ಪೆರ್ಲ: ಗಾಂಧೀವಾದವನ್ನು ಜೀವನದಲ್ಲಿ ಅಳವಡಿಸಿ ಪ್ರವೃತ್ತಿಯ ಮೂಲಕ ಕಾಟುಕುಕ್ಕೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಶಂಕರಮೋಹನದಾಸ ಆಳ್ವ ಅವರು ಕರ್ಮಯೋಗಿಯಾಗಿದ್ದರು ಎಂದು ಕಾಟುಕುಕ್ಕೆ ಸುಬ್ರಹ್ಮಣ್ಯೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸಿ.ಸಂಜೀವ ರೈ ಹೇಳಿದರು.
ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಶಾಲೆಯಲ್ಲಿ ದಿ.ಶಂಕರಮೋಹನದಾಸ ಆಳ್ವ ವೇದಿಕೆ ಅನಾವರಣ, ದ್ವಿತೀಯ ಸಂಸ್ಮರಣೆ, ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿಯೇ ಅತ್ಯತ್ತಮ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ
ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ವಿದ್ಯಾಸಂಸ್ಥೆ ಕುಗ್ರಾಮವಾಗಿದ್ದ ಕಾಟುಕುಕ್ಕೆಯನ್ನು ಸುಗ್ರಾಮವಾಗಿಸುವಲ್ಲಿ ಪ್ರಧಾನ ಪಾತ್ರವಹಿಸಿದೆ.ಸಹಸ್ರಾರು ಮಕ್ಕಳ ಮನದಲ್ಲಿ ವಿದ್ಯೆಯ ಬೆಳಕು ಚೆಲ್ಲಿದ ನಾಡಿನ ಅಕ್ಷರ ದಾಸೋಹಿ, ವಿದ್ಯಾ ಸಂಸ್ಥೆಯ ಸ್ಥಾಪಕ ಸಂಚಾಲಕ ಹಾಗೂ ಮುಖ್ಯ ಶಿಕ್ಷಕರಾಗಿದ್ದ ಆಳ್ವರು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಸಹಕಾರಿ ಕ್ಷೇತ್ರ, ಮೌಲ್ಯಾಧಾರಿತ ರಾಜಕೀಯ ಕ್ಷೇತ್ರಗಳಲ್ಲೂ ಪ್ರಾಮಾಣಿಕವಾಗಿ ತಮ್ಮನ್ನು ತೊಡಗಿಸಿ ಅನೇಕರಿಗೆ ಮಾರ್ಗದರ್ಶಿಯಾಗಿದ್ದರು. ಧೀಮಂತ ವ್ಯಕ್ತಿತ್ವ, ಸಭ್ಯ ಆಡಳಿತಗಾರ, ಶ್ರೇಷ್ಠ ಅಧ್ಯಾಪಕ, ಸಾಮಾಜಿಕ ಮುತ್ಸದ್ದಿಯಾಗಿದ್ದ ಕ್ರಿಯಾಶೀಲ ವ್ಯಕ್ತಿಯೊಬ್ಬರನ್ನು ಕಳೆದುಕೊಂಡ ಕಾಟುಕುಕ್ಕೆ ಗ್ರಾಮ ಇಂದು ಅಕ್ಷರಶಃ ಬಡವಾಗಿದೆ.ಅವರ ಆದರ್ಶಗಳು ಎಲ್ಲರಿಗೂ ಪ್ರೇರಣೆಯಾಗಲಿ ಎಂದರು.
ಪಾಣಾಜೆ ಸುಬೋಧ ಪ್ರೌಢಶಾಲೆ ನಿವೃತ್ತ ಮುಖ್ಯ ಶಿಕ್ಷಕ ಪಿಲಿಂಗಲ್ಲು ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ವಿದ್ಯಾ ಸಂಸ್ಥೆ ನಾನಾ ಕ್ಷೇತ್ರಗಳಲ್ಲಿ ಹಲವು ಸಾಧನೆಗಳನ್ನು ಮಾಡಿದೆ.ಈ ಎಲ್ಲಾ ಸಾಧನೆಗಳ ಶ್ರೇಯಸ್ಸು ದಿ.ಆಳ್ವರಿಗೆ ಸಲ್ಲುತ್ತದೆ.ಮದ ಮತ್ಸರಗಳು ಮನುಷ್ಯನ ಪರಮ ಶತ್ರು.ಸತ್ಯವನ್ನೇ ಹೇಳು, ಸಾಧು ಸಂತರ ಹಾದಿಯಲ್ಲಿ ಹೋಗು, ವಿಧ್ವಾಂಸರ ಸೇವೆ ಮಾಡು, ಒಳಿತು ಮಾಡುವವರನ್ನು ಗೌರವಿಸು ಎಂಬುದು ಆಳ್ಚರ ನಿಲುವಾಗಿತ್ತು.ನಂಬಿದ ತತ್ವಗಳನ್ನು ಅಚಲವಾಗಿ ನಂಬಿ ಜನಿಸಿದ ನಾಡಿಗೆ ಅನುಪಮ ತ್ಯಾಗ, ನ್ಯಾಯ ನೀತಿ ಮಾನವ ಧರ್ಮದ ಬುನಾದಿಯೊಂದಿಗೆ ತನ್ನ ಕೆಲಸಗಳಿಗೆ ಪ್ರತಿಫಲಾಪೇಕ್ಷೆ ಬಯಸದ ಆಳ್ವರು ಸಮಸ್ತ ನಾಡಿಗೆ ಆದರ್ಶಪ್ರಾಯರು ಎಂದರು.
ಕರ್ನಾಟಕ ಮುಖ್ಯ ಮಂತ್ರಿಗಳ ಮಾಜಿ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ ಅವರು ಮಾತನಾಡಿ, ಕಾಟುಕುಕ್ಕೆ ಶಾಲೆಯ ಶಿಸ್ತು, ವ್ಯವಸ್ಥೆಗಳು ದಿ.ಆಳ್ವರಿಂದ ರೂಪಿಸಲ್ಪಟ್ಟಿದ್ದು ಅವರು ಶಾಲೆ ಹಾಗೂ ಊರಿನ ಸರ್ವತೋಮುಖ ಅಭಿವೃದ್ಧಿಯ ಕನಸು ಕಂಡಿದ್ದರು ಎಂದರು. ರಾಮಕೃಷ್ಣ ಶಿವಪ್ರಸಾದ್ ಆಳ್ವ, ಲಕ್ಷ್ಮೀ ನಾರಾಯಣ ಶೆಟ್ಟಿ, ಕೃಷ್ಣಪ್ರಸಾದ ಭಂಡಾರಿ ಸಾಜ ಮಾತನಾಡಿದರು.
ಸ್ವರ್ಗ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ 'ಶಿವ ಪಡ್ರೆ' ಅವರ 'ದೇವಶಂಕರ' ('ಕುಂಬಳೆ ಗಾಂಧಿ' ದಿ.ದೇವಪ್ಪ ಆಳ್ವ ಮತ್ತು ದಿ.ಶಂಕರ ಮೋಹನದಾಸ ಆಳ್ವರ ಸ್ಮರಣ ಸಂಚಿಕೆ) 'ದೇವ ಶಂಕರ' ಸಂಗ್ರಹ ಪುಸ್ತಕವನ್ನು ನಿವೃತ್ತ ಪ್ರಿನ್ಸಿಪಾಲ್, ಸಾಹಿತಿ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ಪರಿಚಯಿಸಿ, ಶಕುಂತಳಾ ಶೆಟ್ಟಿ ಬಿಡುಗಡೆ ಗೊಳಿಸಿದರು.'ಶ್ರೀ ವಿಷ್ಣು ಚಿಂತನ' ಪುಸ್ತಕವನ್ನು ಖ್ಯಾತ ಯಕ್ಷಗಾನ ಅರ್ಥದಾರಿ, ವಿಮರ್ಶಕ ಡಾ.ಎಂ.ಪ್ರಭಾಕರ ಜೋಷಿ ಪರಿಚಯಿಸಿ ಖ್ಯಾತ ಚಿತ್ರ ಕಲಾವಿದ ಪಿ.ಎಸ್.ಪುಣಿಂಚತ್ತಾಯ ಬಿಡುಗಡೆ ಗೊಳಿಸಿದರು.ವಿದ್ಯಾರ್ಥಿನಿ ಮಂಜುಷಾ ಆಳ್ವರನ್ನು ಸಂಸ್ಮರಿಸಿ 'ಶಿವ ಪಡ್ರೆ ವಿರಚಿತ ಆಶು ಕವನ ಹಾಡಿದರು.
ಆರ್ಥಿಕವಾಗಿ ಹಿಂದುಳಿದ, ಸಾಮಾನ್ಯ ವಿಭಾಗದ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಪ್ರಾಧ್ಯಾಪಕಿ ವಾಣಿಶ್ರೀ ಅವರ ಶಾಶ್ವತ ಕೊಡುಗೆ ದಿ.ಶಂಕರಮೋಹನದಾಸ ಆಳ್ವ ದತ್ತಿನಿಧಿಯನ್ನು ವಿದ್ಯಾರ್ಥಿನಿ ವಿಶ್ವಶ್ರೀ ಅವರಿಗೆ ಪ್ರದಾನ ಮಾಡಲಾಯಿತು.
ದಿ.ಆಳ್ವ ಅವರ ಧರ್ಮ ಪತ್ನಿ ಕಮಲಾಕ್ಷಿ, ವಿದ್ಯಾ ಸಂಸ್ಥೆ ಆಡಳಿತ ಮಂಡಳಿ ಪದಾಧಿಕಾರಿಗಳಾದ ಚಾಕಟೆ ಗೋಪಾಲಕೃಷ್ಣ ಭಟ್, ಬಿ.ಎಸ್.ಗಾಂಭೀರ, ಪಡ್ಪು ಶಿವರಾಮ ಭಟ್, ವಿನೋಬ ಶೆಟ್ಟಿ ದಂಬೆಕ್ಕಾನ, ಸಂದೇಶ್ ರೈ ಕಟ್ಟತ್ತಾಡೆ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾ ಸಂಸ್ಥೆ ಸಂಚಾಲಕ ಮಿತ್ತೂರು ಪುರುಷೋತ್ತಮ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಿನ್ಸಿಪಾಲ್ ಕೆ.ಪದ್ಮನಾಭ ಶೆಟ್ಟಿ ವಂದಿಸಿದರು.ಶಿಕ್ಷಕ ಎಚ್.ಲೋಕನಾಥ ಶೆಟ್ಟಿ ಮಾಯಿಲೆಂಗಿ ನಿರೂಪಿಸಿದರು.



