ಕಾಸರಗೋಡು: ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ನಡೆಸಿದ ನಿರಾಹಾರ ಸತ್ಯಾಗ್ರಹ ಕೇರಳ ಸರಕಾರದ ಕಣ್ಣು ತೆರೆಸಲಿದೆ ಎಂದು ವಿಪಕ್ಷ ನೇತಾರ ರಮೇಶ್ ಚೆನ್ನಿತ್ತಲ ಹೇಳಿದರು.
ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಶೋಚನೀಯಾವಸ್ಥೆಗೆ ತುರ್ತು ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿ ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ನಡೆಸಿದ 24 ಗಂಟೆಗಳ ನಿರಾಹಾರ ಸತ್ಯಾಗ್ರಹದ ಶನಿವಾರ ಬೆಳಿಗ್ಗೆ ನಡೆದ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇರಳದ ರಸ್ತೆಗಳ ಅಭಿವೃದ್ಧಿಗೆ 3000 ಕೋಟಿ ರೂಪಾಯಿಯನ್ನು ಈ ಹಿಂದೆ ಮಂಜೂರು ಮಾಡಿತ್ತು. ಅನಂತರ ಎರಡು ಪ್ರವಾಹಗಳು ರಾಜ್ಯದಲ್ಲಿ ಸಂಭವಿಸಿತು. ಆದರೆ ನಯಾಪೈಸೆಯನ್ನು ಸರಕಾರ ಖರ್ಚು ಮಾಡಿಲ್ಲ. ರಸ್ತೆ ಅಭಿವೃದ್ಧಿಗೆ ಜರ್ಮನಿಯಿಂದ ಹಣ ಬರಲಿದೆ ಎಂದು ಸರಕಾರ ತಿಳಿಸುತ್ತಾ ಜನರನ್ನು ವಂಚಿಸುತ್ತಿದೆ ಎಂದೂ ರಮೇಶ್ ಚೆನ್ನಿತ್ತಲ ಆರೋಪಿಸಿದರು. ಕಣ್ಣೂರು, ಕಾಸರಗೋಡಿನಿಂದ, ನೆರೆಯ ಕರ್ನಾಟಕದಿಂದ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತಿವೆ. ಆದರೆ ಈ ವಾಹನಗಳು ಹಾದು ಹೋಗುವ ರಾ.ಹೆದ್ದಾರಿಯ ಸ್ಥಿತಿ ಶೋಚನೀಯವಾಗಿದೆ. ಇದನ್ನು ಕಂಡೂ ಕಾಣದಂತೆ ಸರಕಾರ ವರ್ತಿಸುತ್ತಿದೆ. ಒಟ್ಟಾರೆಯಾಗಿ ಕೇರಳದ ಅಭಿವೃದ್ಧಿಯೇ ಮೊಟಕುಗೊಂಡಿದೆಯೆಂದು ಅವರು ಆರೋಪಿಸಿದರು.
ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಶೋಚನಿಯಾವಸ್ಥೆಗೆ ಪರಿಹಾರ ಕಾಣಬೇಕೆಂದು ಒತ್ತಾಯಿಸಿ ರಾಜ್ಮೋಹನ್ ಉಣ್ಣಿತ್ತಾನ್ ಸೆ.20 ರಂದು ಬೆಳಗ್ಗೆ ನಿರಾಹಾರ ಸತ್ಯಾಗ್ರಹ ಆರಂಭಿಸಿದ್ದರು. ಶನಿವಾರ ಬೆಳಗ್ಗೆ ರಮೇಶ್ ಚೆನ್ನಿತ್ತಲ ಅವರು ಲಿಂಬೆ ಹಣ್ಣಿನ ಪಾನೀಯ ಕುಡಿಸುವ ಮೂಲಕ ಸತ್ಯಾಗ್ರಹ ಕೊನೆಗೊಳಿಸಿದರು.
ಸಂಸದ ಕೊಡಿಕುನ್ನಿಲ್ ಸುರೇಶ್, ನೇತಾರರಾದ ಕೆ.ಪಿ.ಕುಂಞÂಕಣ್ಣನ್, ಸಿ.ಟಿ.ಅಹಮ್ಮದಲಿ, ಎಂ.ಸಿ.ಖಮರುದ್ದೀನ್, ಖಾದರ್ ಮಾಂಗಾಡ್, ಎ.ಜಿ.ಸಿ, ಬಶೀರ್ ಮೊದಲಾದವರು ಉಪಸ್ಥಿತರಿದ್ದರು.


