ಕಾಸರಗೋಡು: ಮಂಜೇಶ್ವರ ವಿಧಾನಸಭಾ ಉಪಚುನಾವಣೆ ಅ.21 ರಂದು ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ. ಇದರ ಜೊತೆಯಲ್ಲಿ ಕೇರಳದ ಅರೂರ್, ಎರ್ನಾಕುಳಂ, ಕೋನಿ ಮತ್ತು ವಟ್ಟಿಯೂರುಕಾವು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದ್ದು, ಅ.24 ರಂದು ಮತಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
ಪಿ.ಬಿ.ಅಬ್ದುಲ್ ರಜಾಕ್ ಅವರ ನಿಧನದಿಂದ ತೆರವಾಗಿದ್ದ ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಮಂಜೇಶ್ವರ ವಿಧಾನಸಭೆಗೆ ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿಯಾಗಿದ್ದ ಮುಸ್ಲಿಂ ಲೀಗ್ನ ಪಿ.ಬಿ.ಅಬ್ದುಲ್ ರಜಾಕ್ ಗೆಲುವು ಸಾ„ಸಿದ್ದರು. ಪ್ರತಿಸ್ಪರ್ಧಿ ಬಿಜೆಪಿ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್ ಅವರನ್ನು ಕೇವಲ 89 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. ಆದರೆ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಪ್ರಮಾಣದಲ್ಲಿ ಕಳ್ಳಮತದಾನವಾಗಿದೆ ಎಂದು ಆರೋಪಿಸಿ ಕೆ.ಸುರೇಂದ್ರನ್ ನ್ಯಾಯಾಲಯದ ಮೆಟ್ಟಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಯುತ್ತಿತ್ತು. ಹಲವರನ್ನು ನ್ಯಾಯಾಲಯದಲ್ಲಿ ವಿಚಾರಣೆ ಮಾಡಲಾಗಿತ್ತು. ಜೊತೆಗೆ ಕೆಲವರಿಗೆ ನ್ಯಾಯಾಲಯ ನೋಟೀಸ್ ಕಳುಹಿಸಿತ್ತು. ಹೀಗಿರುವಂತೆ ಪಿ.ಬಿ.ಅಬ್ದುಲ್ ರಜಾಕ್ ನಿಧನ ಹೊಂದಿದರು. ಈ ಹಿನ್ನೆಲೆಯಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಪಿ.ಬಿ.ಅಬ್ದುಲ್ ರಜಾಕ್ ಅವರ ನಿಧನದ ಬಳಿಕ ಕೆ.ಸುರೇಂದ್ರನ್ ಹೈಕೋರ್ಟ್ಗೆ ಸಲ್ಲಿಸಿದ ಚುನಾವಣಾ ತಕರಾರು ಅರ್ಜಿಯನ್ನು ಹಿಂತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಉಪಚುನಾವಣೆ ದಿನಾಂಕವನ್ನು ಪ್ರಕಟಿಸಿದೆ.


