನಿರ್ದೇಶಕರೂ ಆಗಿರುವ ಕಾಸರಗೋಡು ಚಿನ್ನಾ ಹೇಳಿದರು.
ಅವರು ಉಡುಪಿಯ ಕಾಡುಬೆಟ್ಟು ನಿವಾಸಿ ಗಜೇಂದ್ರ ಶೇಟ್ ಅವರ ಮನೆಯಲ್ಲಿ 136 ನೇ `ಘರ್ ಘರ್ ಕೊಂಕಣಿ' ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಕೊಂಕಣಿ ಭಾಷೆಯನ್ನು ಮೂರನೇ ಐಚ್ಛಿಕ ಭಾಷೆಯನ್ನಾಗಿ ಕಲಿಯುವ ವ್ಯವಸ್ಥೆ ಇದೆ. ಅದನ್ನು ಉಪಯೋಗಿಸಿಕೊಳ್ಳಬೇಕು ಎಂದರು.
ಅತಿಥಿಯಾಗಿ ಭಾಗವಹಿಸಿದ ಖ್ಯಾತ ಭಜನೆ ಹಾಡುಗಾರ್ತಿ ಮಾಯಾ ಕಾಮತ್ ಅವರು ಮಾತನಾಡಿ ಮನೆಯಲ್ಲಿ ಈ ತರಹದ ವಾತಾವರಣವನ್ನು ನಿರ್ಮಿಸಿದ ಕಾಸರಗೋಡು ಚಿನ್ನಾ ಅವರನ್ನು ಅಭಿನಂದಿಸಲಾಯಿತು.
ಭಾಗ್ಯ ಕಾಶೀನಾಥ್ ಭಟ್ ಅವರು ಕೊಂಕಣಿಯ ಶಿಶುಗೀತೆ ಹಾಗು ಭಕ್ತಿ ಗೀತೆಗಳನ್ನು ಹಾಡಿ ರಂಜಿಸಿದರು. ಮಾಯಾ ನಾಯಕ್ ಅವರು ಕೊಂಕಣಿ ಕೀರ್ತನೆಗಳನ್ನು ಹಾಡಿದರು. ಮನೆಯೊಡತಿ ರಮ್ಯಾ ರಾವ್ ಹಾಗು ಗಜೇಂದ್ರ ಶೇಟ್ ಅವರು ಕಾಸರಗೋಡು ಚಿನ್ನಾ ಅವರನ್ನು ಶಾಲು ಹೊದಿಸಿ ಫಲಪುಷ್ಪಗಳನ್ನು ನೀಡಿ ಗೌರವಿಸಿದರು. ಅಮರನಾಥ್ ಭಟ್, ಸುಹಾಸ್ ರಾವ್, ವೆಂಕಟೇಶ ಶೇಟ್ ಸಹಿತ ಹಲವಾರು ಗಣ್ಯರು ಉಪಸ್ಥಿತರಿದ್ದರು.

