ಮುಳ್ಳೇರಿಯ: ತಡವಾಗಿ ಬಂದ ಮಳೆ ಹಾಗೂ ಹೆಚ್ಚಿದ ಬಿಸಿಲಿನ ಬೇಗೆಯಿಂದ ಫಸಲು ಕಡಿಮೆಯಾಗಿ ಆತಂಕದಲ್ಲಿದ್ದ ಕೃಷಿಕರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಹೆಚ್ಚಾಗಿ ಸುರಿದ ಮಹಾಮಳೆಯಿಂದಾಗಿ ಕೀಟನಾಶಕ ಸಿಂಪಡಣೆ ಅಸಾಧ್ಯವಾದ ಕಾರಣ ಅಡಕೆ ಮರಗಳು ಮಹಾಳಿ ರೋಗದ ಕಪಿಮುಷ್ಠಿಗೆ ಬಲಿಯಾಗಿ ಫಸಲು ಕೈಸೇರದಂತಾಗಿದೆ. ಗಾಯದ ಮೇಲೆ ಬರೆ ಎಳೆದಂತೆ ಕೊಳೆ(ಮಹಾಳಿ) ರೋಗ ಕಾಸರಗೋಡು ಹಾಗೂ ದಕ್ಷಿಣ ಕನ್ನಡದ ಅಡಕೆ ಬೆಳೆಗಾರರನ್ನು ಕಂಗಾಲಾಗಿಸಿದೆ. ರೋಗ ತಡೆಗಟ್ಟುವ ನಿಟ್ಟಿನಲ್ಲಿ ಅದೆಷ್ಟೋ ಮಂದಿ ಮಳೆಗಾಲಕ್ಕೆ ಮೊದಲೇ ತಮ್ಮ ಅಡಕೆ ಮರಗಳಿಗೆ ಔಷಧ ಸಿಂಪಡಿಸಿದ್ದರೂ ಅತಿಯಾಗಿ ಸುರಿದ ಮಳೆಯಿಂದಾಗಿ ರೋಗ ಬಾಧಿಸಿದೆ.
ಕೈಗೆ ಬಂದ ತುತ್ತು ಬಾಯಿಗಿಲ್ಲ:
ಹನಿ ಬಿಡದ ಮಳೆಯಿಂದಾಗಿ ಔಷಧ ಸಿಂಪರಣೆ ಅಸಾಧ್ಯವಾಗಿ ಮಹಾಳಿ ರೋಗ ಬಾಧಿಸಿದೆ. ಆ. ಕೊನೆಯ ವಾರದಲ್ಲಿ ಮಳೆಯ ಪ್ರಮಾಣ ಕಡಿಮೆಯಾದರೂ ಬಿಸಿಲು ಮಳೆಯಿಂದಾಗಿ ಸಮಶೀತೋಷ್ಣ ವಾತಾವರಣ ಸೃಷ್ಠಿಯಾದ ಕಾರಣ ಅಡಿಕೆಗೆ ಹಾನಿ ತಂದೊಡ್ಡಿದೆ. ಮಳೆಗಾಲಕ್ಕೆ ಮೊದಲೇ ಬೋರ್ಡೋ ಸಿಂಪರಣೆ ಮಾಡಿದವರಿಗೆ 2ನೇ ಸಿಂಪರಣೆಗೆ ಅವಕಾಶ ಒದಗಿಬರಲಿಲ್ಲ. ಒಂದು ಬಾರಿ ಸಿಂಪರಣೆ ಮಾಙಡಿದರೆ 30-40 ದಿನಗಳಲ್ಲಿ ಪುನಃ ಸಿಂಪರಣೆ ಮಾಡಬೇಕು. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗಿದೆ.
ಔಷಧಿ ಸಿಂಪಡಿಸಿದರೂ ರೋಗ ಬಂತು:
ಸಾಧಾರಣವಾಗಿ ಅಡಕೆಗೆ ರೋಗ ಬಾರದಂತೆ ಜುಲೈಯಿಂದ ಸಪ್ಟಂಬರ್ ತಿಂಗಳ ವರೆಗೂ ನಿರಂತರವಾಗಿ 4-5 ಬಾರಿ ಬೋರ್ಡೋ ಮಿಶ್ರಣ ಸಿಂಪರಣೆ ಮಾಡುತ್ತಾರೆ. ಆದರೆ ಈ ಬಾರಿ ಅತೀವವಾಗಿ ಮಳೆ ಸುರಿದ ಕಾರಣ ಔಷಧ ಸಿಂಪರಣೆ ಮಾಡಿದ ಪ್ರದೇಶಗಳಲ್ಲೂ ಔಷಧ ನೀರಿನಲ್ಲಿ ಕರಗಿ ಹೋಯಿತೆ ವಿನಃ ಯಾವುದೇ ಫಲ ನೀಡಲಿಲ್ಲ. ಮೂರು ಬಾರಿ ಸಿಂಪರಣೆ ನಡೆಸಿದ ಕಡೆಗಳಲ್ಲೂ ಮಹಾಳಿ ಕಾಟ ಪ್ರಾರಂಭವಾಗಿದೆ. ಸಪ್ಟಂಬರ್ ಪ್ರಾರಂಭವಾಗುತ್ತಿದ್ದಂತೆ ಅಲ್ಲಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ಸಾವಿರಾರು ಎಳೆ ಅಡಕೆ ಉದುರಲು ಪ್ರಾರಂಭವಾಗಿದೆ.
ಬೋರ್ಡೋ ಮಿಶ್ರಣ:
ಭಾರಿ ಹಾನಿ ಉಂಟುಮಾಡುವ ಕೊಳೆ ರೋಗ ಹರಡುವ ಸೂಕ್ಷ್ಮಾಣು ಜೀವಿಗಳನ್ನು ನಿಯಂತ್ರಿಸಲು ಬಹಳಷ್ಟು ವಿಧಿವಿಧಾನಗಳಿದ್ದರೂ ತಲೆತಲಾಂತರಗಳಿಂದ ತಿಳಿದುಬಂದ ಸಮರ್ಪಕ ಸಮ್ಮಿಶ್ರ ಬೋರ್ಡೋ ದ್ರಾವಣದಷ್ಟು ಉಪಯುಕ್ತ ಹಾಗೂ ಪರಿಣಾಮಕಾರಿಯಾದುದು ಬೇರೊಂದಿಲ್ಲ ಎಂಬುದು ಕೃಷಿಕರ ಅಭಿಪ್ರಾಯ. ಸಾಧಾರಣವಾಗಿ ಮುಂಗಾರು ಪ್ರಾರಂಭಕ್ಕೆ ಮುನ್ನ ಒಂದೆರಡು ಮಳೆಯಾದ ಕೂಡಲೇ ಅಡಕೆ, ಕಾಳುಮೆಣಸು, ಕೊಕ್ಕೊ ಬೆಳೆಗಳಿಗೆ ಮುಂಜಾಗರೂಕತಾ ಕ್ರಮವಾಗಿ ಸಿಂಪರಣೆ ಮಾಡುವುದು ರೋಗ ನಿಯಂತ್ರಣಕ್ಕಾಗಿ ಬೆಳೆಗಾರರು ಅನುಸರಿಸುವ ಪ್ರಥಮ ಹೆಜ್ಜೆಯಾಗಿದೆ.
ಮಳೆ ತಂದ ಅವಾಂತರ:
ಬೇಸಿಗೆಯಲ್ಲಿ ನೀರಿಲ್ಲದೆ ಕಂಗಾಲಾದ ಅಡಕೆ ಮರಗಳು ಮಳೆಗಾಲದಲ್ಲಿ ಗಾಳಿಗೆ ತುಂಡಾಗಿ ಬಿದ್ದು ಅತೀವ ನಾಶನಷ್ಟವನ್ನು ಎದುರಿಸಿರುವ ಬೆಳೆಗಾರರಿಗೆ ಈಗ ಬಾಧಿಸಿರುವ ಕೊಳೆ ರೋಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ಮೂರು ವರ್ಷಗಳಿಂದ ಕೊಳೆರೋಗ ಬಾಧಿಸುತ್ತಿದ್ದು ಹವಾಮಾನ ವೈಪರೀತ್ಯ ಮತ್ತು ಭಾರೀ ಮಳೆಯೇ ಇದಕ್ಕೆ ಮೂಲ ಕಾರಣ ಎನ್ನಲಾಗಿದೆ. ಇಡೀ ವರ್ಷದ ದುಡಿತ ಹಾಗೂ ನಾಳೆಯ ನಿರೀಕ್ಷೆ ಮಳೆ ಹಾಗೂ ಮಹಾಳಿ ರೋಗಕ್ಕೆ ಆಹುತಿಯಾಗಿದೆ.
ಕಾರ್ಮಿಕರ ಕೊರತೆ:
ಕಾರ್ಮಿಕರ ಕೊರತೆ ಇನ್ನೊಂದು ರೀತಿಯಲ್ಲಿ ವ್ಯಾಪಕವಾಗಿ ಕಾಡುವ ಸಮಸ್ಯೆ. ಸಕಾಲದಲ್ಲಿ ತೋಟದ ಸೂಕ್ತ ನಿರ್ವಹಣೆ, ಔಷಧಿ ಸಿಂಪರಣೆ ಹಾಗೂ ಇತರ ಕೆಲಸಗಳಿಗಾಗಿ ಕಾರ್ಮಿಕರ ಕೊರತೆ ಹಾಗೂ ವೇತನ ಹೆಚ್ಚಳದಿಂದ ತೋಟದ ಬೆಳೆಗಾರರು ಕಂಗಾಲಾಗಿದ್ದಾರೆ.
ಪರಿಹಾರ ಏನು?:
ಕೆಲವು ವರ್ಷಗಳಿಂದ ಕೃಷಿಕರ ಪರವಾಗಿ ಹೋರಾಟ ಮಾಡುತ್ತಿದ್ದ ಕಿಸಾನ್ಸೇನೆಯಂತಹ ಸಂಘಟನೆಗಳೂ
ಸದ್ಯದ ಪರಿಸ್ಥಿತಿಯಲ್ಲಿ ಏನು ಮಾಡಿದರೂ ಉಪಯೋಗವಿಲ್ಲ ಎನ್ನುವಂತಾಗಿದೆ. ಔಷಧಿ ಸಿಂಪಡಣೆ ವ್ಯರ್ಥವಾಗುತ್ತಿದ್ದು ಎಳೆ ಅಡಕೆ ಉದುರಿ ಹೋಗಿ ಉಳಿದ ಸಡಕೆಗಳು ಸಾಧಾರಣ ಗಾತ್ರಕ್ಕೆ ಬಂದಿವೆ. ಅವುಗಳನ್ನು ಸಂರಕ್ಷಿಸಿ ಉಳಿಸಿಕೊಳ್ಳುವತ್ತ ಗಮನ ಹರಿಸಬೇಕಾಗಿದೆ. ಆದರೆ ಮಹಾಳಿ ರೋಗ ಒಂದು ಮರಕ್ಕೆ ಬಾಧಿಸಿದರೆ ಇಡೀ ತೋಟವನ್ನೇ ಆವರಿಸಿ ಬಿಡುತ್ತದೆ. ಆದುದರಿಂದ ಕೃಷಿ ಸಂರಕ್ಷಣೆಯ ಹೊಸ ಮಾರ್ಗಗಳು ಈಗಿನ ಪರಿಸ್ಥಿತಿಯಲ್ಲಿ ಪ್ರಸ್ತುತವಲ್ಲ. ಆದರೆ ಸರ್ಕಾರದಿಂದ ಸೂಕ್ತ ಸಹಾಯ ನೀಡಿ ಬೆಳೆಗಾರರನ್ನು ಈ ಬವಣೆಯಿಂದ ಮೇಲೆತ್ತಬೇಕಾದ ಅಗತ್ಯವಿದೆ. ಮಾತ್ರವಲ್ಲದೆ ಮುಂದಿನ ವರ್ಷಗಳಲ್ಲಿ ಇಂತಹ ಪರಿಸ್ಥಿತಿ ಎದುರಿಸಲು ನೂತನ ಪ್ರಯೋಗಗಳತ್ತ ಮುಖಮಾಡಬೇಕಾಗಿದೆ.
ಅಭಿಮತ:
ಬೇಸಿಗೆ ಕಾಲದಲ್ಲಿ ನೀರಿಲ್ಲದೆ ಅಡಿಕೆ ಮರಗಳು ಸತ್ತು ಹೋದುವು. ಸಿಕ್ಕಿದ ನೀರಲ್ಲಿ ಬದುಕುಳಿದ ಮರಗಳು ಮಹಾಳಿ ರೋಗಕ್ಕೆ ತುತ್ತಾಗಿ ರೈತರನ್ನು ಕಂಗಾಲಾಗಿಸಿದೆ. ಪ್ರತ್ಯೇಕವಾಗಿ ಜಿಲ್ಲೆಯ ಅಡೂರು, ಕುಂಬ್ಡಾಜೆ. ಪೆರ್ಲ, ಬೆಳ್ಳೂರು, ಕುಂಬಳೆ. ಮುಳ್ಳೇರಿಯ, ಬದಿಯಡ್ಕ, ಬಾಯಾರು, ಮಂಜೇಶ್ವರ ಮುಂತಾದ ಅಡಿಕೆ ಕೃಷಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ಇಲ್ಲಿನ ಆರ್ಥಿಕ ನೆರವು ಘೋಷಿಸಬೇಕಾದ ಅಗತ್ಯವಿದೆ. ರೈತರ ಕಷ್ಟಕ್ಕೆ ಸ್ಪಂಧಿಸಿ ನೆರವಾಗುವಲ್ಲಿ ಕೃಷಿ ಇಲಾಖೆ ಹಾಗೂ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.
ಕಲ್ಲಗ ಚಂದ್ರಶೇಖರ ರಾವ್, ಕೃಷಿಕರು ಹಾಗೂ ಮಾಜಿ ಪಂಚಾಯತಿ ಅಧ್ಯಕ್ಷರು ಬೆಳ್ಳೂರು.
...............................................................................................................................
ಅಭಿಮತ:
ನಮ್ಮಲ್ಲಿ ಎರಡು ಬಾರಿ ಔಷಧಿ ಸಿಂಪರಣೆ ಮಾಡಿದರೂ ಹೆಚ್ಚು ಮಳೆಯಿಂದಾಗಿ ಅಡಕೆಗೆ ಮಹಾಳಿ ರೋಗ ಬಾಧಿಸಿದೆ. ನಮ್ಮ ಸುತ್ತುಮುತ್ತಲ ಪ್ರದೇಶದ ಎಲ್ಲಾ ಕೃಷಿಕರನ್ನು ಈ ಸಮಸ್ಯೆ ಇದರಿಂದ ಕಂಗಾಲಾಗಿದ್ದಾರೆ. ಆದುದರಿಂದ ಇದಕ್ಕೆ ಸರಿಯಾದ ಪರಿಹಾರ ಕಂಡುಕೊಳ್ಳಲು ಸಂಬಂಧಿಸಿದ ಅಧಿಕಾರಿಗಳು ನೆರವಾಗಬೇಕು. ರೈತರ ಬವಣೆಯನ್ನು ನೀಗಬೇಕು.
ಪುಷ್ಪಾವತಿ ನೆಟ್ಟಣಿಗೆ.ಕೃಷಿಕ ಮಹಿಳೆ


