ಪೆರ್ಲ: ಓಜೋನ್ ಪದರ ಸಂಪೂರ್ಣ ನಾಶವಾದಲ್ಲಿ ಭೂಮಿಯ ಮೇಲಿನ ಮಾನವ ಸಹಿತ ಎಲ್ಲಾ ಜೀವಿಗಳ ಅಸ್ತಿತ್ವ ಪ್ರಶ್ನಿಸಲ್ಪಡುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬನು ಓಜೋನ್ ಪದರದ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಭೋಗೋಳ ಶಾಸ್ತ್ರ ವಿಭಾಗದ ಉಪನ್ಯಾಸಕಿ ಸಾಜಿದ ಹೇಳಿದರು.
ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ಮಂಗಳವಾರ ನಡೆದ ವಿಶ್ವ ಓಜೋನ್ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ದಿನೇ ದಿನೇ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ಕೈಗಾರಿಕರಣ, ಪ್ರಕೃತಿ ನಾಶ ಮುಂತಾದವುಗಳಿಂದಾಗಿ ಭೂಮಿಯ ರಕ್ಷಣಾ ಕವಚವಾಗಿರುವ ಓಜೋನ್ ಕ್ಷೀಣಿಸುತ್ತಿದ್ದು, ಇದರ ಕ್ಷಿಪ್ರ ನಾಶಕ್ಕೆ ಕಾರಣವಾಗುತ್ತಿರುವ ವಿಷಾನಿಲಗಳು ವಾಯು ಮಂಡಲಕ್ಕೆ ಸೇರುವ ಪ್ರಮಾಣವನ್ನು ಕಡಿಮೆ ಮಾಡಲು ನಾವೆಲ್ಲರೂ ಶ್ರಮಿಸಬೇಕು ಎಂದರು.
ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್. ಕೆ.ಎಂ ಮಾತನಾಡಿ, ಓಜೋನ್ ಪದರದ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ಓಜೋನ್ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಉಳಿದ ದಿನಾಚರಣೆಗಳಂತೆ ಒಂದು ದಿನಕ್ಕೆ ಸೀಮಿತವಾಗದಿರಲಿ ಎಂದರು.
ಎನ್ನೆಸ್ಸೆಸ್ ಕಾರ್ಯದರ್ಶಿಗಳಾದ ಕಾವ್ಯ, ಜಗತ್, ಅಂಜನ, ಅಭಿಲಾಷ್, ಅಜಿತ್ ಉಪಸ್ಥಿತರಿದ್ದರು. ಯಜ್ಞೇಶ್ ಸ್ವಾಗತಿಸಿ, ನಿಶಾಂತ್ ವಂದಿಸಿದರು. ಭವಿಷ್ಯ ಕಾರ್ಯಕ್ರಮ ನಿರೂಪಿಸಿದರು.


