ಮಂಜೇಶ್ವರ : ಮಂಜೇಶ್ವರ ಮೀನುಗಾರಿಕ ಕಿರು ಬಂದರಿನ ಕಾಮಗಾರಿ ಅಶಾಸ್ತ್ರೀಯವಾಗಿ ನಡೆದಿದೆ. ಇದರ ಪರಿಣಾಮವಾಗಿ ಇಲ್ಲಿನ ಕಾರ್ಮಿಕರು ಸಂಕಷ್ಟವನ್ನು ಎದುರಿಸುವಂತಾಗಿದೆಯೆಂದು ಮಂಜೇಶ್ವರ ಮೀನುಗಾರಿಕ ಬಂದರು ಮೀನುಗಾರಿಕಾ ಕಾರ್ಮಿಕ ಸಂಘದ ಪದಾಧಿಕಾರಿಗಳು ಶುಕ್ರವಾರ ಮಂಜೇಶ್ವರದಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ದೋಣಿಗಳು ಹಾದು ಹೋಗುವ ಸ್ಥಳಗಳಲ್ಲಿ ಮರಳು ರಾಶಿ ಬೀಳುವುದರಿಂದ ಮೀನುಗಾರಿಕೆಗೆ ತೆರಳಿ ಹಿಂತಿರುಗುವವರು ದಡ ಸೇರಲು ಹರಸಾಹಸ ಪಡುತ್ತಿದ್ದಾರೆ. ಹಾಗೂ ಅಪಾಯವನ್ನು ಎದುರಿಸುವಂತಾಗಿದೆ. ಕಳೆದ ಒಂದು ವಾರದೊಳಗೆ ಇಲ್ಲಿ ಎರಡು ದುರಂತಗಳು ಸಂಭವಿಸಿದೆ.ಕಾರ್ಮಿಕರು ಪವಾಡ ಸದೃಶ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಲ್ಲಿ ಅವಘಡಗಳು ನಿತ್ಯ ಘಟನೆಯಾಗಿ ಮಾರ್ಪಟ್ಟಿದೆ. ಇಲ್ಲಿನ ಮೀನುಗಾರಿಕೆಯಿಂದ ಮಾತ್ರ ಬದುಕು ಕಟ್ಟಿಕೊಂಡಿರುವ ನೂರಾರು ಮೀನು ಕಾರ್ಮಿಕರು ಬಂದರು ಅಶಾಸ್ತ್ರೀಯ ಕಾಮಗಾರಿಯ ಅಪಾಯಗಳ ಭಯದಲ್ಲಿದ್ದಾರೆ. ಕಾಮಗಾರಿ ಪ್ರಾರಂಭದಲ್ಲಿಯೇ ಇಲ್ಲಿನ ಮೀನುಗಾರಿಕಾ ಕಾರ್ಮಿಕರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಅಭಿಯಂತರರಿಗೆ ಬಂದರಿನ ಅಶಾಸ್ತ್ರೀಯ ಕಾಮಗಾರಿ ಕುರಿತು ಮಾಹಿತಿ ನೀಡಿದ್ದರು. ಆದರೆ ಇದನ್ನು ಅಧಿಕಾರಿ ವರ್ಗ ನಿರ್ಲಕ್ಷ್ಯಸಿರುವುದರಿಂದ ಅಪಾಯ ಒದಗುವಂತಾಗಿದೆ ಎಂದು ಆರೋಪಿಸಿರುವ ಪದಾಧಿಕಾರಿಗಳು ಇದರ ಪರಿಣಾಮ ಇಲ್ಲಿನ ನಿತ್ಯ ಅವಘಡ ಸಂಭವಿಸುತ್ತಿದೆಯೆಂದು ಅವರು ನುಡಿದರು.
ಪ್ರಸ್ತುತ ತಡೆಗೋಡೆ ನಿರ್ಮಾಣದ ಕಾಮಗಾರಿಯನ್ನು ಶಾಸ್ತ್ರೀಯವಾಗಿ ನಿರ್ವಹಿಸಬೇಕು. ದೋಣಿ ಹಾದು ಹೋಗುವ ಸ್ಥಳಗಳಲ್ಲಿ ರಾಶಿ ಬಿದ್ದಿರುವ ಮರಳುಗಳ ತೆರೆವಿಗೆ ತುರ್ತು ಕ್ರಮ ಕೈಗೊಳ್ಳಬೇಕು. ಮೇಲ್ಸೇತುವೆಯ ಕಾಮಗಾರಿ ಶೀಘ್ರದಲ್ಲಿ ಆರಂಭಿಸಬೇಕು. ಜೆಟ್ಟಿ ನಿರ್ಮಾಣದ ಲೋಪಗಳನ್ನು ಶೀಘ್ರವೇ ಪರಿಹರಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ವಿದ್ಯುತ್ ಹಾಗೂ ಶೌಚಾಲಾಯದ ಕಾಮಗಾರಿ ನಡೆಸಬೇಕು. ಹೊಸಬೆಟ್ಟು ಕಡಪ್ಪುರದಲ್ಲಿ ನೂತನ ಮೀನುಗಾರಿಕೆ ಜೆಟ್ಟಿ ನಿರ್ಮಿಸಬೇಕು. ಸಂಪೂರ್ಣ ಮೂಲಭೂತ ಸೌಕರ್ಯಗಳೊದಗಿಸಿ ಬಂದರಿನ ಉದ್ಘಾಟನೆ ನಡೆಸಬೇಕು. ಈ ಕುರಿತಂತೆ ತಂಡವೊಂದು ಮುಖ್ಯಮಂತ್ರಿ ಹಾಗೂ ಬಂದರು ಸಚಿವರನ್ನು ಭೇಟಿ ಮಾಡಿ ಮನವಿ ನೀಡಲಾಗುವುದು. ಮನವಿಗೆ ಸ್ಪಂದಿಸದಿದ್ದಲ್ಲಿ ಹೋರಾಟ ನಡೆಸುವುದಾಗಿ ಸಂಘದ ಪದಾಧಿಕಾರಿಳು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ ಅಶ್ರಫ್, ಸಂಘದ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ, ಕಾರ್ಯದರ್ಶಿ ಮೊಹಮ್ಮದ್ ಅಲೀ, ಜೊತೆ ಕಾರ್ಯದರ್ಶಿಗಳಾದ ಅಝೀಝ್, ಅಶ್ರಫ್ ಉಪಸ್ಥಿತರಿದ್ದರು.


